ಸೋಮವಾರ, ನವೆಂಬರ್ 30, 2020
25 °C
ಮುಂಡಗೋಡದಲ್ಲಿ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಮುಖ

ಮುಂಡಗೋಡ: ಕೋವಿಡ್ ಆರೈಕೆ ಕೇಂದ್ರ ಖಾಲಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಕೆಲವು ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಆಗುತ್ತಿದ್ದು, ಪಟ್ಟಣದ ಕೋವಿಡ್ ಆರೈಕೆ ಕೇಂದ್ರವು ಸದ್ಯಕ್ಕೆ ಕೋವಿಡ್ ಸೋಂಕಿತರು ಇಲ್ಲದೆ ಖಾಲಿಯಾಗಿದೆ.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 1,443 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಇದರಲ್ಲಿ 14 ಜನರು ಮೃತಪಟ್ಟಿದ್ದಾರೆ. ಎರಡು ಮೂರು ವಾರಗಳಿಂದ ಕೋವಿಡ್ ಖಚಿತಗೊಳ್ಳುವವರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ.

ತಾಲ್ಲೂಕಿನಲ್ಲಿ ಮೇ 18ರಂದು ಮೊದಲ ಕೋವಿಡ್ ಪ್ರಕರಣ ದಾಖಲಾಗಿತ್ತು. ಆಗ ಇಡಿ ತಾಲ್ಲೂಕಿನ ಜನರು, ಕೊರೊನಾ ಇಲ್ಲಿಗೂ ಬಂತಲ್ಲ ಎಂದು ಭಯಪಟ್ಟಿದ್ದರು. ಟಿಬೆಟನ್ ಕ್ಯಾಂಪ್‍ನಲ್ಲಿ ಜೂನ್ 16ರಂದು ಮೊದಲ ಕೋವಿಡ್ ಪ್ರಕರಣ ದಾಖಲಾಗಿತ್ತು. ಸತತ 77 ದಿನಗಳವರೆಗೆ ಲಾಕ್‍ಡೌನ್‍ಗೆ ಒಳಪಟ್ಟಿದ್ದ ಟಿಬೆಟನ್ ಕ್ಯಾಂಪ್‍ನಲ್ಲಿ, ಕಳೆದ ತಿಂಗಳು ಮತ್ತೆ 15 ದಿನಗಳ ಕಾಲ ಸ್ವಯಂಪ್ರೇರಣೆ ಲಾಕ್‍ಡೌನ್‍ಗೆ ಬೌದ್ಧ ಮುಖಂಡರು ನಿರ್ಧರಿಸಿದ್ದರು.

ಕ್ಯಾಂಪ್‍ನಲ್ಲಿ ಏರಿಕೆ: ತಾಲ್ಲೂಕಿನಲ್ಲಿ ಮೊದಲ ಕೊರೊನಾ ಸೋಂಕಿತ ಪ್ರಕರಣ (ಬಡ್ಡಿಗೇರಿ, ಶಿಡ್ಲಗುಂಡಿ ಗ್ರಾಮಗಳಲ್ಲಿ) ಕಂಡುಬಂದ ಒಂದು ತಿಂಗಳ ನಂತರ, ಟಿಬೆಟನ್ ಕ್ಯಾಂಪ್‍ನಲ್ಲಿ ಮೊದಲ ಸೋಂಕಿತ ವ್ಯಕ್ತಿ ಕಂಡುಬಂದಿದ್ದರು. ನಂತರದ ದಿನಗಳಲ್ಲಿ ಟಿಬೆಟನ್‍ರ ಅಂತರರಾಜ್ಯ ಪ್ರಯಾಣ ಹೆಚ್ಚಾದಂತೆ ಹಾಗೂ ಬಿಕ್ಕುಗಳಲ್ಲಿ ಅಂತರ ಕಾಪಾಡಿಕೊಳ್ಳುವುದು ಕಡಿಮೆಯಾಗಿದ್ದರಿಂದ, ಕೊರೊನಾ ಸೋಂಕಿತರ ಸಂಖ್ಯೆ ಟಿಬೆಟನ್ ಕ್ಯಾಂಪ್‍ನಲ್ಲಿ ಏರುತ್ತಾ ಸಾಗಿತು ಎಂದು ಟಿಬೆಟನ್ ಮುಖಂಡರು ಅಭಿಪ್ರಾಯಪಡುತ್ತಾರೆ.

‘ಭಯವಿನ್ನೂ ದೂರವಾಗಿಲ್ಲ’: ‘ಸದ್ಯ 53 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ ಟಿಬೆಟನ್ ಕ್ಯಾಂಪ್‍ನಲ್ಲಿ 43 ಜನರು, ಹೋಂ ಐಸೋಲೇಷನ್‍ನಲ್ಲಿ ಆರು ಹಾಗೂ ಶಿರಸಿ ಹಾಗೂ ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 1,376 ಜನ ಸೋಂಕಿತರು ಗುಣಮುಖರಾಗಿದ್ದಾರೆ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಚ್.ಎಫ್.ಇಂಗಳೆ ಹೇಳಿದರು.

‘ಕೋವಿಡ್ ಭಯ ಇನ್ನೂ ದೂರವಾಗಿಲ್ಲ. ಚಳಿಗಾಲ ಮತ್ತು ಹಬ್ಬದ ಸಂದರ್ಭದಲ್ಲಿ ಪಟಾಕಿಯಿಂದ ಬರುವ ಹೊಗೆಯಿಂದ ಕೋವಿಡ್ ಪ್ರಕರಣಗಳಲ್ಲಿ ಏರುವ ಸಾಧ್ಯತೆಯಿದೆ’ ಎಂದರು.‌

---

* ಸದ್ಯಕ್ಕೆ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೋಂಕಿತರು ಯಾರೂ ಇಲ್ಲ. ಜಿಲ್ಲಾಧಿಕಾರಿ ಅವರ ಆದೇಶ ಬಂದರೆ ಕೋವಿಡ್ ಕೇಂದ್ರವನ್ನು ಸ್ಥಗಿತಗೊಳಿಸಲಾಗುವುದು.

– ಶ್ರೀಧರ ಮುಂದಲಮನಿ, ತಹಶೀಲ್ದಾರ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು