ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಡಿ.ಸಿ ಕಚೇರಿ ಜಪ್ತಿಯಿಂದ ಸದ್ಯಕ್ಕೆ ಪಾರು

ಹೆಚ್ಚುವರಿ ಪರಿಹಾರ ವಿತರಿಸಲು ಒಂದು ತಿಂಗಳ ಗಡುವು ಪಡೆದ ಅಧಿಕಾರಿಗಳು
Last Updated 29 ಜುಲೈ 2022, 4:33 IST
ಅಕ್ಷರ ಗಾತ್ರ

ಕಾರವಾರ: ‘ಪ್ರಾಜೆಕ್ಟ್ ಸೀಬರ್ಡ್’ಗೆ ಜಮೀನು ಕಳೆದುಕೊಂಡ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ವಿತರಿಸದ ಕಾರಣ, ಜಿಲ್ಲಾಧಿಕಾರಿ ಕಚೇರಿಯ ವಿವಿಧ ಸ್ವತ್ತುಗಳನ್ನು ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಲು ಮುಂದಾದ ಘಟನೆ ಗುರುವಾರ ನಡೆಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿಶೇಷ ಭೂ ಸ್ವಾಧೀನಾಧಿಕಾರಿಯು ಒಂದು ತಿಂಗಳ ಕಾಲಾವಕಾಶ ಕೋರಿದ್ದರಿಂದ, ಕಚೇರಿ ಜಪ್ತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಯಿತು.

ಅಂಕೋಲಾದ ಸಕಲಬೇಣದಲ್ಲಿ ‘ಪ್ರಾಜೆಕ್ಟ್ ಸೀಬರ್ಡ್‌’ಗೆ ಪೂರ್ಣಾನಂದ ವೆಂಕಟೇಶ ಭಟ್, ರಾಮನಾಥ ಪೂರ್ಣಾನಂದ ಭಟ್, ಸಿದ್ದಿನಾಥ ಭಟ್, ಶ್ವೇತಾ ಪೂರ್ಣಾನಂದ ಭಟ್ ಹಾಗೂ ಲಕ್ಷ್ಮಿ ಪೂರ್ಣಾನಂದ ಭಟ್ ಜಮೀನು ಕಳೆದುಕೊಂಡಿದ್ದರು. ಒಟ್ಟು 18 ಎಕರೆಯು ಯೋಜನೆಗೆ ಸ್ವಾಧೀನವಾಗಿತ್ತು.

ಐದೂ ಕುಟುಂಬದವರು ಹೆಚ್ಚುವರಿ ಪರಿಹಾರಕ್ಕಾಗಿ 2017ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಪರಿಹಾರ ಸಿಗದ ಕಾರಣ ಅಂಕೋಲಾ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸುಮಾರು ಒಂದೂ ಮುಕ್ಕಾಲು ವರ್ಷಗಳ ಹಿಂದೆ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಆಗಲೂ ಪರಿಹಾರ ಬಿಡುಗಡೆಯಾಗದ ಕಾರಣ ಮತ್ತೊಮ್ಮೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಸಂಬಂಧ ಕೆಲವು ದಿನಗಳ ಹಿಂದೆ ಆದೇಶಿಸಿದ್ದ ನ್ಯಾಯಾಲಯವು, ಜಿಲ್ಲಾಧಿಕಾರಿ ಕಚೇರಿಯ ಸ್ವತ್ತುಗಳನ್ನು ಜಪ್ತಿ ಮಾಡುವಂತೆ ಸೂಚಿಸಿತ್ತು. ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ನ್ಯಾಯಾಲಯದ ಸಿಬ್ಬಂದಿ ಗಣೇಶ ಹೆಗಡೆ ಮತ್ತು ಸುಧಾ ನಾಯ್ಕ ಅವರು ಆದೇಶದ ಪ್ರತಿಯೊಂದಿಗೆ ಬಂದಿದ್ದರು. ದೂರುದಾರರೂ ಜೊತೆಗಿದ್ದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಪೂರ್ಣಾನಂದ ಭಟ್, ‘ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿಶೇಷ ಭೂ ಸ್ವಾಧೀನಾಧಿಕಾರಿಯನ್ನು ಭೇಟಿ ಮಾಡಿ ವಿಷಯ ತಿಳಿಸಿದ್ದೇವೆ. ಅವರು, ಬೆಂಗಳೂರು ಮತ್ತು ಪುಣೆಯಲ್ಲಿರುವ ‘ಡಿಫೆನ್ಸ್ ಎಸ್ಟೇಟ್ ಆಫೀಸರ್’ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಗಡುವು ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.

*
ಹೆಚ್ಚುವರಿ ಪರಿಹಾರ ಸಂಬಂಧ ಡಿ.ಸಿ ಕಚೇರಿಯ ಸ್ವತ್ತು ಜಪ್ತಿಗೆ ಮುಂದಾದ ವಿಚಾರ ಗಮನಕ್ಕೆ ಬಂದಿದೆ. ವಿಶೇಷ ಭೂಸ್ವಾಧೀನಾಧಿಕಾರಿ ಜೊತೆ ಚರ್ಚಿಸಿ ಪರಿಹರಿಸಲಾಗುವುದು.
-ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT