ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿಯ ನಿರೀಕ್ಷೆಯಲ್ಲಿ ಭೀಮಕೋಲ್ ಕೆರೆ

Last Updated 12 ಜುಲೈ 2021, 15:37 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಹಣಕೋಣ ಗ್ರಾಮದ ಭೀಮಕೋಲ್‌ನಲ್ಲಿರುವ ಬೃಹತ್ ಕೆರೆ ಈಗ ಪಾಳುಬಿದ್ದಿದೆ. ನೀರು ಕೋಡಿ ಹರಿಯಲು ನಿರ್ಮಿಸಲಾಗಿರುವ ಕಾಂಕ್ರೀಟ್ ಹಾಸು, ಸಂಪೂರ್ಣ ಕಿತ್ತುಹೋಗಿದೆ. ಗೇಟ್‌ಗಳು ತುಕ್ಕುಹಿಡಿದಿದ್ದು, ಕೆರೆಯ ಗರಿಷ್ಠ ಮಟ್ಟದಲ್ಲಿ ನೀರು ಸಂಗ್ರಹಿಸಲು ಸಾಧ್ಯವಿಲ್ಲದಂತಾಗಿದೆ.

ಬೆಟ್ಟದ ಮೇಲೆ, ಸುಂದರವಾದ ತಾಣದಲ್ಲಿರುವ ಈ ಕೆರೆಯು ವಿಶಾಲವಾಗಿದ್ದು, 2008ರಲ್ಲಿ ಅಂದಾಜು ₹ 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಆದರೆ, ಸೂಕ್ತ ನಿರ್ವಹಣೆ ಇಲ್ಲದೇ ಕೆರೆಯು ಕೆಳಭಾಗದ ಜನರಿಗೆ ಬಳಕೆಗೆ ಬಾರದಂತಾಗಿದೆ. ಕೆರೆಯಿಂದ ಕೃಷಿ ಜಮೀನುಗಳಿಗೆ ನೀರು ಹರಿಸಲು ನಿರ್ಮಿಸಲಾಗಿದ್ದ ಕಾಲುವೆಗಳಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದಿವೆ. ಇದರಿಂದ ಬೇಸಿಗೆಯಲ್ಲಿ ನೂರಾರು ಎಕರೆ ಕೃಷಿ ಜಮೀನಿಗೆ ನೀರು ಸಿಗುತ್ತಿಲ್ಲ.

ಈ ಭಾಗದಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಅಲ್ಲದೇ ಇಡೀ ಹಣಕೋಣ ಗ್ರಾಮದಲ್ಲಿ ಉಪ್ಪು ನೀರಿನ ಸಮಸ್ಯೆಯಿದೆ. ಹಾಗಾಗಿ ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಅದರ ಬದಲು, ಭೀಮಕೋಲ್ ಕೆರೆಯಿಂದಲೇ ಸಿಹಿ ನೀರು ಹರಿಸಬಹುದು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ಕೆರೆಯ ಕೆಳಭಾಗದಲ್ಲಿ ಕಲ್ಲಂಗಡಿ, ಭತ್ತ ಬೆಳೆಯಲಾಗುತ್ತದೆ. ಅವುಗಳಿಗೂ ನೀರಿನ ಕೊರತೆ ಎದುರಾಗುತ್ತದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜನಾ ಪವಾರ್, ‘ಇದೇ ಕೆರೆಯಿಂದ ಬೇಸಿಗೆಯಲ್ಲಿ ಕುಡಿಯುವ ನೀರು ಕೊಡುವಂತೆ ಬೇಡಿಕೆಯಿದೆ. ಆದರೆ, ಟ್ಯಾಂಕ್ ನಿರ್ಮಿಸಲು ಸೂಕ್ತ ಜಾಗ ಸಿಕ್ಕಿಲ್ಲ. ಯಾರಾದರೂ ಸ್ಥಳ ನೀಡಿದರೆ ಅನುಕೂಲವಾಗುತ್ತದೆ. ಹಾಗಾಗಿ ಕೆರೆಯ ನೀರು ಬಳಕೆಯಾಗುತ್ತಿಲ್ಲ’ ಎಂದರು.

ಕೆರೆಯ ಎದುರು ಭಾಗವು ನಯನ ಮನೋಹರವಾಗಿದ್ದು, ಈ ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲೂ ಅವಕಾಶವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನ ಹರಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT