ಮಂಗಳವಾರ, ಸೆಪ್ಟೆಂಬರ್ 21, 2021
22 °C
ಕಾರವಾರದ 23 ಕಡೆ ಅಳವಡಿಕೆ: ಸದ್ಯ ಕೇವಲ ಎರಡು ಕಾರ್ಯ ನಿರ್ವಹಣೆ

ಕೆಲಸ ನಿಲ್ಲಿಸಿದ ಸಿ.ಸಿ.ಟಿ.ವಿ ಕ್ಯಾಮೆರಾ

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ಭದ್ರತೆಗೆಂದು ಎರಡು ವರ್ಷಗಳ ಹಿಂದೆ ಅಳವಡಿಸಿದ ಸಿ.ಸಿ.ಟಿ.ವಿ ಕ್ಯಾಮೆರಾಗಳು ಈಗ ಇದ್ದೂ ಇಲ್ಲದಂತಾಗಿವೆ. ಒಟ್ಟು 23 ಕ್ಯಾಮೆರಾಗಳಲ್ಲಿ ಸಂಚಾರ ಪೊಲೀಸ್ ಠಾಣೆಯ ಎರಡು ಬದಿಗಳಲ್ಲಿರುವ ಕ್ಯಾಮೆರಾಗಳು ಮಾತ್ರ ಸುಸ್ಥಿತಿಯಲ್ಲಿವೆ. ಉಳಿದ 21 ಕ್ಯಾಮೆರಾಗಳಿಂದ ವಿಡಿಯೊ ದೃಶ್ಯಾವಳಿ ರವಾನೆಯಾಗುತ್ತಿಲ್ಲ.

ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ನಗರಸಭೆ ವತಿಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅವುಗಳ ದೃಶ್ಯಾವಳಿಗಳನ್ನು ಸಂಚಾರ ಪೊಲೀಸ್ ಠಾಣೆಯಲ್ಲಿ ನೋಡಲು ನಿಯಂತ್ರಣ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ಸಂಚಾರ ದಟ್ಟಣೆ, ಮೆರವಣಿಗೆ, ಸೂಕ್ಷ್ಮ ಸಂದರ್ಭಗಳಲ್ಲಿ ಅವುಗಳ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗಿತ್ತು. ಅಲ್ಲದೇ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು, ಸಾಕ್ಷ್ಯ ಸಂಗ್ರಹಿಸಲು ಪೊಲೀಸರಿಗೆ ಅನುಕೂಲವಾಗುತ್ತಿತ್ತು. ಆದರೆ, ಕೆಲವು ತಿಂಗಳಿನಿಂದ ಅವುಗಳು ಕಾರ್ಯ ನಿರ್ವಹಿಸದಿರುವುದು ಹಿನ್ನಡೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಿಂದ ನಗರಕ್ಕೆ ಪ್ರವೇಶ ಪಡೆಯುವ ರಸ್ತೆಗಳ ಪಕ್ಕದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳೂ ಕೆಲಸ ಮಾಡುತ್ತಿಲ್ಲ. ರಾಷ್ಟ್ರೀಯ ಹಿತಾಸಕ್ತಿಯಿರುವ ಎರಡು ಬೃಹತ್ ಯೋಜನೆಗಳು ನಗರದ ಎರಡೂ ದಿಕ್ಕುಗಳಲ್ಲಿವೆ. ಹಾಗಾಗಿ ನಗರಕ್ಕೆ ಬಂದು ಹೋಗುವವರ ಮೇಲೆ ನಿಗಾ ಇಡಲು ಕ್ಯಾಮೆರಾಗಳು ಸಹಕಾರಿಯಾಗಿದ್ದವು.

ಹೆದ್ದಾರಿಯು ನಗರದ ಸಮೀಪದಲ್ಲೇ ಹಾದು ಹೋಗಿರುವ ಕಾರಣ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇಡಲು ಸುಲಭವಾಗಿತ್ತು. ಈ ಕಾರಣಗಳಿಂದ ಕ್ಯಾಮೆರಾಗಳು ನಗರಕ್ಕೆ ಅತ್ಯವಶ್ಯವಾಗಿವೆ. ಆದಷ್ಟು ಶೀಘ್ರವೇ ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡಬೇಕು ಎಂಬುದು ಕಾರವಾರದ ನಿವಾಸಿ ರಮೇಶ ನಾಯ್ಕ ಅವರ ಒತ್ತಾಯವಾಗಿದೆ.

‘ಶೀಘ್ರ ದುರಸ್ತಿ’:

‘ನಗರದ ಸಿ.ಸಿ.ಟಿ.ವಿ. ಕ್ಯಾಮೆರಾಗಳ ನಿರ್ವಹಣೆಗೆ ₹ 3.50 ಲಕ್ಷ ಬೇಕಿದೆ. ಇದಕ್ಕೆ ನಗರಸಭೆಯ ಆಡಳಿತ ಮಂಡಳಿಯ ಅನುಮೋದನೆ ಪಡೆಯಲಾಗಿದೆ. ಅವುಗಳನ್ನು ಅಳವಡಿಸಿದವರೇ ದುರಸ್ತಿ ಮಾಡಲಿದ್ದು, ಶೀಘ್ರವೇ ಕಾರ್ಯ ಪ್ರವೃತ್ತವಾಗುವಂತೆ ಮಾಡಲಾಗುವುದು’ ಎಂದು ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ಧ್ವನಿವರ್ಧಕವಿರುವ ಕಣ್ಗಾವಲು:

ಕಾರವಾರದಲ್ಲಿ ಸಂಚಾರ ದಟ್ಟಣೆ, ಸಂಚಾರ ನಿಯಮಗಳ ಪಾಲನೆಯ ಮೇಲೆ ಕಣ್ಗಾವಲು ಇಡಲು ಧ್ವನಿವರ್ಧಕಗಳಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆಯಿಂದ ಅಳವಡಿಸಲಾಗುತ್ತಿದೆ. 

ಸದ್ಯಕ್ಕೆ ಒಟ್ಟು ನಾಲ್ಕು ಕಡೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದ್ದು, ಗ್ರೀನ್‌ ಸ್ಟ್ರೀಟ್‌ನಲ್ಲಿ ಸಂಚಾರ ಪೊಲೀಸ್ ಠಾಣೆಯ ಎದುರಿನ ವೃತ್ತದಲ್ಲಿ ಅಳವಡಿಸಲಾಗಿದೆ.

ಸಿ.ಸಿ.ಟಿ.ವಿ ಕ್ಯಾಮೆರಾಗಳಿರುವ ಕಂಬಗಳಲ್ಲೇ ಎರಡು ಧ್ವನಿವರ್ಧಕಗಳಿವೆ. ಕ್ಯಾಮೆರಾಗಳು ಸೆರೆಹಿಡಿದ ನೇರ ದೃಶ್ಯಗಳನ್ನು ಸಂಚಾರ ಪೊಲೀಸ್ ಠಾಣೆಯಲ್ಲಿರುವ ಟಿ.ವಿ.ಯಲ್ಲಿ ಪೊಲೀಸರು ಗಮನಿಸುತ್ತಾರೆ. ಅಲ್ಲಿಂದಲೇ ಅವರು ಸಂಚಾರ ನಿಯಮಗಳ ಬಗ್ಗೆ ನಿರ್ದೇಶನ ಕೊಡುತ್ತಾರೆ. ಅಲ್ಲದೇ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು