ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾ ವಿಸ್ತರಣೆಗೆ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ವಿರೋಧ

ಸ್ವರ್ಣವಲ್ಲಿ ಶ್ರೀಗಳ ಹೋರಾಟಕ್ಕೆ ಬೆಂಬಲ
Last Updated 1 ಡಿಸೆಂಬರ್ 2019, 12:45 IST
ಅಕ್ಷರ ಗಾತ್ರ

ಶಿರಸಿ: ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ 5–6ನೇ ಘಟಕಗಳ ವಿಸ್ತರಣೆಯಿಂದ ಜಿಲ್ಲೆಯ ಪರಿಸರ, ಅರಣ್ಯ, ಜನಜೀವನದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಸ್ವರ್ಣವಲ್ಲಿ ಮಠಾಧೀಶರ ನೇತೃತ್ವದಲ್ಲಿ ನಡೆಯುವ ಈ ಯೋಜನೆ ವಿರೋಧಿ ಹೋರಾಟವನ್ನು ಸಂಪೂರ್ಣ ಬೆಂಬಲಿಸುವುದಾಗಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದ್ದಾರೆ.

ಅಪಾಯಕಾರಿ ಅಣುಸ್ಥಾವರದಿಂದ ಈಗಾಗಲೇ ಜಿಲ್ಲೆಯ ಅನೇಕ ಭಾಗಗಳಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿವೆ. ಕೈಗಾದಿಂದ ಸುತ್ತಲಿನ ನೂರಾರು ಕಿ.ಮೀ ಪ್ರದೇಶದಲ್ಲಿ ಕ್ಯಾನ್ಸರ್ ಸಹಿತ ಹಲವು ಅಪಾಯಕಾರಿ ರೋಗಗಳಿಂದ ಜನರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ 25 ವರ್ಷಗಳಿಂದ ಈ ಭಾಗದಲ್ಲಿ ಸ್ವತಂತ್ರವಾಗಿ, ಸಮಗ್ರವಾಗಿ ಆರೋಗ್ಯ ಸಮೀಕ್ಷೆ ನಡೆದಿಲ್ಲ. ಕೈಗಾ ಅಣುಸ್ಥಾವರದಿಂದ ವಿಶೇಷವಾಗಿ ಕಾರವಾರ, ಯಲ್ಲಾಪುರ, ಶಿರಸಿ, ಜೊಯಿಡಾ, ಅಂಕೋಲಾ ಭಾಗದ ಜಲಮೂಲಗಳು, ನದಿಗಳು ಮಾಲಿನ್ಯಗೊಂಡು, ಅದರಿಂದ ವ್ಯಾಪಕವಾಗಿ ಜಲಚರಗಳು ಸಾವು ಕಂಡಿವೆ. ಈಗಾಗಲೇ ಇರುವ ನಾಲ್ಕು ಸ್ಥಾವರಗಳಿಂದ ಸಾವಿರಾರು ಎಕರೆ ಪಶ್ಚಿಮಘಟ್ಟದ ಅಮೂಲ್ಯ ಕಾಡುಗಳು ಬಲಿಯಾಗಿವೆ. ಇನ್ನು 5-6 ನೇ ಘಟಕ ನಿರ್ಮಾಣ ಹಾಗೂ ಕೇಬಲ್ ಅಳವಡಿಕೆಗೆ ಮತ್ತೆ ಸಾವಿರಾರು ಎಕರೆ ಕಾಡು ನಾಶವಾಗುವ ಸಾಧ್ಯತೆಯಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈಗಾಗಲೇ ಪರಿಸರದ ಅಸಮತೋಲನದಿಂದ ಜಿಲ್ಲೆಯಲ್ಲಿ ಜಲಕ್ಷಾಮ ಆಗಾಗ ಕಾಣಿಸಿಕೊಳ್ಳುತ್ತಿದೆ. ಹಲವು ಯೋಜನೆಗಳಿಂದ ಉತ್ತರ ಕನ್ನಡ ನಿರಾಶ್ರಿತರ ಜಿಲ್ಲೆಯಾಗಿದ್ದು, ಈಗಲಾದರೂ ಇಂಥ ಅಪಾಯಕಾರಿ ಯೋಜನೆ ತಡೆಯದೇ ಇದ್ದರೆ ಜಿಲ್ಲೆಯ ಜನರು ಗುಳೆ ಹೋಗುವ ಪರಿಸ್ಥಿತಿ ಬರಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗಾದ 5-6 ನೇ ಘಟಕಗಳ ಸ್ಥಾಪನೆಗೆ ಉತ್ಸಾಹ ತೋರುತ್ತಿದ್ದರೂ, ಜನಪ್ರತಿನಿಧಿಗಳು ಮೌನವಹಿಸಿರುವುದು ಆಶ್ಚರ್ಯ ತಂದಿದೆ. ಸ್ವರ್ಣವಲ್ಲಿ ಶ್ರೀಗಳ ಪಕ್ಷಾತೀತ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ವಿನಂತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT