ಕಾರವಾರ: ಹೊನ್ನಾವರದ ಟೊಂಕದಲ್ಲಿ ನಡೆಯುತ್ತಿರುವ ಖಾಸಗಿ ಬಂದರಿನ ರಸ್ತೆ ಕಾಮಗಾರಿಯಿಂದ ಕಾಸರಕೋಡು ಕಡಲತೀರದ ‘ಬ್ಲೂ ಫ್ಲ್ಯಾಗ್’ ಗರಿಮೆಗೂ ಆತಂಕ ಎದುರಾಗಿದೆ. ಈ ಬಗ್ಗೆ ಸ್ಥಳೀಯರು ಡೆನ್ಮಾರ್ಕ್‌ನ ಕೋಪನ್‌ಹೆಗನ್‌ನಲ್ಲಿರುವ ‘ಬ್ಲೂ ಫ್ಲ್ಯಾಗ್’ನ ಅಂತರರಾಷ್ಟ್ರೀಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಅವರು, ಭಾರತದಲ್ಲಿರುವ ತಮ್ಮ ತಂಡದಿಂದ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಬಂದರಿನ ರಸ್ತೆಯು ಕಾಸರಕೋಡು ‘ಬ್ಲೂ ಫ್ಲ್ಯಾಗ್’ ಕಡಲತೀರದ ಮೂಲಕವೇ ಸಾಗುತ್ತದೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆ ಪಡೆದುಕೊಂಡಿರುವ ಕಡಲತೀರಕ್ಕೆ ತೊಂದರೆಯಾಗಲಿದೆ. ಪ್ರತಿಷ್ಠಿತ ಮನ್ನಣೆಯನ್ನು ದಕ್ಕಿಸಿಕೊಳ್ಳಲು ವಿಧಿಸಲಾಗಿರುವ 33 ಮಾರ್ಗಸೂಚಿಗಳ ಪಾಲನೆ ಸಾಧ್ಯವಿಲ್ಲ. ಹಾಗಾಗಿ, ರಸ್ತೆ ಕಾಮಗಾರಿಯನ್ನು ನಿಲ್ಲಿಸಬೇಕು. ಇದು ಸಾಧ್ಯವಿಲ್ಲ ಎಂದಾದರೆ ಬ್ಲೂ ಫ್ಲ್ಯಾಗ್ ಮನ್ನಣೆಯನ್ನು ರದ್ದು ಮಾಡಬೇಕು’ ಎಂದು ಕಡಲಜೀವ ವಿಜ್ಞಾನ ಸಂಶೋಧಕ ಡಾ.ಪ್ರಕಾಶ ಮೇಸ್ತ ಅವರು ‘ಬ್ಲೂ ಫ್ಯಾಗ್’ನ ಅಂತರರಾಷ್ಟ್ರೀಯ ಸಮಿತಿ ನಿರ್ದೇಶಕ ಜೋಹನ್ ಡುರಾಂಡ್ ಅವರಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಾ.ಪ್ರಕಾಶ ಮೇಸ್ತ, ‘ರಸ್ತೆ ನಿರ್ಮಾಣಕ್ಕಾಗಿ ಕೆಂಪು ಮಣ್ಣು ಮತ್ತು ಕಲ್ಲನ್ನು ಕಡಲತೀರದಲ್ಲಿ ಸುರಿಯಲಾಗಿದೆ. ಮಳೆಗಾಲದಲ್ಲಿ ದೊಡ್ಡ ಅಲೆಗಳು ಬಂದು ಅವುಗಳನ್ನು ಕೊಚ್ಚಿಕೊಂಡು ಹೋಗಲಿವೆ. ಬಳಿಕ ಕಲ್ಲನ್ನು ಸಮುದ್ರವು ದಡಕ್ಕೆ ತಂದು ಸುರಿಯಲಿದೆ. ರಸ್ತೆಯಿಂದಾಗ ದೂಳು, ವಾಯು ಮಾಲಿನ್ಯ ಉಂಟಾಗಲಿದೆ. ಹಾಗಾಗಿ ಈ ಕಡಲತೀರದಲ್ಲಿ ಈಜುವುದು ಸೂಕ್ತವಾಗದು’ ಎಂದು ಪ್ರತಿಪಾದಿಸಿದರು.
‘ಬ್ಲೂ ಫ್ಲ್ಯಾಗ್‌ನಂಥ ಪ್ರತಿಷ್ಠಿತ ಮನ್ನಣೆಯನ್ನು ಪಡೆಯುವ ತನಕ ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿ, ಬಳಿಕ ಅವುಗಳನ್ನು ಉಲ್ಲಂಘಿಸುವುದು ಸರಿಯಲ್ಲ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮೋಸ ಮಾಡಿದಂತಾಗುತ್ತದೆ. ಬ್ಲೂ ಫ್ಲ್ಯಾಗ್ ರದ್ದಾದರೆ ಅದೂ ದೊಡ್ಡ ಹಿನ್ನಡೆಯಾಗುತ್ತದೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಲು ಬ್ಲೂ ಫ್ಲ್ಯಾಗ್ ಅಂತರರಾಷ್ಟ್ರೀಯ ಸಮಿತಿಗೆ ಮನವಿ ಮಾಡಿದ್ದೇನೆ’ ಎಂದರು.
‘ಸ್ಥಳ ಪರಿಶೀಲಿಸಲಾಗುವುದು’:‘ಕಾಸರಕೋಡು ಬ್ಲೂ ಫ್ಲ್ಯಾಗ್ ಕಡಲತೀರದ ಮೂಲಕ ರಸ್ತೆ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆಯು ನಿರಾಕ್ಷೇಪಣಾ ಪತ್ರ ನೀಡಿಲ್ಲ. ಬ್ಲೂ ಫ್ಲ್ಯಾಗ್ ಸಮಿತಿಯ ಭಾರತದ ತಂಡದ ಸದಸ್ಯರು ಮಂಗಳವಾರ ಸ್ಥಳ ಪರಿಶೀಲನೆಗೆ ಬರುವ ಸಾಧ್ಯತೆಯಿದೆ. ಅವರೊಂದಿಗೆ ತೆರಳಿ ಎಲ್ಲವನ್ನು ಸ್ಪಷ್ಟಪಡಿಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜಯಂತ್ ತಿಳಿಸಿದ್ದಾರೆ.
*
ಕಾಸರಕೋಡಿನಲ್ಲಿ ರಸ್ತೆ ನಿರ್ಮಾಣದಿಂದ ಬ್ಲೂ ಫ್ಲ್ಯಾಗ್ ಕಡಲತೀರಕ್ಕೆ ಏನೂ ಸಮಸ್ಯೆಯಿಲ್ಲ. ಪ್ರತಿಷ್ಠಿತ ಮನ್ನಣೆಯನ್ನು ಉಳಿಸಿಕೊಳ್ಳಲು ಜಿಲ್ಲಾಡಳಿತವು ಬದ್ಧವಾಗಿದೆ.
– ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.