ಶುಕ್ರವಾರ, ಜುಲೈ 30, 2021
28 °C
ಠರಾವು ವರದಿ ಪಾಲಿಸದ ನಗರಸಭೆ: ಕೆಲ ಸದಸ್ಯರ ಅಸಮಾಧಾನ

ಪೇಟೆಯಂಚಿನ ಪ್ರದೇಶ ಸೇರ್ಪಡೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನಗರಕ್ಕೆ ಹೊಂದಿಕೊಂಡಿರುವ ಹಲವು ಪ್ರದೇಶಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವಂತೆ ಕಳೆದ ಸಾಮಾನ್ಯಸಭೆಯಲ್ಲಿ ಮಂಡಿಸಿದ ಠರಾವು ಪರಿಗಣಿಸಿಲ್ಲ ಎಂದು ನಗರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಗಣಪತಿ ನಾಯ್ಕ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರದೀಪ ಶೆಟ್ಟಿ, ‘ನಗರ ವ್ಯಾಪ್ತಿಯಲ್ಲಿದ್ದರೂ ಗ್ರಾಮ ಪಂಚಾಯ್ತಿಗೆ ಸೇರಿಕೊಂಡಿರುವ ಕೊಪ್ಪಲ ಕಾಲೊನಿ, ಗುರು ನಗರ ಸೇರಿ ಹಲವು ಪ್ರದೇಶಗಳನ್ನು ನಗರಸಭೆಗೆ ಸೇರಿಸಲು ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳುಹಿಸಿಲ್ಲ. ಕೇವಲ ಎರಡು ಪ್ರದೇಶಗಳ ಸೇರ್ಪಡೆಗೆ ಪ್ರಸ್ತಾವ ಕಳಿಸಿದ್ದು ಸರಿಯಲ್ಲ’ ಎಂದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಖಾದರ ಆನವಟ್ಟಿ, ‘ಸದಸ್ಯರು ಚರ್ಚಿಸಿ ಮಂಡಿಸಿದ ಠರಾವು ದೃಢೀಕರಣಗೊಳ್ಳುವಾಗ ಬದಲಾಗುತ್ತಿದೆ. ಸದಸ್ಯರಿಗೆ ಅವಮಾನ ಮಾಡುವುದಷ್ಟೇ ಅಲ್ಲದೆ ಮನಸ್ಸಿಗೆ ತೋಚಿದ ಆಡಳಿತ ನಡೆಸಿದಂತಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಗರಸಭೆಯ ನಕ್ಷೆಯಲ್ಲಿ ಹಲವು ಪ್ರದೇಶಗಳು ಸೇರ್ಪಡೆಯಾಗಿರುವುದು ಗಮನಕ್ಕೆ ಬಂತು. ಹೀಗಾಗಿ ಲಿಡ್ಕರ್ ಕಾಲೊನಿ, ಶ್ರೀಗಂಧ ಸಂಕೀರ್ಣ ಸೇರ್ಪಡೆಗೆ ಮಾತ್ರ ಪ್ರಸ್ತಾವ ಕಳುಹಿಸಲಾಯಿತು. ಇನ್ನೊಮ್ಮೆ ಪರಿಶೀಲಿಸುತ್ತೇವೆ’ ಎಂದು ಅಧ್ಯಕ್ಷ ಗಣಪತಿ ನಾಯ್ಕ ಚರ್ಚೆಗೆ ತೆರೆ ಎಳೆದರು.

ಮಾರಿಕಾಂಬಾ ದೇವಸ್ಥಾನದಿಂದ ನಗರಸಭೆಗೆ ಸಂದಾಯವಾಗಬೇಕಿರುವ ₹19 ಲಕ್ಷ ಜಾತ್ರೆಯ ಶುಲ್ಕದ ಬದಲು ₹10 ಲಕ್ಷ ಪಾವತಿಸುವುದಾಗಿ ತಿಳಿಸಿದ್ದಾರೆ ಎಂದು ಅಧ್ಯಕ್ಷ ಗಣಪತಿ ನಾಯ್ಕ ತಿಳಿಸಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಸದಸ್ಯ ಆನಂದ ಸಾಲೇರ, ಪೂರ್ತಿ ಹಣ ಪಾವತಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಕೆಲ ಸದಸ್ಯರು ದನಿಗೂಡಿಸಿದರು.

ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಪೌರಾಯುಕ್ತ ಕೇಶವ ಚೌಗಲೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.