ಭಾನುವಾರ, ಸೆಪ್ಟೆಂಬರ್ 25, 2022
30 °C

ಕಾರವಾರ: ಬ್ಲಾಕ್ ಕಾಂಗ್ರೆಸ್ ಸಮಿತಿ ಪುನರ್ ರಚನೆಗೆ ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನವೂ ಸೇರಿದಂತೆ ವಿವಿಧ ಘಟಕಗಳನ್ನು ಸಂಪೂರ್ಣವಾಗಿ ಪುನರ್ ರಚಿಸಲು ಸತೀಶ ಸೈಲ್ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಇದಕ್ಕಾಗಿ 11 ಸದಸ್ಯರು ಇರುವ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು.

ಯಾರಿಗೆ ಯಾವ ಘಟಕದ ಜವಾಬ್ದಾರಿ ವಹಿಸಿಕೊಳ್ಳಲು ಆಸಕ್ತಿಯಿದೆಯೋ ಅವರು ಸಮಿತಿಗೆ ಹೆಸರು ಕೊಡಬೇಕು. ನಂತರ, ಪದಾಧಿಕಾರಿಗಳನ್ನು ನೇಮಿಸುವ ಕುರಿತು ಶೀಘ್ರವೇ ಸಭೆ ಕರೆಯಲು ನಿರ್ಧರಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸತೀಶ ಸೈಲ್, ‘ನಾನು ಶಾಸಕನಾಗಿದ್ದಾಗ ಮಂಜೂರು ಮಾಡಿಸಿಕೊಂಡ ಕಾಮಗಾರಿಗಳನ್ನು ಬಿ.ಜೆ.ಪಿ.ಯವರು ತಮ್ಮ ಅವಧಿಯದ್ದೆಂದು ಪ್ರಚಾರ ಪಡೆಯುತ್ತಿದ್ದಾರೆ. ಅವರು ಮಾತಿನ ಸರದಾರರು. ಮಾತಿನ ಹೊರತಾಗಿ ಮತ್ತೇನೂ ಇಲ್ಲ. ಅವರನ್ನು ಎದುರಿಸಲು, ಈ ಸಭೆಗೆ ಬಂದ ಹಾಗೇ ಮುಂದೆಯೂ ಒಟ್ಟಾಗಿ ಬನ್ನಿ. ನಾವೆಲ್ಲರೂ ಕಾಂಗ್ರೆಸ್ ಪಕ್ಷದಲ್ಲೇ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಇಲ್ಲಿ ಹತ್ತಾರು ಸಮಸ್ಯೆಗಳಿವೆ. ಮರಳಿನ ವಿಚಾರದಲ್ಲಿ ಇಡೀ ಜಿಲ್ಲೆಗೆ ಒಂದು ನಿಯಮವಿದ್ದರೆ, ಕಾರವಾರಕ್ಕೇ ಪ್ರತ್ಯೇಕವಾಗಿದೆ. ನಗರಸಭೆಯ ಕಟ್ಟಡದ ವಿನ್ಯಾಸವನ್ನು ನೋಡಿದರೆ ಬೇಸರವಾಗುತ್ತದೆ. ಇನ್ನು, ವೈದ್ಯಕೀಯ ಕಾಲೇಜಿನಲ್ಲಿ ಕೆಲವೇ ವೈದ್ಯರು ಸರ್ಕಾರಿ ಕೆಲಸ ಮಾಡುತ್ತಿದ್ದಾರೆ. ಇಂಥ ಹಲವು ವಿಚಾರಗಳಿವೆ. ಅವುಗಳ ಬಗ್ಗೆ ಒಟ್ಟಾಗಿ ಹೋರಾಡಬೇಕಿದೆ. ಯಾವುದೇ ಸರ್ಕಾರವಿರಲಿ, ನಮಗೆ ಕೆಲಸ ಮಾಡಿಸಿಕೊಳ್ಳುವ ತಾಕತ್ತಿದೆ. ನಮ್ಮನ್ನು ಗೌರವಿಸುತ್ತಾರೆ’ ಎಂದು ಹೇಳಿದರು.

ಸಭೆಯ ವಿಚಾರವಾಗಿ ಆರಂಭದಲ್ಲಿ ಪಕ್ಷದ ಕೆಲವು ಮುಖಂಡರ ನಡುವೆ ಮಾತಿನ ಚಕಮಕಿಯೂ ನಡೆಯಿತು. ನಗರಸಭೆಯ ಕಾಂಗ್ರೆಸ್ ಸದಸ್ಯರು, ಪಕ್ಷದ ವಿವಿಧ ಹಿರಿಯ ಮುಖಂಡರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.