ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ತುಳುನಾಡ ರಚನೆಗೆ ಆಗ್ರಹ

Last Updated 2 ನವೆಂಬರ್ 2015, 5:20 IST
ಅಕ್ಷರ ಗಾತ್ರ

ಉಡುಪಿ: ಕರಾವಳಿ ಭಾಗಕ್ಕೆ ಆಗುತ್ತಿರುವ ಅನ್ಯಾಯವನ್ನು ವಿರೋಧಿಸಿ ಹಾಗೂ ಪ್ರತ್ಯೇಕ ತುಳುನಾಡ ರಚನೆಗೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆಯ ಸದಸ್ಯರು ನಗರದಲ್ಲಿ ಭಾನುವಾರ ಕರಾಳ ದಿನವನ್ನು ಆಚರಿಸಿದರು. ಸರ್ವೀಸ್‌ ಬಸ್ ನಿಲ್ದಾಣ ಎದುರು ಪ್ರತಿಭಟನಾ ಸಭೆ ನಡೆಸಿದ ಅವರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಐಕಳ ಬಾವ ಚಿತ್ತರಂಜನ್‌ದಾಸ್‌ ಶೆಟ್ಟಿ ಮಾತನಾಡಿ, ತುಳುನಾಡಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಪರಿಸರಕ್ಕೆ ಮಾರಕ ಆಗುವ ಬೃಹತ್‌ ಕೈಗಾರಿಕಾ ಯೋಜನೆಗಳನ್ನು ಈ ಭಾಗದಲ್ಲಿ ಆರಂಭಿಸಲಾಗಿದ್ದು, ಇಂತಹ ಇನ್ನೂ ಹಲವು ಯೋಜನೆಗಳನ್ನು ಈ ಭಾಗಕ್ಕೆ ತರುವ ಪ್ರಯತ್ನಗಳು ನಡೆಯು ತ್ತಿವೆ. ಇದು ಹೀಗೆ ಮುಂದುವರಿದರೆ ಕರಾವಳಿ ಕಸದ ಬುಟ್ಟಿಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೇತ್ರಾವತಿ ನದಿ ತಿರುವು ಯೋಜನೆಯನ್ನು ಜಾರಿ ಮಾಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಜೀವ ನದಿಯನ್ನು ಬತ್ತಿಸಲು ಮುಂದಾಗಿದ್ದಾರೆ. ಈ ಯೋಜನೆ ಜಾರಿಗೊಂಡರೆ ಭೂಮಿ ಬರಡಲಾಗಲಿದೆ. ಅಲ್ಲದೆ ಮೂಢ ನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೆ ಮುಂದಾಗಿರುವ ಸರ್ಕಾರ ಈ ಭಾಗದ ಜನರ ಆಚರಣೆ ಹಾಗೂ ನಂಬಿಕೆಗೆ ಪೆಟ್ಟು ನೀಡುತ್ತಿದೆ. ನಮ್ಮ ಆಚಾರ ವಿಚಾರಗಳ ಮೇಲೆ ಪ್ರಹಾರ ನಡೆಸಲಾಗುತ್ತಿದೆ ಎಂದು ದೂರಿದರು.

ಸಂಘಟನೆಯ ಮುಖಂಡರಾದ ಅಜರುದ್ದೀನ್‌, ರೋಹಿತ್‌ ಕರಂಬಳ್ಳಿ, ನಜೀರ್‌ ಕೋಟೇಶ್ವರ, ಕೆ. ಗೋಪಾಲಕೃಷ್ಣ, ದಿನೇಶ್‌ ಶೆಟ್ಟಿ ಎರ್ಮಾಳ್‌ ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು: ತುಳುನಾಡ ಎಲ್ಲ ಪ್ರದೇಶಗಳನ್ನು ಒಟ್ಟುಗೂಡಿಸಿ ತುಳುನಾಡು ಪ್ರತ್ಯೇಕ ರಾಜ್ಯ ರಚನೆ ಮಾಡಬೇಕು. ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು. ತುಳುನಾಡ ಜನರ ನಂಬಿಕೆ, ಆಚಾರ ವಿಚಾರಗಳಿಗೆ ಮಾರಕ ಆಗುವ ಮೂಢನಂಬಿಕೆ ನಿಷೇಧ ಕಾಯ್ದೆ ಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು.

ಆಡಳಿತ ಹಾಗೂ ಎಲ್ಲ ವ್ಯವಹಾರಗಳನ್ನು ತುಳು ಭಾಷೆಯ ಲ್ಲಿಯೇ ನಡೆಸಲು ಕ್ರಮ ಕೈಗೊಳ್ಳಬೇಕು. ನೇತ್ರಾವದಿ ನದಿ ತಿರುವು ಯೋಜನೆ ಯನ್ನೂ ಈ ಕೂಡಲೇ ನಿಲ್ಲಿಸಬೇಕು. ತುಳುನಾಡಿನ ಪರಿಸರಕ್ಕೆ ಮಾರಕ ವಾಗುವ ಯಾವುದೇ ಕೈಗಾರಿಕೆಗಳನ್ನು ಆರಂಭಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT