ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ಥಳೀಯರ ಅನುಕೂಲಕ್ಕಾಗಿ ಕ್ಯಾನ್ಸರ್ ಆಸ್ಪತ್ರೆ’

ಕೈಗಾ ಟೌನ್‌ಶಿಪ್‌ನಲ್ಲಿ ಆಯೋಜಿಸಿದ್ದ ಪತ್ರಕರ್ತರ ರಾಷ್ಟ್ರಮಟ್ಟದ ಕಾರ್ಯಾಗಾರ ಸಮಾರೋಪ
Last Updated 30 ಆಗಸ್ಟ್ 2018, 12:50 IST
ಅಕ್ಷರ ಗಾತ್ರ

ಕಾರವಾರ: ‘ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಚಿಕಿತ್ಸೆ ಪಡೆಯಲು ಮಂಗಳೂರು, ಮಣಿಪಾಲ, ಮುಂಬೈನಂತಹ ದೂರದ ನಗರಗಳಿಗೆ ಪ್ರಯಾಣಿಸಬೇಕಿದೆ. ಅವರ ಅನುಕೂಲಕ್ಕಾಗಿ ನಗರದಲ್ಲಿ ಆಸ್ಪತ್ರೆ ಆರಂಭಿಸುವುದಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ಸೂಕ್ತ ಸ್ಪಂದನೆ ಸಿಗದ ಕಾರಣ ಯೋಜನೆ ಕುಂಟುತ್ತಿದೆ’ ಎಂದು ಮುಂಬೈನ ಟಾಟಾ ಮೆಮೋರಿಯಲ್ ಸೆಂಟರ್‌ನ ಗ್ರಂಥಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಉಮೇಶ್ ಮಹಾಂತಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಕೈಗಾ ಟೌನ್‌ಶಿಪ್‌ನಲ್ಲಿ ಪತ್ರಕರ್ತರಿಗೆ ಆಯೋಜಿಸಲಾದ ರಾಷ್ಟ್ರಮಟ್ಟದ ನಾಲ್ಕು ದಿನಗಳ ಕಾರ್ಯಾಗಾರದ ಕೊನೆಯ ದಿನವಾದ ಗುರುವಾರಹಮ್ಮಿಕೊಳ್ಳಲಾದ ಸಂವಾದ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

‘ಹೊಸದಾಗಿ ಆರಂಭವಾದ ವೈದ್ಯಕೀಯ ಕಾಲೇಜುಗಳಲ್ಲಿಕ್ಯಾನ್ಸರ್ ಚಿಕಿತ್ಸೆಗೆ ಕಡ್ಡಾಯವಾಗಿ ವ್ಯವಸ್ಥೆ ಇರಬೇಕು ಎಂದು ಕೇಂದ್ರ ಸರ್ಕಾರದ ನಿಯಮವಿದೆ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸ್ಥಳದ ಅಭಾವವಿದೆ.ಹೀಗಾಗಿ ಶಿರವಾಡದಲ್ಲಿ ಜಾಗ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಅದಕ್ಕೆ ನಾವು ಒಪ್ಪಿದ್ದೆವು’ ಎಂದು ಅವರು ತಿಳಿಸಿದರು.

‘ಆಸ್ಪತ್ರೆಗೆ ಅಗತ್ಯ ಯಂತ್ರಗಳು, ಸಲಕರಣೆಗಳನ್ನು ಉಚಿತವಾಗಿ ನೀಡುತ್ತೇವೆ. ರಾಜ್ಯ ಸರ್ಕಾರವು ಕಟ್ಟಡ ನಿರ್ಮಿಸಿ ಸಿಬ್ಬಂದಿಯನ್ನು ನೇಮಿಸಿಕೊಂಡರೆ ಸಾಕು. ಅವರಿಗೆ ತರಬೇತಿಯನ್ನೂಉಚಿತವಾಗಿಕೊಡುತ್ತೇವೆ ಎಂದುತಿಳಿಸಿದ್ದೆವು. ಅದಾದ ನಂತರ ಯಾವುದೇ ಬೆಳವಣಿಗೆ ಆಗಿಲ್ಲ. ಇಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಬೇರೆಬೇರೆಯಾಗಿರುವುದು ಪ್ರಕ್ರಿಯೆ ಜಟಿಲವಾಗಲು ಕಾರಣ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಭಾರಜಲಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಡಾ.ಕಾಮಾಚಿ ಮುದಲಿ ಮಾತನಾಡಿ, ‘ವಿಶ್ವದಾದ್ಯಂತ ಸುಮಾರು 400 ಅಣುವಿದ್ಯುತ್ ಘಟಕಗಳು ಐದಾರು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿವೆ.ಕೇವಲ ಮೂರು ಬಾರಿ ಮಾತ್ರ ದುರ್ಘಟನೆಗಳಾಗಿದ್ದು, ನಮ್ಮ ದೇಶದಲ್ಲಿ ಒಂದೂ ಆಗಿಲ್ಲ. ಸ್ವದೇಶಿತಂತ್ರಜ್ಞಾನವು ಸುರಕ್ಷತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಿದೆ’ ಎಂದು ಹೇಳಿದರು.

‘ಕೆಲವರು ಜಪಾನ್‌ನ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಈಗಲೂ ವಿಕಿರಣಗಳ ದುಷ್ಪರಿಣಾಮಗಳಿವೆ. ಹೀಗಾಗಿ ಇಂದಿಗೂ ಮಕ್ಕಳು ಅಂಗವಿಕಲರಾಗಿ ಜನಿಸುತ್ತಿದ್ದಾರೆ ಎಂದು ವಾದಿಸುತ್ತಾರೆ. ಅಲ್ಲಿ ಅಣುಬಾಂಬ್ ಸ್ಫೋಟದಿಂದಾಗಿ ಹೊರಸೂಸಿದ ವಿಕಿರಣಗಳು ಅತ್ಯಂತ ಪ್ರಬಲವಾಗಿದ್ದವು. ಆದರೆ, ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿಅಷ್ಟೊಂದು ಪ್ರಬಲವಾದ ವಿಕಿರಣಗಳನ್ನು ಊಹಿಸಲೂ ಸಾಧ್ಯವಿಲ್ಲ’ ಎಂದರು.

‘ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರುವ ಭಾರತಕ್ಕೆ ಹೆಚ್ಚು ವಿದ್ಯುತ್ ಅಗತ್ಯವಿದೆ. ಅದಕ್ಕೆ ಇಂತಹ ತಂತ್ರಜ್ಞಾನಗಳ ಬಳಕೆ ಅಧಿಕವಾಗಬೇಕು’ ಎಂದು ಅವರು ಪ್ರತಿಪಾದಿಸಿದರು.

ಅಣುಶಕ್ತಿ ಇಲಾಖೆಯ ಸಾರ್ವಜನಿಕ ಜಾಗೃತಿ ವಿಭಾಗದ ಮುಖ್ಯಸ್ಥ ರವಿಶಂಕರ್ ಮಾತನಾಡಿ, ಅಣುಶಕ್ತಿ ಇಲಾಖೆಯು ಸದಾ ನೆರೆಹೊರೆಯವರ ಕಾಳಜಿ ಮಾಡುತ್ತದೆ ಎಂದು ಭರವಸೆ ನೀಡಿದರು.

‘ಜನರ ಆರೋಗ್ಯ ಸುಧಾರಣೆಗೆ’: ದೇಶದ ವಿವಿಧ ಭಾಗಗಳಲ್ಲಿ ಟಾಟಾ ಮೆಮೋರಿಯಲ್ ಸೆಂಟರ್‌ ಆರೋಗ್ಯ ಸಮೀಕ್ಷೆ ಮಾಡುತ್ತಿದೆ. ಅಣು ವಿದ್ಯುತ್ ಉತ್ಪಾದನಾ ಕೇಂದ್ರಗಳು ಇಲ್ಲದಲ್ಲೂ ಈ ಕಾರ್ಯ ಜಾರಿಯಲ್ಲಿದೆ. ಇದನ್ನು ಜನರ ಆರೋಗ್ಯ ಸುಧಾರಣೆಯ ದೃಷ್ಟಿಯಿಂದ ಮಾತ್ರ ಮಾಡಲಾಗುತ್ತಿದೆ ಎಂದು ಡಾ.ಉಮೇಶ್ ಮಹಾಂತಶೆಟ್ಟಿ ಸ್ಪಷ್ಟಪಡಿಸಿದರು.

‍ಪತ್ರಕರ್ತರ ಜತೆ ಸಂವಾದಕ್ಕೂ ಮೊದಲು ಉಪನ್ಯಾಸ ನೀಡಿದ ಅವರು, ‘ಬದಲಾಗುತ್ತಿರುವ ಜೀವನಶೈಲಿಯಿಂದ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ಅಣುವಿದ್ಯುತ್‌ ಉತ್ಪಾದನೆಯ ಒಂದೂ ಘಟಕವಿಲ್ಲ. ಆದರೆ, ಅಲ್ಲಿ ದೇಶದಲ್ಲೇ ಅತ್ಯಧಿಕ ಕ್ಯಾನ್ಸರ್ ರೋಗಿಗಳಿದ್ದಾರೆ. ತಂಬಾಕು ಸೇವನೆ, ಮದ್ಯ ಸೇವನೆ, ಹೆಚ್ಚುತ್ತಿರುವ ಮಾಲಿನ್ಯದಿಂದಾಗಿ ರೋಗಿಗಳು ಹೆಚ್ಚುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು.

‘ಮನಸ್ಥಿತಿ ಬದಲಾಗಲಿ’: ಕೈಗಾ ಅಣು ವಿದ್ಯುತ್ ಸ್ಥಾವರದ ಸ್ಥಾನಿಕ ನಿರ್ದೇಶಕ ಸಂಜಯ್ ಕುಮಾರ್ ಮಾತನಾಡಿ, ‘1,000ಕ್ಕೂ ಅಧಿಕ ಸಿಬ್ಬಂದಿ ಸ್ಥಾವರದಲ್ಲೇ ಕೆಲಸ ಮಾಡುತ್ತಾರೆ. ವಿದ್ಯುತ್ ಉತ್ಪಾದನೆಯ ಪ್ರಕ್ರಿಯೆಗೆ ಬಳಸಿದ ಕಾಳಿ ನದಿಯ ನೀರನ್ನೇ ನಾವು ಪ್ರತಿದಿನ ಕುಡಿಯುತ್ತಿದ್ದೇವೆ. ನಮಗ್ಯಾವುದೇ ರೀತಿಯ ಆರೋಗ್ಯ ಸಮಸ್ಯೆಯಾಗಿಲ್ಲ. ಹೀಗಿರುವಾಗ ಸ್ಥಾವರದಿಂದ ಸಾಕಷ್ಟು ದೂರದಲ್ಲಿ ಇರುವವರಿಗೆ ಆರೋಗ್ಯ ಸಮಸ್ಯೆ ಆಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ಅಣು ವಿದ್ಯುತ್ ಸ್ಥಾವರಗಳ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಭಯ ದೂರವಾಗಬೇಕು. ಇದಕ್ಕೆ ಮನಸ್ಥಿತಿ ಬದಲಾವಣೆ ಮುಖ್ಯ ಎಂದು ಹೇಳಿದರು.

ಕೈಗಾ ಸ್ಥಾವರದ ಮೂರು ಮತ್ತು ನಾಲ್ಕನೇ ಘಟಕಗಳ ಸಹಾಯಕ ನಿರ್ದೇಶಕ ಜೆ.ಆರ್.ದೇಶಪಾಂಡೆ, ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ವಿ.ಪಿ.ವೇಣುಗೋಪಾ‍ಲನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT