ಭಾನುವಾರ, ಸೆಪ್ಟೆಂಬರ್ 19, 2021
24 °C
ಶಿರಸಿ–ಕುಮಟಾ ರಸ್ತೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧ

ಒಳರಸ್ತೆಯಲ್ಲಿ ಇಕ್ಕಟ್ಟಿನ ಸಂಚಾರ

ಗಣಪತಿ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಕಾಮಗಾರಿ ಪ್ರಗತಿಯಲ್ಲಿದ್ದು, ದುರವಸ್ಥೆಯಲ್ಲಿರುವ ಶಿರಸಿ–ಕುಮಟಾ ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ಹೇರಲಾಗಿದ್ದು, ಸವಾರರು ಒಳರಸ್ತೆಗಳನ್ನು ಅವಲಂಬಿಸುತ್ತಿದ್ದಾರೆ.

ತೀರಾ ಇಕ್ಕಟ್ಟಾದ ಮಳಲಿ ರಸ್ತೆ, ಹತ್ತರಗಿ ರಸ್ತೆ, ಅಡಕಳ್ಳಿ ರಸ್ತೆ ಮುಂತಾದೆಡೆ ಲಾರಿ, ಬಸ್ಸುಗಳ ಓಡಾಟ ಹೆಚ್ಚುತ್ತಿದೆ. ನಿರಂತರ ಮಳೆಗೆ ಹದಗೆಟ್ಟಿದ್ದ ಗ್ರಾಮೀಣ ರಸ್ತೆಗಳ ಸ್ಥಿತಿ ಮತ್ತಷ್ಟು ಹಾಳಾಗುತ್ತಿದೆ. ಗ್ರಾಮಸ್ಥರಿಗೆ ಅಪಘಾತದ ಭಯವೂ ಕಾಡುತ್ತಿದೆ.

ನಿರಂತರ ಮಳೆಗೆ ಶಿರಸಿ–ಕುಮಟಾ ಹೆದ್ದಾರಿ ಕಾಮಗಾರಿಗೆ ಹಾಕಲಾದ ಮಣ್ಣು ಮೆತ್ತಗಾಗಿದ್ದು, ಅದರ ಮೇಲೆ ಹಾಸಲಾಗಿದ್ದ ಜಲ್ಲಿ ರಾಶಿ ಹೂತುಹೋಗಿವೆ. ಕರಾವಳಿ ಭಾಗದ ಪಟ್ಟಣಗಳಿಗೆ ತೆರಳಬೇಕಿರುವ ಲಾರಿಗಳು ಇದೇ ಮಾರ್ಗದಲ್ಲಿ ಸಾಗಿವೆ. ಭಾರದ ವಾಹನಗಳ ಓಡಾಟದ ಪರಿಣಾಮ ರಸ್ತೆ ಸ್ಥಿತಿ ದುರವಸ್ಥೆಗೆ ತಲುಪಿ ಹಲವು ವಾಹನಗಳು ಹೂತುಹೋಗಿದ್ದವು.

ಸಂಚಾರ ಸಮಸ್ಯೆ ತಪ್ಪಿಸುವ ಉದ್ದೇಶದಿಂದ ಸೋಮವಾರ ರಾತ್ರಿಯಿಂದ ಬುಧವಾರದವರೆಗೆ ತಾತ್ಕಾಲಿಕವಾಗಿ ಈ ರಸ್ತೆಯಲ್ಲಿ ಲಾರಿ, ಬಸ್ಸು ಸೇರಿದಂತೆ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧಿಸಲಾಗಿದೆ. ಲಾರಿಗಳಿಗೆ ಸಿದ್ದಾಪುರ–ಗೇರುಸೊಪ್ಪಾ ಮಾರ್ಗವಾಗಿ, ಬಸ್ಸುಗಳಿಗೆ ಹೆಗಡೆಕಟ್ಟಾ–ಹತ್ತರಗಿ ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ.

‘ಬುಧವಾರ ರಸ್ತೆ ಸ್ಥಿತಿ ಪರಿಶೀಲಿಸಿ ಆ ಬಳಿಕ ಭಾರಿ ಗಾತ್ರದ ವಾಹನ ಓಡಾಟಕ್ಕೆ ಅನುಮತಿ ನೀಡುವ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಶಿರಸಿ ಡಿವೈಎಸ್ಪಿ ರವಿ ಡಿ.ನಾಯ್ಕ ತಿಳಿಸಿದ್ದಾರೆ.

ಕೆಲ ಚಾಲಕರು ಸುತ್ತು ಬಳಸಿ ಸಂಚರಿಸುವುದನ್ನು ತಪ್ಪಿಸಲು ಒಳರಸ್ತೆಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ. ಮಳಲಿ ಕೂಡು ರಸ್ತೆಯ ಮಾರ್ಗವಾಗಿ ಗೋಳಿ ಕ್ರಾಸ್‍ ಬಳಿ ಶಿರಸಿ–ಕುಮಟಾ ರಸ್ತೆಗೆ ತೆರಳುವ ವಾಹನಗಳ ಸಂಖ್ಯೆ ಹೆಚ್ಚಿದೆ.

‘ಕಿರಿದಾದ ರಸ್ತೆಯಲ್ಲಿ ದಿನವೂ ನೂರಾರು ವಾಹನಗಳು ತೆರಳುತ್ತಿವೆ. ಸುರಕ್ಷಿತವಲ್ಲದಿದ್ದರೂ ಭಾರಿ ವಾಹನಗಳ ಓಡಾಟ ಹೆಚ್ಚಿದ್ದು ಕೆಲವೇ ದಿನದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸಂಚಾರ ದಟ್ಟಣೆಯೂ ಹೆಚ್ಚುತ್ತಿದ್ದು ಅಪಘಾತದ ಭಯ ಎದುರಾಗಿದೆ’ ಎಂದು ಮಳಲಿ ಗ್ರಾಮಸ್ಥ ಅರುಣ ಗೌಡ ಹೇಳಿದರು.

‘ಹೆದ್ದಾರಿ ಕಾಮಗಾರಿಗೆ ವೇಗ ನೀಡಬೇಕು. ಹಳ್ಳಿ ರಸ್ತೆಯಲ್ಲಿ ಭಾರಿ ಗಾತ್ರದ ವಾಹನ ಓಡಾಟ ನಡೆಯುವುದನ್ನು ತಡೆಯಬೇಕು. ಹದಗೆಟ್ಟ ಜಿಲ್ಲಾ ಪಂಚಾಯ್ತಿ ರಸ್ತೆಯನ್ನು ದುರಸ್ತಿಪಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು