ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕಿಸಿದವರೇ ಕಾಲು ಹಿಡಿದರು: ಬಿಜೆಪಿ ರಾಜ್ಯ ಘಟಕದ ವಕ್ತಾರ ಪ್ರಮೋದ ಹೆಗಡೆ ವ್ಯಂಗ್ಯ

Last Updated 9 ಏಪ್ರಿಲ್ 2019, 12:03 IST
ಅಕ್ಷರ ಗಾತ್ರ

ಶಿರಸಿ: ‘ಹಿರಿಯ ಸಚಿವ ಆರ್.ವಿ.ದೇಶಪಾಂಡೆ ಮುದುಕಾಗಿದ್ದಾರೆ. ಅವರು ಅಧಿಕಾರವನ್ನು ಯುವಕರಿಗೆ ಕೊಡಲಿ ಎಂದು ನಾಲ್ಕು ತಿಂಗಳುಗಳ ಹಿಂದೆ ಹೇಳಿಕೆ ನೀಡಿದ್ದ, ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರು, ಈಗ ದೇಶಪಾಂಡೆಯವರ ಕಾಲು ಹಿಡಿದಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಪ್ರಮೋದ ಹೆಗಡೆ ಟೀಕಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶಪಾಂಡೆ ರಾಜಕೀಯದಲ್ಲಿ ಅನುಭವ ಇರುವವರು. ಅವರ ಬಗ್ಗೆ ಯಕಃಶ್ಚಿತ್ ಮಾತನಾಡಿದ್ದ ಅಸ್ನೋಟಿಕರ್, ಈಗ ಅವರ ಮಾರ್ಗದರ್ಶನದಲ್ಲೇ ಚುನಾವಣೆ ಎದುರಿಸುವಂತಾಗಿದೆ. ಹೇಳಿಸಿಕೊಂಡು ಸುಮ್ಮನಿರುವ ವ್ಯಕ್ತಿತ್ವ ದೇಶಪಾಂಡೆ ಅವರದ್ದಲ್ಲ. ಇದನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅವರು ಏನು ಮಾಡಬೇಕೋ ಅದನ್ನೇ ಮಾಡುತ್ತಾರೆ’ ಎಂದು ಮಾರ್ಮಿಕವಾಗಿ ಹೇಳಿದರು.

ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಹೊಸ ಯೋಜನೆ ನೀಡಿಲ್ಲ. ಇರುವ ಯೋಜನೆಯ ಮುಂದುವರಿದ ಕಾಮಗಾರಿ ಕಿಂಚಿತ್ ಹಣ ನೀಡಿದ್ದಾರೆ. ಹೀಗಿರುವಾಗ ಯಾವ ಆಧಾರದಲ್ಲಿ ಜೆಡಿಎಸ್ ಕ್ಷೇತ್ರದಲ್ಲಿ ಮತ ಯಾಚಿಸಲಿದೆ ಎಂದು ಪ್ರಶ್ನಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ತಿದ್ದುಪಡಿ ತಂದು ಅತಿಕ್ರಮಣಕಾರರಿಗೆ ಹಕ್ಕುಪತ್ರ ಕೊಡಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದ್ದು, ಹೇಗೆ ಅವರ ಮತಯಾಚಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಯ್ದೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅಧಿಕಾರಿಗಳಿಂದ ಕೆಲಸ ಮಾಡಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದ ಪರಿಣಾಮ, ಸಮಸ್ಯೆ ನನೆಗುದಿಗೆ ಬಿದ್ದಿದೆ’ ಎಂದು ನುಣುಚಿಕೊಂಡರು. ತಿದ್ದುಪಡಿ ಸಂಬಂಧ ಸಂಸದರ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಕುರಿತು ಟೀಕಿಸಿದ ಅವರು, ಬಡವರಿಗೆ ವಾರ್ಷಿಕ ₹ 72ಸಾವಿರ ನೆರವಾಗುವ ಯೋಜನೆ ಅಸಾಧ್ಯವಾದದ್ದಾಗಿದೆ. ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿ, ಈ ಯೋಜನೆಗೆ ಹಣ ನೀಡಿದರೂ, ಇದು ಯಶಸ್ವಿಯಾಗದು. ಭಯೋತ್ಪಾದನೆ ನಿಯಂತ್ರಣಕ್ಕೆ ಸಂಬಂಧಿಸಿದ ವಿಶೇಷ ಕಾಯ್ದೆ ರದ್ದು ಮಾಡುವ ಪ್ರಸ್ತಾಪ ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಮಾರಕ ಎಂದು ಹೇಳಿದರು. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ನಗರ ಘಟಕದ ಅಧ್ಯಕ್ಷ ಗಣಪತಿ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ.ಹೆಗಡೆ, ಪ್ರಮುಖರಾದ ರಮಾಕಾಂತ ಭಟ್ಟ, ನಂದನ ಸಾಗರ, ವಿನಾಯಕ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT