ಮಂಗಳವಾರ, ಫೆಬ್ರವರಿ 25, 2020
19 °C
ದೊಡ್ಡ ಕಟ್ಟೆ ನಿರ್ಮಾಣದ ನಂತರ ಸಮಸ್ಯೆ ಪರಿಹಾರ: ಬಂದರು ಇಲಾಖೆ

ಅಘನಾಶಿನಿ– ತದಡಿ ನಡುವೆ ಅಪಾಯಕಾರಿ ಬಾರ್ಜ್

ಎಂ.ಜಿ.ನಾಯ್ಕ Updated:

ಅಕ್ಷರ ಗಾತ್ರ : | |

Prajavani

ಕುಮಟಾ: ತಾಲ್ಲೂಕಿನ ಅಘನಾಶಿನಿ ನದಿಯ ತದಡಿ ಹಾಗೂ ಅಘನಾಶಿನಿ ಗ್ರಾಮಗಳ ನಡುವೆ ಜನ, ಬೈಕ್‌ಗಳ ಸಾಗಾಟಕ್ಕೆ ಬಂದರು ಇಲಾಖೆ ಕಲ್ಪಿಸಿರುವ ಬಾರ್ಜ್ ತೀರಾ ಕಿರಿದಾಗಿದೆ. ಜೊತೆಗೇ ಅಪಾಯಕಾರಿಯಾಗಿದೆ.

ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನಿತ್ಯವೂ ನೂರಾರು ಜನರು ಈ ಬಾರ್ಜ್ ಮೇಲೆ ಅಘನಾಶಿನಿ ಮತ್ತು ತದಡಿ ನಡುವೆ ಸಂಚರಿಸುತ್ತಿದ್ದಾರೆ. ಒಮ್ಮೆ ಹತ್ತಾರು ಜನರು ಹಾಗೂ ಎಂಟು ಬೈಕ್‌ಗಳನ್ನು ಮಾತ್ರ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸಬಹುದಾಗಿದೆ. ಬಾರ್ಜ್ ಮೇಲೆ ಹೆಚ್ಚಿನ ಭಾರ ಬಿದ್ದರೆ ನೀರಿನಲ್ಲಿ ಮುಳುಗುವ ಅಪಾಯವಿದೆ.

‘ಅಘನಾಶಿನಿ ನದಿ ಸಮುದ್ರ ಸೇರುವ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಸಮುದ್ರ ಅಲೆಗಳ ಅಬ್ಬರ ಜೋರಾಗಿರುತ್ತದೆ. ಬಾರ್ಜ್ ಚಿಕ್ಕದಿರುವುದರಿಂದ ಮಳೆಗಾಲದ ಎರಡು ತಿಂಗಳು ಬಾರ್ಜ್ ಸೌಲಭ್ಯ ಇರುವುದಿಲ್ಲ. ಆಗ ಜನರು ಖಾಸಗಿ ದೋಣಿ ಮೂಲಕ ಅಥವಾ ಕುಮಟಾಕ್ಕೆ ಬಂದು ಅಲ್ಲಿಂದ ಮಿರ್ಜಾನ, ಹಿರೇಗುತ್ತಿ, ಮಾದನಗೇರಿ ಮೂಲಕ ತದಡಿ ತಲುಪಬೇಕಾಗುತ್ತದೆ. ಬಂದರು ಇಲಾಖೆ ಟೆಂಡರ್ ಕರೆದು ಪೂರೈಸಿದ ಬಾರ್ಜ್ ಅನ್ನು ಗುತ್ತಿಗೆದಾರರು ಜನರ ಓಡಾಟಕ್ಕೆ ಬಳಸುತ್ತಿರುವುದು ಅನಿವಾರ್ಯವಾಗಿದೆ’ ಎಂದು ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ಲಂಬೋದರ ನಾಯ್ಕ ತಿಳಿಸಿದರು.

ಹೆಚ್ಚಿನ ಮಾಹಿತಿ ನೀಡಿದ ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸ್ವಾಮಿ, ‘ಅಘನಾಶಿನಿ ನದಿಯ ತದಡಿ ದಡಕ್ಕೆ ದೊಡ್ಡ ಬಾರ್ಜ್ ನಿಲ್ಲುವಂಥ ಬಂದರು ಕಟ್ಟೆ ನಿರ್ಮಾಣವಾಗಿದೆ. ಅಘನಾಶಿನಿ ದಡದಲ್ಲಿ ಬಂದರು ಕಟ್ಟೆ ಚಿಕ್ಕದಿದ್ದು, ದೊಡ್ಡ ಕಟ್ಟೆಯನ್ನು ಹೊಸದಾಗಿ ನಿರ್ಮಿಸಿದ ನಂತರ ದೊಡ್ಡ ಬಾರ್ಜ್ ಸೌಲಭ್ಯ ಕಲ್ಪಿಸಲಾಗುವುದು. ಈ ಬಗ್ಗೆ ಕ್ರಿಯಾಯೋಜನೆ ತಯಾರಿಸಲಾಗಿದ್ದು ಕೆಲವು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು