ಶುಕ್ರವಾರ, ನವೆಂಬರ್ 27, 2020
20 °C
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪ

ಶಿರಸಿ | ಜಿಲ್ಲೆಯಲ್ಲಿ ನಿಂತ ನೀರಾದ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿಯಲ್ಲಿ ನಡೆದ ಬ್ಲಾಕ್ ಅಧ್ಯಕ್ಷರ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ ಮಾತನಾಡಿದರು

ಶಿರಸಿ: ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಎರಡು ವರ್ಷಗಳಾಗುತ್ತ ಬಂದರೂ, ಜನಪ್ರತಿನಿಧಿಗಳಿಗೆ ಅಧಿಕಾರ ನೀಡಿಲ್ಲ. ಹೀಗಾಗಿ, ನಗರ, ಪಟ್ಟಣ ಪ್ರದೇಶಗಳಲ್ಲಿ ಅಭಿವೃದ್ಧಿ ನಿಂತ ನೀರಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಆರೋಪಿಸಿದರು.

ಗುರುವಾರ ಇಲ್ಲಿ ಜಿಲ್ಲೆಯ ಎಲ್ಲ ಬ್ಲಾಕ್‌ಗಳ ಸಭೆ ನಡೆಸಿದ ನಂತರ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಇರುವಾಗ ಟೀಕಿಸುತ್ತಿದ್ದ ಬಿಜೆಪಿಗರು ಈಗ ಏಕೆ ಸುಮ್ಮನಾಗಿದ್ದಾರೆ? ಸ್ಥಳೀಯ ಶಾಸಕರು, ವಿಧಾನಸಭೆ ಸ್ಪೀಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೆ. ಆದರೆ, ಮಳೆಗಾಲದಲ್ಲೂ ನಗರದ ಜನರಿಗೆ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಬಂದಿದೆ. ಬಿಜೆಪಿಯ ಜನಪ್ರತಿನಿಧಿಗಳೇ ಕೆಲಸ ಮಾಡಿಕೊಡುವಂತೆ ಮನವಿ ನೀಡುವ ಪರಿಸ್ಥಿತಿ ಬಂದಿದೆ. ಆಯ್ಕೆಯಾಗಿರುವ ಜನಪ್ರತಿನಿಧಿಗಳಿಗೆ ಅಧಿಕಾರ ನೀಡುವ ಕೆಲಸ ಯಾಕಾಗಿ ಆಗುತ್ತಿಲ್ಲ. ಸರ್ಕಾರದಲ್ಲಿರುವ ಸ್ಥಳೀಯ ಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ಕೋವಿಡ್ 19 ಭಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಆಗುತ್ತಿಲ್ಲ. ಸಾರ್ವಜನಿಕರನ್ನು ಕಚೇರಿಯೊಳಗೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ವೃದ್ಧಾಪ್ಯ ವೇತನ, ವಿಧವಾ ವೇತನದಂತಹ ನೆರವು ಬರುತ್ತಿಲ್ಲ. ಬಡವರಿಗೆ ದೈನಂದಿನ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ದೂರಿದರು.

‘ಬಿಎಸ್‌ಎನ್‌ಎಲ್ ನೌಕರರು ದೇಶದ್ರೋಹಿಗಳು ಎಂದು ಸ್ಥಳೀಯ ಸಂಸದರು ಯಾವ ಅರ್ಥದಲ್ಲಿ ಹೇಳಿದರೋ ತಿಳಿಯದು. ಅವರದೇ ಸರ್ಕಾರ ಆಡಳಿತದಲ್ಲಿದೆ. ಅವರದೇ ಸರ್ಕಾರದ ಅಡಿಯಲ್ಲಿ ಬರುವ ಸಂಸ್ಥೆಯ ಸಿಬ್ಬಂದಿಗೆ ದೇಶದ್ರೋಹಿಗಳು ಎಂದಿದ್ದಾರೆ. ಇದು ಸಂಸದರ ಅಸಹಾಯಕತೆಯ ಹೇಳಿಕೆಯಾಗಿರಬಹುದಾ ಎಂಬುದು ಸಹ ತಿಳಿಯುತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ, ವಿವಿಧ ಬ್ಲಾಕ್‌ಗಳ ಅಧ್ಯಕ್ಷರಾದ ಸಿ.ಎಫ್.ನಾಯ್ಕ, ಜಗದೀಶ ಗೌಡ, ಕೃಷ್ಣ ಹಿರೇಹಳ್ಳಿ, ಜಗದೀಪ ತೆಂಗೇರಿ, ವಸಂತ ನಾಯ್ಕ, ಪ್ರಮುಖರಾದ ಎಚ್.ಎಂ.ನಾಯ್ಕ, ಬಸವರಾಜ ದೊಡ್ಮನಿ, ದೀಪಕ ದೊಡ್ಡೂರು, ಸತೀಶ ನಾಯ್ಕ, ಪ್ರಸನ್ನ ಶೆಟ್ಟಿ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು