ಗುರುವಾರ , ಜನವರಿ 27, 2022
27 °C

ಕದ್ರಾ, ಕೊಡಸಳ್ಳಿ ಕೆ.ಪಿ.ಸಿ ಗುತ್ತಿಗೆ ಕಾರ್ಮಿಕರ ನಿಟ್ಟುಸಿರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ತಾಲ್ಲೂಕಿನ ಕದ್ರಾ ಮತ್ತು ಕೊಡಸಳ್ಳಿ ವಿದ್ಯುತ್ ಉತ್ಪಾದನಾ ಕೇಂದ್ರಗಳ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ಪಾವತಿ ಬಗ್ಗೆ ಒಡಂಬಡಿಕೆ ಮಾಡಲಾಗಿದೆ. ಈ ಸಂಬಂಧ ಕರಾರು ಪತ್ರಕ್ಕೆ ಆಡಳಿತ ಮಂಡಳಿ ಮತ್ತು ಕಾರ್ಮಿಕ ಮುಖಂಡರು ಶನಿವಾರ ಸಹಿ ಮಾಡಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಸತೀಶ ಸೈಲ್ ತಿಳಿಸಿದ್ದಾರೆ.

‘ಎರಡೂ ಕಡೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರಿಗೆ ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡದೇ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಗಮನಕ್ಕೆ ಹಲವು ಬಾರಿ ತರಲಾಗಿತ್ತು. ಆದರೂ ಸ್ಪಂದಿಸದ ಕಾರಣ, ಶನಿವಾರ ಕದ್ರಾದಲ್ಲಿ ನೂರಾರು ಕಾರ್ಮಿಕರೊಂದಿಗೆ ಧರಣಿ ನಡೆಸಲಾಯಿತು’ ಎಂದು ಹೇಳಿದ್ದಾರೆ.

‘ಸ್ಥಳಕ್ಕೆ ಭೇಟಿ ನೀಡಿದ ಆಡಳಿತ ವರ್ಗದ ಅಧೀಕ್ಷಕ ಎಂಜಿನಿಯರ್ ಶ್ರೀಧರ ಕೋರಿ ಮತ್ತು ಇತರ ಉನ್ನತ ಅಧಿಕಾರಿಗಳು ಧರಣಿ ನಿರತರ ಬೇಡಿಕೆಯನ್ನು ಪರಿಗಣಿಸಿದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪ್ರತಿ ತಿಂಗಳ ಮೊದಲ ವಾರದಲ್ಲಿ ನೀಡುವುದು, ನುರಿತ, ಅರೆ ಕೌಶಲ, ಉನ್ನತ ನುರಿತ ಕಾರ್ಮಿಕರಿಗೆ ಸರ್ಕಾರ ನಿಗದಿ ಪಡಿಸಿದ ವೇತನವನ್ನು ನೀಡುವುದು, ಕಾಲಕಾಲಕ್ಕೆ ತುಟ್ಟಿ ಭತ್ಯೆಯನ್ನು ಕಡಿತ ಮಾಡದೇ ಪಾವತಿಸುವುದು, ನಿಗದಿತ ದರದಲ್ಲಿ ಪಿ.ಎಫ್, ಇ.ಎಸ್.ಐ ವಂತಿಗೆಯನ್ನು ಗುತ್ತಿಗೆದಾರರು ಪಾವತಿಸಲು ಒಡಂಬಡಿಕೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

‘ಪ್ರತಿ ತಿಂಗಳು ನೀಡಲಾಗುವ ವೇತನದ ಪ್ರತಿಯನ್ನು ಕೆ.ಪಿ.ಸಿ ಅಧಿಕಾರಿಗಳ ಸಹಿಯೊಂದಿಗೆ ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸುವುದು, ನಿಯಮ ಉಲ್ಲಂಘಿಸುವ ಗುತ್ತಿಗೆದಾರರ ಬಾಕಿ ಬಿಲ್ ತಡೆ ಹಿಡಿದು ಕಾರ್ಮಿಕರ ಬಾಕಿ ವೇತನ ಪಾವತಿಸುವ ಒಪ್ಪಂದಕ್ಕೆ ಬರಲಾಗಿದೆ’ ಎಂದು ತಿಳಿಸಿದ್ದಾರೆ.

‘ಸ್ಥಳೀಯವಾಗಿ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲಾಗುವುದು. ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ನಿರ್ಣಯಗಳ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.