ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಗೇಮ್‌ಗಾಗಿ ಬ್ಯಾಂಕ್‌ಗೆ ₹2.69 ಕೋಟಿ ವಂಚನೆ: ಬ್ಯಾಂಕ್ ಅಧಿಕಾರಿ ಬಂಧನ!

Last Updated 20 ಸೆಪ್ಟೆಂಬರ್ 2022, 5:02 IST
ಅಕ್ಷರ ಗಾತ್ರ

ಕಾರವಾರ: ತನ್ನ ಪತ್ನಿಯ ಖಾತೆಗೆ ಅಕ್ರಮವಾಗಿ ₹ 2.69 ಕೋಟಿಗೂ ಅಧಿಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿ ನಾಪತ್ತೆಯಾಗಿದ್ದ, ‌ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದ ಸಹಾಯಕ ವ್ಯವಸ್ಥಾಪಕನನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಸೋಮವಾರ ಬಂಧಿಸಿದ್ದಾರೆ. ಈ ಹಣವನ್ನು ‘ಆನ್‌ಲೈನ್ ಗೇಮ್‌ನಲ್ಲಿ ಕಳೆದುಕೊಂಡಿದ್ದೇನೆ’ ಎಂದು ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕುಮಾರ್ ಬೋನಾಲ್ (33) ಬಂಧಿತ ಆರೋಪಿ. ಬ್ಯಾಂಕ್ ಆಫ್ ಬರೋಡಾವು, ಯಲ್ಲಾಪುರದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಹೊಂದಿರುವ ಚಾಲ್ತಿ ಖಾತೆಯಿಂದ ಅಕ್ರಮವಾಗಿ ತನ್ನ ಹೆಂಡತಿಯ ಖಾತೆಗೆ ಈ ಹಣವನ್ನು ವರ್ಗಾವಣೆ ಮಾಡಿದ್ದರು. ಆರೋಪಿಯು ಸಹೋದ್ಯೋಗಿಗಳ ಪಾಸ್‌ವರ್ಡ್ ದುರ್ಬಳಕೆ ಮಾಡಿಕೊಂಡು ಕೃತ್ಯ ಎಸಗಿದ್ದರು. ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಬ್ಯಾಂಕ್ ಆಫ್ ಬರೋಡಾ ಶಾಖೆಯ ವ್ಯವಸ್ಥಾಪಕರು ಪೊಲೀಸರಿಗೆ ಸೆ.11ರಂದು ದೂರು ನೀಡಿದ್ದರು.

ತನ್ನ ಹೆಂಡತಿ ರೇವತಿ ಪ್ರಿಯಾಂಕಾ ಗೊರ‍್ರೆ ಆಂಧ್ರಪ್ರದೇಶದ ಪ್ರಕಾಶಮ್‌ ಜಿಲ್ಲೆಯ ಚಿರಾಲದ ಎಸ್‌.ಬಿ.ಐ ಶಾಖೆಯಲ್ಲಿ ಹೊಂದಿರುವ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾಗ ಹಣವನ್ನು ಸಂಪೂರ್ಣವಾಗಿ ವಿದ್‌ಡ್ರಾ ಮಾಡಿದ್ದು ಕಂಡುಬಂದಿತ್ತು.

ಈ ಬಗ್ಗೆ ತನಿಖೆ ಮುಂದುವರಿಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರು ನೇತೃತ್ವದಲ್ಲಿ ಪಿ.ಎಸ್.ಐ ಅಮೀನಾಸಾಬ್ ಎಂ.ಅತ್ತಾರ್, ಪ್ರೊಬೆಷನರಿ ಪಿ.ಎಸ್.ಐ ಉದಯ.ಡಿ ಹಾಗೂ ಸಿಬ್ಬಂದಿ ಬಸವರಾಜ, ಮಹ್ಮದ್ ಶಫಿ, ಗಜಾನನ, ಶೋಭಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ತನಿಖಾ ತಂಡವನ್ನು ಎಸ್.ಪಿ ಡಾ.ಸುಮನ್ ಪೆನ್ನೇಕರ್, ಎ.ಎಸ್.ಪಿ ಬದ್ರಿನಾಥ್, ಶಿರಸಿ ಡಿ.ವೈ.ಎಸ್.ಪಿ ರವಿ ನಾಯ್ಕ ಅಭಿನಂದಿಸಿದ್ದಾರೆ.

ಸಂಸ್ಥೆಗಳಿಗೆ ಸೂಚನೆ:

ಬ್ಯಾಂಕ್, ಸೊಸೈಟಿಗಳಲ್ಲಿ ಕರ್ತವ್ಯ ನಿರ್ವಹಿಸುವವರು ತಮ್ಮ ಲಾಗ್ ಇನ್ ಐ.ಡಿ.ಯನ್ನು ಇತರ ಸಿಬ್ಬಂದಿಗೆ ನೀಡದೇ ಗೌಪ್ಯವಾಗಿ ಇಟ್ಟುಕೊಳ್ಳಬೇಕು. ಸಂಸ್ಥೆಯ ಮುಖ್ಯಸ್ಥರು ಪ್ರತಿದಿನದ ವ್ಯವಹಾರವನ್ನು ಅದೇ ದಿನ ಪರಿಶೀಲಿಸಿ ಸರಿಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಸೂಚಿಸಿದ್ದಾರೆ.

ಸಂಸ್ಥೆಯ ಮುಖ್ಯಸ್ಥರು ಪ್ರತಿ ದಿನದ ವ್ಯವಹಾರಗಳ ಬಗ್ಗೆ ಮೇಲಧಿಕಾರಿಗೆ ವರದಿ ನೀಡಬೇಕು. ಸಿಬ್ಬಂದಿ ಕೆಲಸ ಮುಗಿದ ಬಳಿಕ ಅಥವಾ ಹೊರಗೆ ಹೋಗುವಾಗ ಕಂಪ್ಯೂಟರ್‌ಗಳಿಂದ ತಪ್ಪದೇ ಲಾಗ್ ಔಟ್ ಆಗಬೇಕು. ಸಂಸ್ಥೆಗಳಲ್ಲಿ ಕೆಲಸದ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT