ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿರ್ವಹಣಾ ಕೇಂದ್ರ ಕಾರ್ಯಾರಂಭ: ನಿಯಮ ಉಲ್ಲಂಘಿಸಿದರೆ ಮನೆಗೇ ನೋಟಿಸ್!

ನಾಲ್ಕು ವೃತ್ತಗಳಲ್ಲಿ ಕ್ಯಾಮೆರಾ ಅಳವಡಿಕೆ
Last Updated 21 ಆಗಸ್ಟ್ 2021, 14:55 IST
ಅಕ್ಷರ ಗಾತ್ರ

ಕಾರವಾರ: ನಗರದ ವಿವಿಧೆಡೆ ಇನ್ನುಮುಂದೆ ಸಂಚಾರ ಪೊಲೀಸರಿಲ್ಲ ಎಂದು ವಾಹನ ಚಾಲಕರು ನಿಯಮ ಉಲ್ಲಂಘಿಸಿದರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ವಾಹನ ಮಾಲೀಕರ ಮನೆಗೇ ನೋಟಿಸ್ ಬರಲಿದೆ.

ನಗರದಲ್ಲಿ ಶನಿವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಉದ್ಘಾಟನೆಯಾದ ಸಂಚಾರ ನಿರ್ವಹಣಾ ಕೇಂದ್ರದಿಂದ ಇದು ಸಾಧ್ಯವಾಗಲಿದೆ. ಸುಭಾಸ್ ವೃತ್ತ, ಸವಿತಾ ಹೋಟೆಲ್ ವೃತ್ತ, ಹೂವಿನ ಚೌಕ ವೃತ್ತ ಹಾಗೂ ಶಿವಾಜಿ ವೃತ್ತದಲ್ಲಿ ಸುಧಾರಿತ ನಿಸ್ತಂತು ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅವುಗಳು ದಿನವಿಡೀ ದೃಶ್ಯಾವಳಿಗಳನ್ನು ಸಂಚಾರ ಪೊಲೀಸ್ ಠಾಣೆಗೆ ರವಾನಿಸಲಿವೆ.

ಕೇಂದ್ರವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಮಾತನಾಡಿ, ‘ನಾಲ್ಕು ನಿಸ್ತಂತು ಪಿ.ಟಿ.ಝೆಡ್ ಕ್ಯಾಮೆರಾಗಳು ಹಾಗೂ ಅದಕ್ಕೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಇದರಲ್ಲಿರುವ ಕ್ಯಾಮೆರಾಗಳು 360 ಡಿಗ್ರಿ ತಿರುಗುತ್ತವೆ. ಸಂಚಾರ ನಿರ್ವಹಣಾ ಕೇಂದ್ರದಿಂದಲೇ ಕ್ಯಾಮೆರಾವನ್ನು ಝೂಮ್ ಮಾಡಲು ಸಾಧ್ಯವಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೊ ತೆಗೆದು ಪುರಾವೆ ಸಮೇತ ವಾಹನಗಳ ಮಾಲೀಕರಿಗೆ ನೋಟಿಸ್ ಕಳುಹಿಸಲು ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

‘ಇವು ದಿನದ 24 ಗಂಟೆಯೂ ಕಾರ್ಯಾಚರಿಸುತ್ತವೆ. ನಗರದಲ್ಲಿ ನಗರಸಭೆಯು 23 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಸಂಚಾರ ನಿರ್ವಹಣೆಗಷ್ಟೇ ಅಲ್ಲದೇ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚಲು ಕೂಡ ಇದರಿಂದ ಸಾಧ್ಯವಾಗುತ್ತದೆ. ಲೈವ್ ಇರದಿದ್ದರೂ ದೃಶ್ಯಾವಳಿಗಳ ಸಂಗ್ರಹವಿರುತ್ತದೆ. ಅಲ್ಲದೇ ಸಂಚಾರ ದಟ್ಟಣೆಯಾದ ಸಂಧರ್ಭದಲ್ಲಿ ಸಂಚಾರ ನಿರ್ವಹಣಾ ಕೇಂದ್ರದಿಂದಲೇ ಸಾರ್ವಜನಿಕರಿಗೆ ಧ್ವನಿವರ್ಧಕದಿಂದ ಅರಿವು ಮೂಡಿಸಲು ಉಪಯುಕ್ತವಾಗಲಿದೆ’ ಎಂದು ತಿಳಿಸಿದರು.

ಶಿರಸಿ, ಭಟ್ಕಳದಲ್ಲೂ ಕೇಂದ್ರಕ್ಕೆ ಚಿಂತನೆ:

‘ಮುಂದಿನ ದಿನಗಳಲ್ಲಿ ನಗರದಲ್ಲಿ ವ್ಯವಸ್ಥಿತ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕೆಂಬ ಯೋಜನೆಯಿದೆ. ಸಂಚಾರ ನಿರ್ವಹಣಾ ಕೇಂದ್ರವು ವಾಹನಗಳ ನಿಲುಗಡೆಯ ಬಗ್ಗೆ ಚಿತ್ರಣ ನೀಡಲಿದೆ. ಅದೇ ರೀತಿ ಮೂರು, ನಾಲ್ಕು ತಿಂಗಳ ನಂತರ ಕಾರವಾರ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಲಿದೆ. ಇದರ ಯಶಸ್ಸನ್ನು ಆಧರಿಸಿ ಶಿರಸಿ ಮತ್ತು ಭಟ್ಕಳದಲ್ಲಿ ಸಂಚಾರ ನಿರ್ವಹಣಾ ಕೇಂದ್ರವನ್ನು ಪ್ರಾರಂಭಿಸುವ ಯೋಚನೆಯಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬದರಿನಾಥ, ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT