ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರ ಗೃಹಭಾಗ್ಯ ಜಾರಿ ತಡವಾದರೆ ಕ್ರಮ: ಎಚ್ಚರಿಕೆ

Last Updated 19 ಆಗಸ್ಟ್ 2022, 15:47 IST
ಅಕ್ಷರ ಗಾತ್ರ

ಕಾರವಾರ: ‘ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯ ಪ್ರಯೋಜನ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಕಾರಣ ನೀಡಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಕಸ ವಿಲೇವಾರಿಗೆ ಸೂಕ್ತವಾದ ಜಾಗವನ್ನು ನಿಗದಿಪಡಿಸಬೇಕು. ಆಗಸ್ಟ್ ತಿಂಗಳ ಒಳಗಾಗಿ ವಿಲೇವಾರಿ ಘಟಕಗಳ ಕಾರ್ಯ ಶುರುವಾಗಬೇಕು’ ಎಂದು ಸೂಚನೆ ನೀಡಿದರು.

‘ವಸತಿ ಯೋಜನೆಯಲ್ಲಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ಮಾಡಬೇಕು. ಈಗಾಗಲೇ ಪೂರ್ಣಗೊಳ್ಳದ ಮನೆಗಳ, ಸಂಪೂರ್ಣವಾದ ಮನೆಗಳ ಹಾಗೂ ಪ್ರಗತಿಯಲ್ಲಿರುವ ಮನೆಗಳ ಮಾಹಿತಿಯನ್ನು ಆ.25ರೊಳಗಾಗಿ ನೀಡಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ಪ್ರಧಾನಮಂತ್ರಿ ಅತಿ ಸಣ್ಣ ಆಹಾರ ಸಂಸ್ಕರಣಾ ಉದ್ಯಮ (ಪಿ.ಎಂ.ಎಫ್.ಎಂ.ಇ) ಯೋಜನೆಯ ಅಡಿಯಲ್ಲಿ ಸ್ವಯಂ ಉದ್ಯೋಗ ಮಾಡಲು ಸಹಾಯಧನವನ್ನು ನೀಡಲಾಗುತ್ತಿದೆ. ಸದಸ್ಯರೊಂದಿಗೆ ಚರ್ಚಿಸಿ ಕೂಲಂಕಷ ಅಧ್ಯಯನ ಮಾಡಬೇಕು. ಸೆಪ್ಟೆಂಬರ್ ಅಂತ್ಯದೊಳಗಾಗಿ ನಿಗದಿತ ಗುರಿಯಂತೆ 600 ಫಲಾನುಭವಿಗಳಿಗೆ ಯೋಜನೆ ಲಾಭ ತಲುಪುವಂತೆ ಆಗಬೇಕು‌’ ಎಂದು ನಿರ್ದೇಶನ ನೀಡಿದರು.

‘ನಿಗದಿತ ಗುರಿಯನ್ನು ಇಟ್ಟುಕೊಂಡು ಸರಿಯಾದ ಸಮಯದ ಒಳಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕು. ಇದರಿಂದ ಅಭಿವೃದ್ಧಿ ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟಿಲ್ಲಾ ವರ್ಗೀಸ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ಎಸ್.ಕಮ್ಟರ್, ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT