ಶನಿವಾರ, ಸೆಪ್ಟೆಂಬರ್ 18, 2021
28 °C
ಕಾರವಾರ: ಎರಡನೇ ಹಂತದ ಕಾಮಗಾರಿ ಗುತ್ತಿಗೆ ವಿಚಾರದಲ್ಲಿ ಎದುರಾದ ಸಮಸ್ಯೆ

ಕಾರವಾರ: ಕಗ್ಗಂಟಾದ ಪೌರಕಾರ್ಮಿಕರ ಗೃಹ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದ ಪೌರ ಕಾರ್ಮಿಕರಿಗೆ ನಗರಸಭೆಯಿಂದ ಮನೆ ನಿರ್ಮಿಸುವ ಯೋಜನೆ ಗುತ್ತಿಗೆ ಗೊಂದಲದಿಂದ ಅರ್ಧಕ್ಕೆ ನಿಂತಿದೆ. ಹಾಗಾಗಿ ಕೆಲವು ಪೌರ ಕಾರ್ಮಿಕರು ಸ್ವಂತ ಸೂರಿನ ಭಾಗ್ಯ ಪಡೆಯಲು ಮತ್ತಷ್ಟು ದಿನ ಕಾಯಬೇಕಾಗಿದೆ.

2015– 16ರಲ್ಲಿ ಜಾರಿಯಾದ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಮೊದಲ ಹಂತದಲ್ಲಿ 34 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಕೋಡಿಬಾಗದ ಪಂಚರಾಶಿವಾಡ ಹಾಗೂ ಗಾಂಧಿನಗರದಲ್ಲಿ ಬಹು ಮಹಡಿ ವಸತಿ ಸಮುಚ್ಛಯ ನಿರ್ಮಿಸಲು ಉದ್ದೇಶಿಸಲಾಗಿತ್ತು. ಅಷ‌್ಟರಲ್ಲಿ ಗಾಂಧಿನಗರದಲ್ಲಿ ಜಾಗದ ಗೊಂದಲ ಶುರುವಾಯಿತು. ಅದೀಗ ಬಗೆಹರಿದಿದ್ದರೂ ಕಾಮಗಾರಿಯ ಗುತ್ತಿಗೆ ವಿಚಾರದಲ್ಲಿ ಗೊಂದಲ ಎದುರಾಗಿದೆ. ಹಾಗಾಗಿ ನಿರ್ಮಾಣ ಕಾರ್ಯ ಇನ್ನೂ ಆರಂಭವಾಗಿಲ್ಲ.

ಪಂಚರಾಶಿವಾಡದಲ್ಲಿ ಎರಡು ಮಹಡಿಗಳ ಮನೆಗಳನ್ನು ನಿರ್ಮಿಸಲಾಗಿದ್ದು, 16 ಫಲಾನುಭವಿಗಳಿಗೆ 2019ರಲ್ಲಿ ಹಸ್ತಾಂತರಿಸಲಾಗಿದೆ. ಎರಡನೇ ಹಂತದ ಯೋಜನೆಗೆ ನಗರದ ಒಂಬತ್ತು ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಕೋಣೆವಾಡದಲ್ಲಿ ಅತಿಕ್ರಮಣ ಜಾಗವನ್ನು ವಶ ಪಡಿಸಿಕೊಂಡ ನಗರಸಭೆ, ಅಲ್ಲಿ ಪೌರ ಕಾರ್ಮಿಕರಿಗೆ ವಸತಿ ಸಮುಚ್ಛಯ ನಿರ್ಮಿಸಲು ಟೆಂಡರ್ ಹಂಚಿಕೆ ಮಾಡಿದೆ. ಅಲ್ಲಿ ಈಗಾಗಲೇ ಅಡಿಪಾಯ ನಿರ್ಮಾಣವಾಗಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯೋಜನೆ ಜಾರಿಯಾಗಿದ್ದು, ನಂತರ ಹಲವು ರಾಜಕೀಯ ಬದಲಾವಣೆಗಳಾದವು. ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾದರು. ಆದರೂ ಸ್ವಂತ ಸೂರಿನ ಭಾಗ್ಯ ಸಿಗದಿರುವುದು ಪೌರ ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಉದಾರತೆ ತಂದ ಸಮಸ್ಯೆ!: ‘ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆ’ಯಡಿ ಪ್ರತಿ ಮನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ತಲಾ ₹ 6 ಲಕ್ಷ ನಿಗದಿ ಮಾಡಿತ್ತು. ಇದರೊಂದಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ₹ 1.50 ಲಕ್ಷ ಸಿಕ್ಕಿತ್ತು. ಈ ರೀತಿ ಒಟ್ಟು ₹ 2.55 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಅಷ್ಟೇ ಮೊತ್ತಕ್ಕೆ ನಗರಸಭೆ ಟೆಂಡರ್ ಕರೆದಿತ್ತು.

ಆದರೆ, ಪೌರ ಕಾರ್ಮಿಕರಿಗೆ ಉತ್ತಮ ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಕಾರವಾರ ನಗರಸಭೆಯು, ಈ ಮಿತಿಯನ್ನು ಮೀರಿ ಖರ್ಚು ಮಾಡಿದ್ದೇ ಈಗ ಸಮಸ್ಯೆ ತಂದಿಟ್ಟಿದೆ. ಆಗಿನ ನಗರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಸರ್ಕಾರದ ಅನುಮತಿ ಪಡೆಯದೇ ಮನೆಯ ವಿಸ್ತೀರ್ಣವನ್ನು ಹೆಚ್ಚಿಸಿದ್ದರು. ಹಾಗಾಗಿ ಪಂಚರಾಶಿವಾಡದಲ್ಲಿ 16 ಮನೆಗಳ ಸಮುಚ್ಛಯಕ್ಕೆ ನಿಗದಿಯಾಗಿದ್ದ ₹ 1.20 ಕೋಟಿಯ ಬದಲು ₹ 1.76 ಕೋಟಿ ವ್ಯಯವಾಯಿತು.

ಪ್ರತಿ ಮನೆಗೆ ₹ 11 ಲಕ್ಷ ಖರ್ಚು ಮಾಡಿದ್ದರಿಂದ ಗಾಂಧಿನಗರದಲ್ಲಿ ಸಮುಚ್ಛಯ ನಿರ್ಮಾಣಕ್ಕೆ ಹಣದ ಕೊರತೆಯಾಗಿದೆ. ಮೊದಲು ನಿಗದಿ ಮಾಡಿದ್ದ ₹ 1.35 ಕೋಟಿಯ ಬದಲು ಕೇವಲ ₹ 79 ಲಕ್ಷ ಉಳಿದುಕೊಂಡಿದೆ. ಇಷ್ಟು ಮೊತ್ತದಲ್ಲಿ 18 ಮನೆಗಳನ್ನು ನಿರ್ಮಿಸುವುದು ಅಸಾಧ್ಯ ಎಂದು ಗುತ್ತಿಗೆದಾರರು ಹಿಂದೆಸರಿದಿದ್ದಾರೆ. ಹಾಗಾಗಿ ಸರ್ಕಾರ ಮತ್ತಷ್ಟು ಅನುದಾನ ನೀಡಿದರೆ ಅಥವಾ ನಗರಸಭೆಯ ಈಗಿನ ಆಡಳಿತ ಮಂಡಳಿಯು, ಹಣಕಾಸು ಹೊಂದಾಣಿಕೆಗೆ ಪರ್ಯಾಯ ಮಾರ್ಗೋಪಾಯ ಕಂಡುಕೊಂಡರೆ ಮಾತ್ರ ಯೋಜನೆಯು ಸುಲಲಿತವಾಗಿ ಮುಂದುವರಿಯಬಹುದು.

‘ಪತ್ರ ಬರೆಯಲಾಗಿದೆ’: ‘ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯ ಮೊದಲ ಹಂತದ 18 ಮನೆಗಳ ನಿರ್ಮಾಣಕ್ಕೆ ಗಾಂಧಿನಗರದಲ್ಲಿ ಜಾಗ ಸಿದ್ಧಗೊಳಿಸಲಾಗುತ್ತಿದೆ. ಕಾಮಗಾರಿಯ ಗುತ್ತಿಗೆ ವಿಷಯದಲ್ಲಿ ಉಂಟಾದ ಗೊಂದಲದ ಕುರಿತು ಸರ್ಕಾರದಿಂದ ಸ್ಪಷ್ಟನೆಗಾಗಿ ಪತ್ರ ಬರೆಯಲಾಗಿದೆ. ಅಲ್ಲಿನ ಸೂಚನೆಯಂತೆ ಮುಂದುವರಿಯಲಾಗುವುದು’ ಎಂದು ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.