ಬುಧವಾರ, ಸೆಪ್ಟೆಂಬರ್ 18, 2019
23 °C
ಅತಿವೃಷ್ಟಿ ಪರಿಣಾಮ; ₹ 3.95 ಕೋಟಿ ಹಾನಿಯ ಅಂದಾಜು

310 ಶಾಲಾ ಕೊಠಡಿಗಳಿಗೆ ಧಕ್ಕೆ

Published:
Updated:
Prajavani

ಶಿರಸಿ: ವಾರದ ಹಿಂದೆ ಸುರಿದ ಅತಿವೃಷ್ಟಿಯಿಂದಾಗಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಸುಮಾರು 310 ಸರ್ಕಾರಿ ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ₹ 3.95 ಕೋಟಿ ಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.

ಈ ಬಾರಿಯ ಮಳೆ ಅರೆಬಯಲು ಸೀಮೆಯಂತಿರುವ ಹಳಿಯಾಳದ ಮೇಲೆ ವಕ್ರದೃಷ್ಟಿ ಬೀರಿದೆ. ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಹಳಿಯಾಳದಲ್ಲಿ ಸುಮಾರು 118 ಶಾಲಾ ಕೊಠಡಿಗಳಿಗೆ ಧಕ್ಕೆಯಾಗಿದೆ. ಎಡೆಬಿಡದೇ ಸುರಿದ ಮಳೆಯ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಹೆಚ್ಚಿನ ಕಡೆಗಳಲ್ಲಿ ಕೊಠಡಿಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇನ್ನು ಕೆಲವೆಡೆಗಳಲ್ಲಿ ಮರದ ಟೊಂಗೆ, ತೆಂಗಿನ ಮರ ಮುರಿದು ಬಿದ್ದು, ಚಾವಣಿ ಮುರಿದಿದೆ. ಚಾವಣಿ ಮೇಲಿನ ಹೆಂಚು ಒಡೆದಿದೆ. ‘ಎಲ್ಲೂ ತರಗತಿ ನಡೆಸಲು ಸಮಸ್ಯೆಯಿಲ್ಲ. ಹೆಚ್ಚುವರಿ ಕೊಠಡಿ ಅಥವಾ ಇರುವ ಕೊಠಡಿಗಳಲ್ಲೇ ತರಗತಿಗಳು ನಡೆಯುತ್ತಿವೆ. ಗೋಡೆ ಬಿರುಕು ಬಿಟ್ಟಿರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪಾಠಮಾಡದಂತೆ ಸೂಚಿಸಲಾಗಿದೆ. ಇಂತಹ ಕೊಠಡಿಗಳ ಗೋಡೆಗಳನ್ನು ಹೊಸದಾಗಿಯೇ ನಿರ್ಮಿಸಲಾಗುವುದು’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ಪ್ರತಿಕ್ರಿಯಿಸಿದರು.

ನೆರೆಯ ಸಂದರ್ಭದಲ್ಲಿ ಮುಂಡಗೋಡ ತಾಲ್ಲೂಕಿನ ಒಂದು ಕೊಠಡಿ ಹಾಗೂ ಹಳಿಯಾಳ ಕೆಸರೊಳ್ಳಿಯ ಎರಡು ಕೊಠಡಿಗಳನ್ನು ಪರಿಹಾರ ಕೇಂದ್ರ ನಡೆಸಲು ನೀಡಲಾಗಿತ್ತು. ಆ ಸಂದರ್ಭದಲ್ಲಿ ಶಾಲೆಗೆ ರಜೆ ನೀಡಲಾಗಿತ್ತು. ನೆರೆ ಇಳಿದ ಮೇಲೆ ಅಲ್ಲಿದ್ದ ಜನರು ಮನೆಗೆ ತೆರಳಿದ ಕಾರಣ ಶಾಲೆ ನಡೆಸಲು ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದರು.

‘ಶಿರಸಿ ತಾಲ್ಲೂಕಿನ ಬಂಕನಾಳ ಶಾಲೆಯ ಒಂದು ಕೊಠಡಿ ಶಿಥಿಲಾವಸ್ಥೆಯಲ್ಲಿತ್ತು. ಈ ಕೊಠಡಿಗಳಲ್ಲಿ ತರಗತಿ ನಡೆಯುತ್ತಿರಲಿಲ್ಲ. ಅತಿಯಾದ ಮಳೆಯಿಂದ ಈ ಕೊಠಡಿ ಕುಸಿದಿದೆ. ಶಾಲೆಯಲ್ಲಿರುವ ಇನ್ನುಳಿದ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಹೇಳಲಾಗುತ್ತಿದೆ. ಕೆಎಚ್‌ಬಿ ಕಾಲೊನಿಯ ಶಾಲೆಯ ಬಾವಿ ಕುಸಿದಿದೆ. ಈ ಬಾವಿ ನೀರು ಬಳಕೆ ಮಾಡದ ಕಾರಣ ಶಾಲೆಗೆ ತೊಂದರೆಯಾಗಿಲ್ಲ. ಮಕ್ಕಳು ಆ ಕಡೆ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ತಿಳಿಸಿದರು.

 

 

Post Comments (+)