ಶನಿವಾರ, ಡಿಸೆಂಬರ್ 14, 2019
22 °C
ಮತ್ತೆ ಕುಸಿದ ಪಾಂಫ್ರೆಟ್ ಮೀನಿನ ದರ: ದುಬಾರಿ ಬೆಲೆ ಹೊತ್ತು ನುಗ್ಗೆಕಾಯಿ ಮಾರುಕಟ್ಟೆಗೆ ಲಗ್ಗೆ

ಕ್ಯಾರೆಟ್ ದರದಲ್ಲಿ ದು‍ಪ್ಪಟ್ಟು ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಒಂದೇ ವಾರದಲ್ಲಿ ಮೀನು ಮತ್ತು ತರಕಾರಿ ದರಗಳಲ್ಲಿ ಹಲವು ಏರುಪೇರು ಕಂಡುಬಂದಿವೆ. ಕ್ಯಾರೆಟ್ ದುಪ್ಪಟ್ಟು ಏರಿಕೆ ಕಂಡು ಗ್ರಾಹಕರಿಗೆ ಬಿಸಿ ಮುಟ್ಟಿಸಿದರೆ, ಪಾಂಫ್ರೆಟ್ ಮೀನು ದರದಲ್ಲಿ ಇಳಿಕೆ ಕಂಡು ಮೀನು ಪ್ರಿಯರಿಗೆ ಸಂತಸ ಮೂಡಿಸಿದೆ. 

ಪ್ರತಿ ಕೆ.ಜಿ.ಗೆ ₹ 70ರಲ್ಲಿ ಬಿಕರಿಯಾಗುತ್ತಿದ್ದ ಕ್ಯಾರೆಟ್ ದರವು ₹ 50ರಷ್ಟು ಜಾಸ್ತಿಯಾಗಿದ್ದು ಸದ್ಯ ₹ 120 ದರದಲ್ಲಿ ಗ್ರಾಹಕರು ಕೊಂಡುಕೊಳ್ಳುತ್ತಿದ್ದಾರೆ. ಒಂದೇ ವಾರದಲ್ಲಿ ಇದರ ಬೆಲೆ ದಿಢೀರ್ ಏರಿಕೆಯಾಗಿದೆ. ಆವಕ ಕಡಿಮೆಯಾಗಿರುವುದೇ ದರ ಏರಿಕೆಗೆ ಕಾರಣ ಎನ್ನಲಾಗಿದೆ. ಪ್ರತಿ ಕೆ.ಜಿ.ಗೆ ₹ 60ರಲ್ಲಿ ಬಿಕರಿಯಾಗುತ್ತಿದ್ದ ಕ್ಯಾಪ್ಸಿಕಂ ಈಗ ₹ 80ರಲ್ಲಿ ಮಾರಾಟವಾಗುತ್ತಿದೆ. ಅಂದರೆ ₹ 20ರಷ್ಟು ಬೆಲೆ ಏರಿಕೆ ಕಂಡಿದೆ. ಹಿಂದಿನ ವಾರ ತುಟ್ಟಿಯಾಗಿದ್ದ ಈರುಳ್ಳಿ ದರವು ಸದ್ಯ ಸ್ಥಿರವಾಗಿದೆ. ಪ್ರತಿ ಕೆ.ಜಿ.ಗೆ ₹ 60 ದರ ಹೊಂದಿದೆ. ಬೀಟ್‌ರೂಟ್ ₹ 10ರಷ್ಟು ಏರಿಕೆ ಕಂಡು ₹ 50ರ ದರದಲ್ಲಿ ಬಿಕರಿಯಾಗುತ್ತಿದೆ.

ಶುಂಠಿ, ಮೆಣಸಿನಕಾಯಿ ಇಳಿಕೆ: ತರಕಾರಿ ದರವು ವಾರದಿಂದ ವಾರಕ್ಕೆ ಏರಿಕೆ ಕಾಣುತ್ತಿರುವ ಚಿಂತೆಯ ನಡುವೆ, ಕೆಲವೊಂದರ ಬೆಲೆ ಇಳಿಕೆಯು ಗ್ರಾಹಕರಲ್ಲಿ ಸಮಾಧಾನ ತಂದಿದೆ. ಪ್ರತಿ ಕೆ.ಜಿ.ಗೆ ₹ 60ರ ದರವನ್ನು ಹೊಂದಿದ್ದ ಮೆಣಸಿನ ಕಾಯಿ ₹ 40ಕ್ಕೆ ಇಳಿದಿದೆ. ಕೆ.ಜಿ.ಗೆ ₹ 120ರಲ್ಲಿ ಮಾರಾಟವಾಗುತ್ತಿದ್ದ ಶುಂಠಿ ₹ 80ಕ್ಕೆ ಕುಸಿದಿದೆ. ಅಂದರೆ ದರದಲ್ಲಿ ಇವು ತಲಾ ₹ 20, ₹ 40ರಷ್ಟು ಇಳಿಕೆ ಕಂಡಿದೆ. ಅಚ್ಚರಿಯ ಏರಿಕೆ ಕಂಡಿದ್ದ ಬೀನ್ಸ್ ಪ್ರತಿ ಕೆ.ಜಿ.ಗೆ ₹ 80ರಲ್ಲಿ ಬಿಕರಿಯಾಗುತ್ತಿತ್ತು. ಅದು ಈಗ ₹ 20ರಷ್ಟು ಇಳಿಕೆಯಾಗಿ ₹ 60ರಲ್ಲಿ ಗ್ರಾಹಕರ ಕೈ ಸೇರುತ್ತಿದೆ. ನುಗ್ಗೆಕಾಯಿಯು ಮಾರುಕಟ್ಟೆಗೆ ಆವಕಗೊಂಡಿದ್ದು ಪ್ರತಿ ಕೆ.ಜಿ.ಗೆ ₹ 350ರ ದರ ಹೊಂದಿದೆ.

ಪಾಂಫ್ರೆಟ್ ಮೀನಿನ ದರ ಇಳಿಕೆ: ಒಂದೇ ಬಾರಿಗೆ ₹ 300ರಷ್ಟು ಏರಿಕೆ ಕಂಡು ಪ್ರತಿ ಕೆ.ಜಿ.ಗೆ ₹ 900ರಷ್ಟು ಹೊಂದಿದ್ದ ಪಾಂಫ್ರೆಟ್ ಮೀನು, ಸದ್ಯ ದರದಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಪ್ರತಿ ಕೆ.ಜಿ.ಗೆ ₹ 600ರಲ್ಲಿ ಸಿಗುತ್ತಿದೆ. ಬಂಗಡೆ ಮೀನು ₹ 100ಕ್ಕೆ ಆರರಿಂದ ಏಳು ಸಿಗುತ್ತಿವೆ. ಸಣ್ಣ ಮೀನು ಒಂದು ಪಾಲಿಗೆ ₹ 300 ಹಾಗೂ ದೊಡ್ಡ ಮೀನು ಒಂದು ಪಾಲಿಗೆ ₹ 700ರಲ್ಲಿ ಬಿಕರಿಯಾಗುತ್ತಿದ್ದ ತೋರ ಮೀನಿನ ದರ ಇಳಿಕೆಯಾಗಿದೆ. ತಲಾ ₹ 200 ಹಾಗೂ ₹ 500ರಲ್ಲಿ ಮಾರಾಟ ಕಾಣುತ್ತಿದೆ. 

ಲೆಪ್ಪೆ, ಶೆಟ್ಲೆ, ಬೆಳುಂಜೆ ಮೀನುಗಳ ದರವಾಗಿ ಸ್ಥಿರವಾಗಿದೆ. ಇವುಗಳು ಒಂದು ಪಾಲಿಗೆ ತಲಾ ₹ 50, ₹ 100 ಹಾಗೂ ₹ 100ರ ದರವನ್ನು ಹೊಂದಿವೆ.  

ಕಾರವಾರ ಮಾರುಕಟ್ಟೆ

ತರಕಾರಿ

ದರ (₹ಗಳಲ್ಲಿ)
ನುಗ್ಗೆಕಾಯಿ 350
ತೊಂಡೆಕಾಯಿ 50
ಆಲೂಗಡ್ಡೆ 30
ಶುಂಠಿ 80
ಬೀನ್ಸ್ 60
ಸೌತೆಕಾಯಿ 40
ಬೆಂಡೆಕಾಯಿ 60
ಟೊಮೆಟೊ 50
ಮೆಣಸಿನಕಾಯಿ 40
ಬೀಟ್‌ರೂಟ್ 50
ಹೂಕೋಸು 40
ಕ್ಯಾಪ್ಸಿಕಂ 80
ಬದನೆಕಾಯಿ 80
ಕ್ಯಾರೆಟ್ 120
ಕ್ಯಾಬೇಜ್ 40
ಬೆಳ್ಳುಳ್ಳಿ 200

**

ತರಕಾರಿ ಒಯ್ಯಲು ಬಂದಾಗ ಕ್ಯಾರೆಟ್ ಖರೀದಿಸುವುದು ಸಾಮಾನ್ಯ. ನಮಗೆ ನೆಚ್ಚಿನ ತರಕಾರಿ ಇದು. ಬೆಲೆ ಅನಿರೀಕ್ಷಿತ ಏರಿಕೆ ಕಂಡಿರುವುದು ತಲೆಬಿಸಿಯಾಗಿದೆ.
-ನಿತ್ಯಾನಂದ ಭಟ್ಟ, ಗ್ರಾಹಕ

**

ಮೀನಿನ ಬೆಲೆ ಇಳಿಕೆ ಕಂಡಿರುವುದು ಗ್ರಾಹಕರಲ್ಲಿ ಮಂದಹಾಸ ಮೂಡಿಸಿರಬಹುದು. ಆದರೆ, ದಿನೇ ದಿನೇ ದರದಲ್ಲಿ ವ್ಯತ್ಯಾಸ ಆಗುತ್ತಿರುವುದರಿಂದ ನಮಗೆ ನಷ್ಟವಾಗುತ್ತಿದೆ.
-ಭಾರತಿ ಹರಿಕಂತ್ರ, ಮೀನು ವ್ಯಾಪಾರಿ

ಪ್ರತಿಕ್ರಿಯಿಸಿ (+)