ಸೋಮವಾರ, ಸೆಪ್ಟೆಂಬರ್ 16, 2019
27 °C

ಸಿಆರ್‌ಝೆಡ್ ವ್ಯಾಪ್ತಿ: ವಸತಿ ಕಟ್ಟಡ ನಿರ್ಮಾಣಕ್ಕೆ ಅನುಮತಿ

Published:
Updated:
Prajavani

ಕಾರವಾರ: ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝೆಡ್) ವಿವಿಧ ಹಂತಗಳಲ್ಲಿ ವಸತಿ ಕಟ್ಟಡಗಳ ನಿರ್ಮಾಣ, ದುರಸ್ತಿ ಹಾಗೂ ಇತರ ಖಾಸಗಿ ಕಾಮಗಾರಿಗಳಿಗೆ ನಿರಾಕ್ಷೇಪಣಾ ಪತ್ರ ನೀಡಲು ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕರಾವಳಿ ನಿಯಂತ್ರಣ ವಲಯ– 2011ರ ಅಧಿಸೂಚನೆಯಂತೆ ಸಮಿತಿಯ ಮುಂದಿದ್ದ ವಿವಿಧ ಪ್ರಕರಣಗಳಿಗೆ ನಿರಾಕ್ಷೇಪಣಾ ಪತ್ರ ನೀಡಲು ಅವಕಾಶವಿದೆ. ಅಂತಹ ಪ್ರಕರಣಗಳಿಗೆ ನಿಯಮಾನುಸಾರ ಅನುಮತಿ ನೀಡುವಂತೆ ಶುಕ್ರವಾರ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಸೂಚಿಸಿದರು.

ಸಾರ್ವಜನಿಕರು ಕರಾವಳಿ ನಿಯಂತ್ರಣ ವಲಯದಲ್ಲಿ ವಾಸ್ತವ್ಯ ಕಟ್ಟಡ ನಿರ್ಮಾಣ, ದುರಸ್ತಿ, ಪುನರ್‌ ನಿರ್ಮಾಣ, ವಾಣಿಜ್ಯ, ಕೈಗಾರಿಕೆ, ಪ್ರವಾಸೋದ್ಯಮ, ಹೋಟೆಲ್, ಬೀಚ್ ರೆಸಾರ್ಟ್ ನಿರ್ಮಾಣ ಅಥವಾ ಇಂತಹ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಪೂರ್ವದಲ್ಲಿ ಕರಾವಳಿ ನಿಯಂತ್ರಣ ವಲಯದ ಪೂರ್ವಾನುವತಿ ಪಡೆಯುವುದು ಕಡ್ಡಾಯವಾಗಿದೆ. ಅಧಿಸೂಚನೆ– 2011ರ ನಿಯಮ ಉಲ್ಲಂಘಿಸಿದಲ್ಲಿ ಅಂಥವರ ವಿರುದ್ಧ ನಿಯಮಾನುಸಾರ ಕ್ರಮ ವಹಿಸಬೇಕಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ಕರಾವಳಿ ನಿಯಂತ್ರಣ ವಲಯ ಪ್ರಾದೇಶಿಕ ನಿರ್ದೇಶಕ (ಪರಿಸರ) ಪ್ರಸನ್ನ ಪಟಗಾರ್, ಅಧಿಕಾರೇತರ ಸದಸ್ಯರಾದ ಭಟ್ಕಳದ ರಾಮ ಮೊಗೇರ, ಹೊನ್ನಾವರದ ವಿನೋದ ನಾಯ್ಕ ಇದ್ದರು.

Post Comments (+)