ಶನಿವಾರ, ಜುಲೈ 31, 2021
27 °C
ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ

ಗುಡಿಯಲ್ಲಿ ಮೊಳಗಿದ ಗಂಟೆ ನಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ನಾಡಿನ ಅಧಿದೇವತೆ ಮಾರಿಕಾಂಬಾ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಭಕ್ತರಲ್ಲಿ ಸಂಭ್ರಮ ಮೂಡಿಸಿದೆ. ಸೋಮವಾರ ಬೆಳಿಗ್ಗೆಯಿಂದಲೇ ನೂರಾರು ಭಕ್ತರು ದೇವಿಯ ದರ್ಶನ ಪಡೆದರು.

ದೇವಾಲಯದಲ್ಲಿ ದೇವಿ ಆಸೀನಳಾಗಿರುವುದನ್ನು ಮೂರುವರೆ ತಿಂಗಳ ಸುದೀರ್ಘ ಬಿಡುವಿನ ನಂತರ ಕಂಡ ಭಕ್ತರು ಭಾವಾವೇಷಗೊಂಡರು. ಮಾರ್ಚ್ 3ರಿಂದ 11ರವರೆಗೆ ಮಾರಿಕಾಂಬಾ ಜಾತ್ರೆ ನಡೆದಿತ್ತು. ಮಾರ್ಚ್‌ 4ರಂದು ರಥಾರೂಢಳಾಗಿ ದೇವಿ ಬಿಡಕಿಬೈಲಿನ ಜಾತ್ರಾ ಗದ್ದುಗೆಗೆ ತೆರಳಿದ್ದಳು. ಸಂಪ್ರದಾಯದಂತೆ ಜಾತ್ರೆಯ ಕೊನೆಯ ದಿನ ದೇವಿಯನ್ನು ವಿಸರ್ಜನೆ ಮಾಡಿ, ಯುಗಾದಿಯಂದು ಪ್ರತಿಷ್ಠಾಪಿಸಲಾಗುತ್ತದೆ. ಆದರೆ, ಅಷ್ಟರಲ್ಲಿ ಕೋವಿಡ್ 19 ನಿಯಂತ್ರಿಸಲು ಲಾಕ್‌ಡೌನ್ ಘೋಷಣೆಯಾದ ಕಾರಣಕ್ಕೆ, ದೇವಿಯ ಪ್ರತಿಷ್ಠಾಪನೆಯನ್ನು ದೇವಾಲಯದ ಕೆಲವೇ ಪ್ರಮುಖರ ಉಪಸ್ಥಿತಿಯಲ್ಲಿ ನಡೆಸಲಾಗಿತ್ತು. ಅಂದು ಭಕ್ತರಿಗೆ ದರ್ಶನಕ್ಕೆ ಅವಕಾಶ ಸಿಗಲಿಲ್ಲ.

ಸುಮಾರು 72 ದಿನಗಳ ನಂತರ ದೇವಿ ದೇವಾಲಯದ ಪೀಠದಲ್ಲಿ ದರ್ಶನ ನೀಡಿದ್ದನ್ನು ಭಕ್ತರು ಕಣ್ತುಂಬಿಕೊಂಡರು. ಮಾರಿಕಾಂಬಾ ದೇವಿಗೆ ಹಾವೇರಿಯಲ್ಲಿ ದೊಡ್ಡ ಭಕ್ತ ಸಮೂಹವಿದೆ. ಅವರು ವಾರಕ್ಕೊಮ್ಮೆ ಬಂದು ದೇವಿಯ ದರ್ಶನ ಪಡೆಯುತ್ತಿದ್ದರು. ಲಾಕ್‌ಡೌನ್ ಕಾರಣಕ್ಕೆ ಬರಲಾಗದೇ ಬೇಸರದಲ್ಲಿದ್ದ ಅನೇಕರು, ಸೋಮವಾರ ಬೆಳಿಗ್ಗೆಯೇ ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು. ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರ ಒಳಗೆ ಬಂದ ಭಕ್ತರ ಸಂಖ್ಯೆ 1000 ಮಿಕ್ಕಿತ್ತು. ಮಧ್ಯಾಹ್ನ 1.30ರಿಂದ 6 ಗಂಟೆಯವರೆಗೆ ಮತ್ತಷ್ಟು ಭಕ್ತರು ಭೇಟಿ ನೀಡಿದರು.

‘ಕಷ್ಟದಲ್ಲಿದ್ದಾಗ ಪೊರೆಯುವವಳು ಮಾರಿಕಾಂಬೆ. ಆಕೆಯ ಬಳಿ ಕಷ್ಟ ಹೇಳಿಕೊಂಡರೆ ಮನಸ್ಸಿಗೆ ಸಮಾಧಾನ. ಆಕೆಯನ್ನು ಕಾಣದೇ ಬೇಸರವಾಗಿತ್ತು. ಇಂದು ಮನಸ್ಸಿಗೆ ಸಮಾಧಾನವಾಯಿತು’ ಎಂದರು ಭಕ್ತೆ ಸೀತವ್ವ.

‘ಹಣ್ಣು–ಕಾಯಿ ಹೂವಿನ ಅಂಗಡಿಯವರಿಗೆ ಸಾಮಾನ್ಯ ದಿನದಲ್ಲಿ ಸರಾಸರಿ ₹ 1000 ವ್ಯಾಪಾರ ಆಗುತ್ತಿತ್ತು. ಈಗ ₹ 100 ವ್ಯಾಪಾರವೂ ಕಷ್ಟವಾಗಿದೆ. ದೇವಾಲಯದಲ್ಲಿ ಹಣ್ಣು, ಕಾಯಿ ಸೇವೆ, ಪ್ರಸಾದ ವಿತರಣೆ ಇಲ್ಲದ ಕಾರಣ ಗ್ರಾಹಕರೇ ಇಲ್ಲ. ಕರ್ಪೂರ, ಅಗರಬತ್ತಿ ಕೂಡ ಖಾಲಿಯಾಗುತ್ತಿಲ್ಲ. ಮಾರಿಕಾಂಬಾ ದೇವಾಲಯಕ್ಕೆ ಬರುವ ಭಕ್ತರನ್ನು ಅವಲಂಬಿಸಿ 12ಕ್ಕೂ ಹೆಚ್ಚು ಅಂಗಡಿಕಾರರು, ಬೀದಿಬದಿ ವ್ಯಾಪಾರಿಗಳು ಜೀವನ ನಡೆಸುತ್ತಿದ್ದಾರೆ. ಈಗ ವ್ಯಾಪಾರವೇ ಇಲ್ಲದೆ ಎಲ್ಲರೂ ಕಂಗಾಲಾಗಿದ್ದಾರೆ ಎಂದು ಹಣ್ಣು–ಕಾಯಿ ವ್ಯಾಪಾರಿ ನಿಖಿಲ್ ಶೆಟ್ಟಿ ಪ್ರತಿಕ್ರಿಯಿಸಿದರು.

ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿರುವ ದೇವಾಲಯಗಳ ಬಾಗಿಲು ತೆರೆದು, ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಜುಗುಣಿಯ ವೆಂಕಟರಮಣ ದೇವಾಲಯಕ್ಕೆ ಅನೇಕ ಭಕ್ತರು ಭೇಟಿ ನೀಡಿದರು. ಸೋದೆ ವಾದಿರಾಜ ಮಠದಲ್ಲಿ ಭಕ್ತರ ಭೇಟಿ ಇನ್ನೂ ಒಂದು ತಿಂಗಳು ಪ್ರವೇಶ ನಿರ್ಬಂಧ ಮುಂದುವರಿದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು