ಸಾಲಮನ್ನಾ: ಬಜೆಟ್ ಭಾಷಣದತ್ತ ರೈತರ ಚಿತ್ತ

7
ಉತ್ತರಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಕೊಡುಗೆಗಳೇನು: ಜನರಲ್ಲಿ ಹಲವು ನಿರೀಕ್ಷೆ

ಸಾಲಮನ್ನಾ: ಬಜೆಟ್ ಭಾಷಣದತ್ತ ರೈತರ ಚಿತ್ತ

Published:
Updated:

ಕಾರವಾರ:  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಅನ್ನು ಗುರುವಾರ ಮಂಡಿಸಲಿದ್ದಾರೆ. ಚುನಾವಣೆಗೂ ಪೂರ್ವದಲ್ಲಿ ಅವರು ನೀಡಿದ್ದ ಭರವಸೆಗಳ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು, ಬೆಳೆಗಾರರು, ಮೀನುಗಾರರು ಈ ಬಜೆಟ್‌ ಅನ್ನು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಮಲೆನಾಡು ತಾಲ್ಲೂಕುಗಳಲ್ಲಿ ಅಧಿಕವಾಗಿರುವ ಅಡಿಕೆ ಬೆಳೆಗಾರರು, ಕೃಷಿಕರು ತಮ್ಮ ಸಾಲ ಮನ್ನಾ ಆಗುತ್ತದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲ್ಲೂಕಿನ ಹಲವು ಗ್ರಾಮಗಳ ಬೆಳೆಗಾರರು ಮುಖ್ಯಮಂತ್ರಿಯ ಬಜೆಟ್ ಭಾಷಣದ ಬಗ್ಗೆ ಹಿಂದೆಂದಿಗಿಂತಲೂ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

ಕುಮಾರಸ್ವಾಮಿ ಅವರು ಚುನಾವಣೆ ಪ್ರಚಾರಕ್ಕಾಗಿ ಶಿರಸಿಗೆ ಬಂದಿದ್ದಾಗ ರೈತರ ಖಾತೆ ಸಾಲಮನ್ನಾದ ವಿಚಾರ ಪ್ರಸ್ತಾಪಿಸಿದ್ದರು. ಅಧಿಕಾರ ಸಿಕ್ಕಿದರೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ‘ರೈತರ ₹ 51 ಸಾವಿರ ಕೋಟಿ ಸಾಲದ ಪೈಕಿ ಖಾತೆ ಸಾಲದ ₹ 300 ಕೋಟಿ ದೊಡ್ಡ ಮೊತ್ತವೇನೂ ಆಗಲಾರದು. ತಾಂತ್ರಿಕ ಸಮಸ್ಯೆ ಪರಿಹರಿಸಿ, ಖಾತೆಸಾಲ ಮನ್ನಾ ಮಾಡಲಾಗುವುದು’ ಎಂದು ಅವರು ಹೇಳಿದ್ದರು. 

ಮೀನುಗಾರರ ನಿರೀಕ್ಷೆ: ಕರಾವಳಿಯಲ್ಲಿ ಮೀನುಗಾರ ಸಮುದಾಯದವರೂ ಸಾಲಮನ್ನಾ ಸೇರಿದಂತೆ ತಮ್ಮ ವೃತ್ತಿಯ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಯಾಂತ್ರೀಕೃತ ದೋಣಿಗಳಲ್ಲಿ ಬಂದು ಆಳಸಮುದ್ರ ಮೀನುಗಾರಿಕೆ ಮಾಡುವವರು ಡೀಸೆಲ್ ಸಬ್ಸಿಡಿ ಹೆಚ್ಚಿಸುವಂತೆ, ದೋಣಿಗಳ ಖರೀದಿಗೆ ವಿಶೇಷ ಸಾಲ ಸೌಲಭ್ಯ ಕುರಿತು ಬೇಡಿಕೆ ಸಲ್ಲಿಸಿದ್ದಾರೆ.

ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಯದ ದಿನಗಳಲ್ಲಿ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ‘ಮೀನುಗಾರಿಕೆ ಕೂಡ ಒಂದು ರೀತಿಯಲ್ಲಿ ಕೃಷಿ ಮಾಡಿದಂತೆ. ಆದ್ದರಿಂದ ಬೆಳೆನಷ್ಟ ಪರಿಹಾರ ನೀಡುವ ಮಾದರಿಯಲ್ಲೇ ಮೀನುಗಾರರಿಗೂ ಪರಿಹಾರ ಒದಗಿಸಬೇಕು’ ಎಂಬುದು ಮೀನುಗಾರರ ಮುಖಂಡರ ವಾದವಾಗಿದೆ.

ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಪಡೆಯುವ ನಿಯಮ ಸಡಿಲಿಕೆ, ಸರ್ಕಾರ, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೆರೆಗಳ ಹೂಳೆತ್ತುವುದು, 5–10 ಲಕ್ಷ ಕುಟುಂಬಗಳನ್ನು ಸೇರಿಸಿಕೊಂಡು ಸಸಿಗಳನ್ನು ಬೆಳೆಸಿ, ಅರಣ್ಯ ವಿಸ್ತರಣೆಗೆ ಆದ್ಯತೆ ನೀಡುವುದು ಮುಂತಾದ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಪ್ರಸ್ತಾಪಿಸುತ್ತಾರೆಯೇ ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

ಇನ್ನೂ ಸಿಗದ ವೈದ್ಯಕೀಯ ಕಾಲೇಜು: ಶಿರಸಿಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಎಂಬ ಬೇಡಿಕೆ ಸುಮಾರು ಒಂದು ದಶಕದಷ್ಟು ಹಿಂದಿನದ್ದಾಗಿದೆ. ಆದರೆ, ಪ್ರತಿ ಬಜೆಟ್‌ನಲ್ಲೂ ಇದರ ಘೋಷಣೆಯಾಗುತ್ತಿಲ್ಲ. ಈ ಬಾರಿಯಾದರೂ ಆಗುತ್ತದೆಯೇ ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿದೆ.

ರಸ್ತೆ ದುರಸ್ತಿಗೆ ಪ್ಯಾಕೇಜ್?: ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಸಾಮಾನ್ಯ ಅನುದಾನದಲ್ಲಿ ಅವುಗಳ ದುರಸ್ತಿ ಸಾಧ್ಯವೇ ಇಲ್ಲ ಎಂದು ಜಿಲ್ಲಾ ಪಂಚಾಯ್ತಿ ಸಭೆಯಲ್ಲೂ ಚರ್ಚೆಯಾಗಿದ್ದವು. ಹೀಗಾಗಿ ಇದಕ್ಕೆ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬೇಡಿಕೆಗೆ ಮನ್ನಣೆ ನೀಡುತ್ತಾರೆಯೇ ಎಂಬ ಕುತೂಹಲವೂ ಜನರಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !