ಮುಖ್ಯಮಂತ್ರಿ ಕುಮಾರಸ್ವಾಮಿಗೆ ಜಿಲ್ಲೆಗೆ ಬರುವ ನೈತಿಕ ಹಕ್ಕಿಲ್ಲ: ಅನಂತಕುಮಾರ್

ಶನಿವಾರ, ಏಪ್ರಿಲ್ 20, 2019
32 °C

ಮುಖ್ಯಮಂತ್ರಿ ಕುಮಾರಸ್ವಾಮಿಗೆ ಜಿಲ್ಲೆಗೆ ಬರುವ ನೈತಿಕ ಹಕ್ಕಿಲ್ಲ: ಅನಂತಕುಮಾರ್

Published:
Updated:
Prajavani

ಕಾರವಾರ: ಅಪಾರ ಬೆಂಬಲಿಗರೊಂದಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಅನಂತಕುಮಾರ್ ಹೆಗಡೆ, ನಾಮಪತ್ರದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ ಬುಧವಾರ ಮತ್ತೆ ಮೂರು ನಾಮಪತ್ರಗಳನ್ನು ಸಲ್ಲಿಸಿದರು.

ಪತ್ನಿ ಶ್ರೀರೂಪಾ ಹೆಗಡೆ, ಶಾಸಕಿ ರೂಪಾಲಿ ನಾಯ್ಕ, ವಕೀಲ ಬಿ.ಎಸ್.ಪೈ ಅವರೊಂದಿಗೆ ಜಿಲ್ಲಾ ಚುನಾವಣಾ ಅಧಿಕಾರಿ ಕಚೇರಿಗೆ ಬಂದು ಉಮೇದುವಾರಿಕೆ ಸಲ್ಲಿಸಿದರು. ಮಂಗಳವಾರ ಸಲ್ಲಿಸಿದ್ದ ನಾಮಪತ್ರದಲ್ಲಿ ‘ಅನ್ವಯಿಸುವುದಿಲ್ಲ’ (Not Applicable) ಎಂದು ಪೂರ್ಣವಾಗಿ ಬರೆಯಬೇಕಿದ್ದ ಜಾಗಗಳಲ್ಲಿ ಆಂಗ್ಲ ಭಾಷೆಯಲ್ಲಿ ‘ಎನ್‌ಎ’ (NA) ಎಂದು ಬರೆದಿದ್ದರು. ಅದನ್ನು ಸರಿಪಡಿಸಿದ್ದಾರೆ. ಜತೆಗೆ, ಹಳೆಯ ಅಫಿಡವಿಟ್‌ನಲ್ಲಿದ್ದ ಫೋಟೊವನ್ನು ಬದಲಾಯಿಸಿ ಬೇರೆಯದನ್ನು ಲಗತ್ತಿಸಿದ್ದಾರೆ.

ನಾಮಪತ್ರ ಸಲ್ಲಿಕೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾಮಪತ್ರದಲ್ಲಿ ಯಾವುದೇ ತಪ್ಪು ಆಗಿರಲಿಲ್ಲ. ಒಬ್ಬ ಅಭ್ಯರ್ಥಿಗೆ ನಾಲ್ಕು ನಾಮಪತ್ರ ಸಲ್ಲಿಸಲು ಅವಕಾಶವಿದೆ. ಹೀಗಾಗಿ ಮತ್ತೆ ಮೂರು ನಾಮಪತ್ರಗಳನ್ನು ಸಲ್ಲಿಸಿದ್ದೇನೆ. ಕೆಲವೆಡೆ ಸಣ್ಣರೂಪದಲ್ಲಿ (ಶಾರ್ಟ್ ಫಾರ್ಮ್) ಬರೆದಿರುವುದನ್ನು ಚುನಾವಣಾ ಅಧಿಕಾರಿಯ ಸೂಚನೆಯ ಮೇರೆಗೆ ವಿಸ್ತರಿಸಿ ಬರೆದುಕೊಟ್ಟಿದ್ದೇನೆ’ ಎಂದು ತಿಳಿಸಿದರು.

‘ಕುಮಾರಸ್ವಾಮಿಗೆ ನೈತಿಕ ಹಕ್ಕಿಲ್ಲ’: ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಏ.4ರಂದು ನಾಮಪತ್ರ ಸಲ್ಲಿಸುವಾಗ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗಿರಲಿದ್ದಾರೆ ಎಂದು ಪತ್ರಕರ್ತರು ಗಮನ ಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಹೆಗಡೆ, ‘ಮುಖ್ಯಮಂತ್ರಿಯಾದರೆ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಜಿಲ್ಲೆಗೆ ಬರುತ್ತೇನೆ, ಅರಣ್ಯ ಅತಿಕ್ರಮಣಕಾರರ ಸಮಸ್ಯೆಯನ್ನು ಬಗೆಹರಿಸುವುದಾಗಿ ಕುಮಾರಸ್ವಾಮಿ ಹೇಳಿದ್ದರು. ಆದರೆ, ಈವರೆಗೂ ಬರಲಿಲ್ಲ. ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಘೋಷಿಸಿದ್ದರು. ಆದರೆ, ಯಾರದ್ದೂ ಮನ್ನಾ ಆಗಿಲ್ಲ. ಬದಲಾಗಿ, ಸಾಲ ಬಾಕಿ ಇರುವ ರೈತರಿಗೆ ಸೊಸೈಟಿಗಳಿಂದ ನೊಟೀಸ್ ಜಾರಿ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಅವರಿಗೆ ಜಿಲ್ಲೆಗೆ ಬರುವ ನೈತಿಕ ಹಕ್ಕು ಇಲ್ಲ. ಒಬ್ಬ ಮುಖ್ಯಮಂತ್ರಿಯಾಗಿಯಷ್ಟೇ ಬರಬಹುದು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !