ಬುಧವಾರ, ಸೆಪ್ಟೆಂಬರ್ 18, 2019
25 °C
ಶಿಕ್ಷಕರ ದಿನಾಚರಣೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಮತ

ಅಧ್ಯಾತ್ಮ ಜ್ಞಾನದಿಂದ ಮಕ್ಕಳಿಗೆ ಸಂಸ್ಕಾರ ನೀಡಿ

Published:
Updated:
Prajavani

ಶಿರಸಿ: ಹದಿನೆಂಟು ಶಿಕ್ಷಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಇಬ್ಬರಿಗೆ ವಿಶೇಷ ಪ್ರಶಸ್ತಿ ಹಾಗೂ ಇಬ್ಬರಿಗೆ ಕಟ್ಟಿಮನಿ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ, ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಗುರುವಾರ ಇಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ‌ದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ‘ವ್ಯಕ್ತಿ ಹಾಗೂ ಸಮಾಜದ ಆಧ್ಯಾತ್ಮಿಕ ತಳಹದಿ ಭದ್ರವಾದರೆ ಯಾವುದೇ ಕೆಲಸದಲ್ಲಾದರೂ ಯಶಸ್ಸು ಸಾಧ್ಯ. ಇದು ಶೈಕ್ಷಣಿಕ ಕ್ಷೇತ್ರದಲ್ಲಿ ಮುಖ್ಯವಾದದ್ದು. ಶಿಕ್ಷಕರು ಪಠ್ಯಕ್ಕೆ ಸೀಮಿತವಾಗದೇ, ಆಧ್ಯಾತ್ಮಿಕ ಜ್ಞಾನ ಬೆಳೆಸಿಕೊಂಡು ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು. ಬಹುಮುಖಿ ವ್ಯಕ್ತಿತ್ವದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಕ್ಕೆ ಮಾದರಿಯಾಗಿದ್ದವರು. ಅವರ ಜೀವನ ಎಲ್ಲರಿಗೂ ಆದರ್ಶಪ್ರಾಯವಾಗಿದೆ’ ಎಂದರು.

ಹಿಂದಿನ ನಾಲ್ಕೈದು ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರ ನಿರ್ಲಕ್ಷಿತಗೊಂಡಿದೆ. ಆಗಿನ ಶೈಕ್ಷಣಿಕ ನಿಯಮಗಳು ಶಿಕ್ಷಕರಿಗೆ ತೊಡಕಾಗಿವೆ. ಶೈಕ್ಷಣಿಕ ವರ್ಷದ ಅರ್ಧ ಮುಗಿದಿದೆ. ವರ್ಗಾವಣೆ ನೀತಿಯನ್ನು ಏನು ಮಾಡಬೇಕು ಎಂಬುದು ಗೊಂದಲವಾಗಿದೆ. ಶಿಕ್ಷಣ ಸಚಿವ ಸುರೇಶಕುಮಾರ್‌ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರು: ಚಂದ್ರಕಲಾ ಶೇಟ್, ಲಂಬೋದರ ಪಟಗಾರ, ಸುಬ್ರಹ್ಮಣ್ಯ ಭಟ್ಟ, ಪ್ರಕಾಶ ಪವಾರ, ರಾಮಾ ಬಂಟ, ಬಡೇಸಾಬ್ ಹುಸೇನ್‌ಸಾಬ್ ಬಾಗವಾನ, ತಾರಾ ಭಟ್ಟ, ಶ್ರೀಕಾಂತ ನಾಯ್ಕ, ನಾರಾಯಣ ಶೇರುಗಾರ, ಗೀತಾ ಹೆಗಡೆ, ಜಿ.ಕೆ.ಬಡಿಗೇರ, ಗಣೇಶ ಕೊಡಿಯಾ, ಎಂ.ಕೆ.ಪುಟ್ಟಯ್ಯ, ಅನಿತಾ ಸಿರ್ಸಿಕರ್, ಚಂದ್ರಶೇಖರ ಹೆಗಡೆ, ಪರಿಮಳಾ ಪಾಟೀಲ, ಶೋಭಾ ದಡೂತಿ, ವಿಷ್ಣು ಪಟಗಾರ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಪ್ರಭಾಕರ ಭಟ್ಟ, ಕೃಷ್ಣಮೂರ್ತಿ ಹೆಗಡೆ ಅವರಿಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವಿಶೇಷ ಶಿಕ್ಷಕ ಪ್ರಶಸ್ತಿ, ಯಶೋದಾ ನಾಯ್ಕ ಹಾಗೂ ನಾಗರಾಜ ನಾಯ್ಕ ಅವರಿಗೆ ಕಟ್ಟಿಮನಿ ಪ್ರತಿಷ್ಠಾನದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅರುಣೋದಯ ಟ್ರಸ್ಟ್ ನೀಡುವ ಪಾಂಡುರಂಗ ಪ್ರಶಸ್ತಿಯನ್ನು ರಾಜಪ್ಪ ಎಚ್, ಎಂ.ಬಿ.ನಾಯಕ ಅವರಿಗೆ ವಿತರಿಸಲಾಯಿತು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಉಷಾ ಹೆಗಡೆ, ಬಸವರಾಜ ದೊಡ್ಮನಿ, ರೂಪಾ ನಾಯ್ಕ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಸದಸ್ಯರಾದ ರವಿ ಹಳದೋಟ, ನಾಗರಾಜ ನಾಯ್ಕ, ಡಯಟ್ ಪ್ರಾಚಾರ್ಯ ಬಿ.ವಿ.ನಾಯ್ಕ, ಬಿಇಒ ಸದಾನಂದ ಸ್ವಾಮಿ, ಶಿಕ್ಷಕರ ಸಂಘದ ಪ್ರಮುಖರಾದ ದಿನೇಶ ನಾಯ್ಕ, ಬಿ.ವಿ.ಗಣೇಶ, ಮಂಜುನಾಥ ಸ್ವಾಮಿ ಇದ್ದರು. ಡಿಡಿಪಿಐ ದಿವಾಕರ ಶೆಟ್ಟಿ ಸ್ವಾಗತಿಸಿದರು.

‘ವರ್ಗಾವಣೆ ನೀತಿ ವೈಜ್ಞಾನಿಕವಾಗಿರಲಿ’

ಶಿಕ್ಷಕರಿಗಾಗಿ ಪ್ರತ್ಯೇಕ ಗುರುಭವನ ನಿರ್ಮಿಸಬೇಕು. ಚುನಾವಣೆ ಹೊರತುಪಡಿಸಿ ಅನ್ಯ ಇಲಾಖೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳದಂತೆ ಸುತ್ತೋಲೆ ಹೊರಡಿಸಬೇಕು. ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆ ಆಚರಿಸಬೇಕು. ಶಿಕ್ಷಕರ ವರ್ಗಾವಣೆ ನೀತಿಯನ್ನು ವೈಜ್ಞಾನಿಕವಾಗಿ ನಡೆಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ ಹೆಗಡೆ ಒತ್ತಾಯಿಸಿದರು.

Post Comments (+)