ಶುಕ್ರವಾರ, ನವೆಂಬರ್ 22, 2019
22 °C
ಅನುದಾನದ ಕೊರತೆ; ಐತಿಹಾಸಿಕ ಸಂಶೋಧನೆಗೆ ಸಿಗದ ಮಾನ್ಯತೆ

ಬನವಾಸಿ ಅಭಿವೃದ್ಧಿ ಪ್ರಾಧಿಕಾರ ನಾಮಕಾವಾಸ್ಥೆ

Published:
Updated:
Prajavani

ಶಿರಸಿ: ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ಅಭಿವೃದ್ಧಿಗೆಂದು ರಚನೆಯಾಗಿದ್ದ ಬನವಾಸಿ ಅಭಿವೃದ್ಧಿ ಪ್ರಾಧಿಕಾರವು ನಾಮಕಾವಾಸ್ಥೆ ಎಂಬಂತಾಗಿದೆ. ಪ್ರಾಧಿಕಾರದ ಮೂಲಕ ಐತಿಹಾಸಿಕ ತಾಣದ ಅಭಿವೃದ್ಧಿ ಸಾಕಾರಗೊಳ್ಳಬಹುದೆಂಬ ಇತಿಹಾಸ ಅಧ್ಯಯನಕಾರರಿಗೆ ನಿರಾಸೆಯಾಗಿದೆ.

ರಚನೆಯಾಗಿ ಐದು ವರ್ಷಗಳಲ್ಲಿ ಪ್ರಾಧಿಕಾರಕ್ಕೆ ಕೇವಲ ₹ 5 ಕೋಟಿ ಮಾತ್ರ ಅನುದಾನ ದೊರೆತಿದೆ. 2014ರಲ್ಲಿ ಕದಂಬೋತ್ಸವದ ಉದ್ಘಾಟನೆಗೆ ಬನವಾಸಿಗೆ ಬಂದಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಘೋಷಣೆ ಮಾಡಿದ್ದರು. ಆದರೆ, ಅದಾದ ನಂತರ 2017–18ನೇ ಸಾಲಿನ ಬಜೆಟ್‌ನಲ್ಲಿ ಪ್ರಾಧಿಕಾರಕ್ಕೆ ₹ 5 ಕೋಟಿ ಅನುದಾನ ಘೋಷಣೆಯಾಗಿತ್ತು.

ಪ್ರಾಧಿಕಾರವು ಅಧಿಕೃತ ಅನುಮೋದನೆ ಪಡೆಯುವಲ್ಲಿ ಆಗಿನ ಶಾಸಕರಾಗಿದ್ದ ಶಿವರಾಮ ಹೆಬ್ಬಾರ್ ವಿಶೇಷ ಶ್ರಮ ವಹಿಸಿದ್ದರು. ಆದರೆ, ಅಧಿಕೃತಗೊಂಡ ಪ್ರಾಧಿಕಾರಕ್ಕೆ ಪ್ರತ್ಯೇಕ ಆಡಳಿತಾಧಿಕಾರಿ ನೇಮಕ, ಹೆಚ್ಚಿನ ಅನುದಾನ ಮರೀಚಿಕೆಯಾಗಿದೆ ಎಂಬುದು ಸ್ಥಳೀಯರ ಆಕ್ಷೇಪ.

ಪ್ರಾಥಮಿಕವಾಗಿ ದೊರೆತಿರುವ ಅನುದಾನವನ್ನು ಧಾರ್ಮಿಕ ಕ್ಷೇತ್ರದ ಪ್ರಮುಖ ರಸ್ತೆಗಳು, ಚರಂಡಿಗಳ ಮರುನಿರ್ಮಾಣ, ಮಧುಕೇಶ್ವರ ದೇವಾಲಯಕ್ಕೆ ನಿತ್ಯ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕೆ ಶೌಚಾಲಯ, ಕುಡಿಯುವ ನೀರಿನ ಘಟಕ ನಿರ್ಮಾಣದಂತಹ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ‘ಪ್ರಾಧಿಕಾರದ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಎರಡು ರಸ್ತೆಗಳು ಉಳಿದಿವೆ. ಬಸ್‌ನಿಲ್ದಾಣದಿಂದ ರಥಬೀದಿಯವರೆಗೆ ಕಾಂಕ್ರೀಟ್ ರಸ್ತೆ, ಇನ್ನೊಂದು ಡಾಂಬರ್ ರಸ್ತೆ ಉಳಿದಿದೆ. ಮಳೆಗಾಲದ ಕಾರಣ ಬಾಕಿ ಉಳಿದಿತ್ತು. ಇನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸತೀಶ ಜಹಾಗೀರದಾರ್ ತಿಳಿಸಿದರು.

‘ಒಮ್ಮೆ ದೊರೆತಿರುವ ಅನುದಾನ ಹೊರತುಪಡಿಸಿದರೆ, ಅಭಿವೃದ್ಧಿ ಪ್ರಾಧಿಕಾರಕ್ಕೆ ಯಾವುದೇ ಅನುದಾನ ಬಂದಿಲ್ಲ. ‘ಬನವಾಸಿಯೊಂದು ಬೆರಗು’ ಕಾರ್ಯಕ್ರಮ ಬಿಟ್ಟರೆ ಬೇರೆ ಯಾವ ಚಟುವಟಿಕೆ ಪ್ರಾಧಿಕಾರದ ಅಡಿಯಲ್ಲಿ ನಡೆದಿಲ್ಲ. ಅಧ್ಯಯನ ಕೇಂದ್ರ ಸ್ಥಾಪನೆ, ಉತ್ಖನನ, ಕದಂಬ ಪ್ರತಿಮೆ ನಿರ್ಮಾಣ, ಗ್ರಂಥಾಲಯ ನಿರ್ಮಾಣ, ವರದಾ ನೀರಿನ ವೈಜ್ಞಾನಿಕ ಸಂಗ್ರಹಣೆ ಹಾಗೂ ಕುಡಿಯುವ ನೀರು ಸರಬರಾಜು ವ್ಯವಸ್ಥೆ, ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಕಚೇರಿ ನಿರ್ಮಾಣ, ಮಯೂರವರ್ಮ ಬಯಲು ರಂಗ ಮಂದಿರ ನಿರ್ಮಾಣ, ಪ್ರವಾಸಿ ತಾಣಗಳ ಮಾಹಿತಿ ಕೇಂದ್ರ ಸ್ಥಾಪನೆ, ಸಭಾಂಗಣ ನಿರ್ಮಾಣ, ಐತಿಹಾಸಿಕ ಥೀಮ್ ಪಾರ್ಕ್ ನಿರ್ಮಾಣ ಸೇರಿ ಜಿಲ್ಲಾಡಳಿತ ಸಲ್ಲಿಸಿದ್ದ ₹ 100 ಕೋಟಿ ಪ್ರಸ್ತಾವಕ್ಕೆ ಸರ್ಕಾರ ಅನುದಾನ ನೀಡಬೇಕು’ ಎಂದು ಕದಂಬ ಸೈನ್ಯ ಸಂಘಟನೆ ಸಂಚಾಲಕ ಉದಯಕುಮಾರ ಕಾನಳ್ಳಿ ಒತ್ತಾಯಿಸಿದರು.

‘ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ₹ 1 ಕೋಟಿ ಘೋಷಣೆಯಾಗಿದ್ದರೂ, ಅದು ಬಿಡುಗಡೆಯಾದ ಬಗ್ಗೆ ಮಾಹಿತಿಯಿಲ್ಲ. ರಸ್ತೆ, ಗಟಾರ ಮೀರಿದ ಸಮಗ್ರ ಅಭಿವೃದ್ಧಿ ಪ್ರಾಧಿಕಾರದಿಂದ ಆಗಬೇಕು. ಪ್ರಾಧಿಕಾರ ರಚಿಸಿ ಮೂಗಿಗೆ ತುಪ್ಪ ಒರೆಸುವ ಬದಲಾಗಿ, ರಾಜಕೀಯ ಮೀರಿ ಕನ್ನಡದ ಪ್ರಥಮ ರಾಜಧಾನಿ ಅಭಿವೃದ್ಧಿ ಕಾಣಬೇಕು. ಸರ್ಕಾರಗಳು ಈ ಹಿಂದೆ ರಚಿಸಿರುವ ಅನೇಕ ಪ್ರಾಧಿಕಾರಗಳಂತೆ ಇದೂ ಒಂದಾಗಬಾರದು’ ಎಂದು ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)