ಬುಧವಾರ, ಮಾರ್ಚ್ 3, 2021
25 °C
ಸಾಕುವವರು ಕಂಗಾಲು

ಶಿರಸಿ: ಕೋಳಿಗಳಿಗೆ ಕೊಕ್ಕರೆ ರೋಗ; ತೂಕಡಿಸಿ ಸಾಯುತ್ತಿರುವ ಕೋಳಿಗಳು

ದೇವರಾಜ ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಮಳೆಗಾಲ ಆರಂಭವಾಗುತ್ತಿದ್ದಂತೆ ಕೋಳಿಗಳಲ್ಲೂ ಕೊಕ್ಕರೆ ರೋಗ (ರಾಣಿಕೇತ್) ಕಾಣಿಸಿಕೊಳ್ಳುತ್ತಿದೆ. ರೋಗ ಪೀಡಿತ ಕೋಳಿಗಳು ತೂಕಡಿಸಿ ಸಾಯುತ್ತಿದ್ದು, ಇದರಿಂದ ಸಾಕಾಣಿಕೆದಾರರು ಕಂಗಾಲಾಗಿದ್ದಾರೆ.

ನಗರದ ನಂದನಗದ್ದಾ, ಗಿಂಡಿವಾಡ, ಸುಂಕೇರಿ ಭಾಗಗಳ ಮನೆಗಳಲ್ಲಿ ಸಾಕಿದ್ದ 50ಕ್ಕೂ ಹೆಚ್ಚು ಕೋಳಿಗಳು ಮಂಗಳವಾರ ಸತ್ತಿವೆ. ಈ ಬಗ್ಗೆ ಪರಿಶೀಲನೆ ನಡೆಸಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು, ಕೊಕ್ಕರೆ ರೋಗದಿಂದಲೇ ಅವು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

‘ಮನುಷ್ಯರಿಗೆ ತೊಂದರೆ ಇಲ್ಲ’:

‘ಇದು ಕೋಳಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ರೋಗವಾಗಿದೆ. ಇದರಿಂದ ಮನುಷ್ಯರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಒಮ್ಮೆ ರೋಗಕ್ಕೆ ತುತ್ತಾದ ಕೋಳಿಗೆ ಯಾವುದೇ ಔಷಧ ಫಲಿಸುವುದಿಲ್ಲ. ರೋಗದಿಂದ ಸತ್ತ ಕೋಳಿಗಳನ್ನು ಹೂಳಬೇಕು. ಇದರಿಂದ ಇತರ ಕೋಳಿಗಳಿಗೆ ರೋಗ ಹರಡುವುದನ್ನು ತಪ್ಪಿಸಬಹುದು. ಇಲ್ಲದಿದ್ದರೆ ಗಾಳಿ, ನೀರಿನ ಮೂಲಕ ರೋಗ ಹರಡಿ ಸಾಕಾಣಿಕೆದಾರರಿಗೆ ನಷ್ಟ ಉಂಟು ಮಾಡಬಹುದು’ ಎನ್ನುತ್ತಾರೆ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಸುಬ್ರಾಯ ಭಟ್.

ರೋಗದ ಲಕ್ಷಣ:

‘ಕೊಕ್ಕರೆ ರೋಗಕ್ಕೆ ತುತ್ತಾದ ಕೋಳಿಗಳು ಆಹಾರ ಸೇವಿಸುವುದನ್ನು ನಿಲ್ಲಿಸಿ, ತೂಕ ಇಳಿದು ನಿತ್ರಾಣಕ್ಕೆ ಒಳಗಾಗುತ್ತವೆ. ಹೆಚ್ಚು ಮಲ ವಿಸರ್ಜಿಸುತ್ತವೆ. ಒಂದೇ ಕಾಲಿನಲ್ಲಿ ನಿಂತುಕೊಂಡು ತೂಕಡಿಸುತ್ತವೆ. ಪಾರ್ಶ್ವವಾಯುವಿಗೆ ತುತ್ತಾದವರಂತೆ, ಈ ರೋಗಗ್ರಸ್ತ ಕೋಳಿಗಳ ಒಂದು ಭಾಗದ ರೆಕ್ಕೆ, ಕಾಲುಗಳು ಸೆಟೆದುಕೊಳ್ಳುತ್ತವೆ. ಕುತ್ತಿಗೆಯೂ ಒಂದು ಭಾಗಕ್ಕೆ ತಿರುಗಿರುತ್ತದೆ. ಈ ರೋಗಕ್ಕೆ ತುತ್ತಾದ ಕೋಳಿಗಳು ಒಂದೇ ವಾರದಲ್ಲಿ ಸಾಯುತ್ತವೆ’ ಎಂದು ಅವರು ವಿವರಿಸಿದರು.

ನಿಯಂತ್ರಣ ಹೇಗೆ?:

‘ಈ ರೋಗ ಒಂದು ಪ್ರದೇಶದಲ್ಲಿ ಕಾಣಿಸಿಕೊಂಡರೆ ಆ ವ್ಯಾಪ್ತಿಯ ಎಲ್ಲ ಕೋಳಿಗಳಿಗೆ ಹರಡಿ, ಅವುಗಳನ್ನೂ ನಾಶ ಮಾಡಿಬಿಡುತ್ತವೆ. ಒಂದು ಕೋಳಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡರೆ ಅದನ್ನು ಕೂಡಲೇ ಇತರ ಕೋಳಿಗಳ ಗುಂಪುಗಳಿಂದ ಪ್ರತ್ಯೇಕಿಸಿ, ಉಳಿದವುಗಳಿಗೆ ರೋಗ ನಿರೋಧಕ ಚುಚ್ಚುಮದ್ದು ನೀಡಬೇಕು’ ಎಂದು ಅವರು ಸಲಹೆ ನೀಡಿದರು.

‘ಕೊಕ್ಕರೆ ರೋಗಕ್ಕೆ ಪಶು ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿದೆ. ಚಿಕಿತ್ಸಾ ಕೇಂದ್ರಗಳಲ್ಲಿ ವಾರದಲ್ಲಿ ನಿಗದಿತ ದಿನದಂದು ರೋಗ ನಿರೋಧಕ ಲಸಿಕೆ ನೀಡಲಾಗುತ್ತದೆ. ಸಾಕಾಣಿಕೆದಾರರು ರೋಗ ನಿರೋಧಕ ಲಸಿಕೆ ನೀಡದೇ, ರೋಗ ಬಂದ ಮೇಲೆ ಕೋಳಿ ಸತ್ತಿತು ಎಂದು ಪರಿತಪಿಸುತ್ತಾರೆ. ರೋಗ ಬಾರದಂತೆ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ. ಪ್ರತಿ ಆರು ತಿಂಗಳಿಗೊಮ್ಮೆ ಕೋಳಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡುವುದರಿಂದ ರೋಗ ಬಾರದಂತೆ ತಡೆಗಟ್ಟಬಹುದು’ ಎಂದು ಸಲಹೆ ನೀಡುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಂಕರ ಗುಳೇದಗುಡ್ಡ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು