ಮುಂಡಗೋಡ ತಾಲ್ಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಾಯಿಗಳ ದಾಳಿಗೆ ಜಿಂಕೆ ಸಾವು

7

ಮುಂಡಗೋಡ ತಾಲ್ಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ನಾಯಿಗಳ ದಾಳಿಗೆ ಜಿಂಕೆ ಸಾವು

Published:
Updated:
Deccan Herald

ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಮಂಗಳವಾರ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಯೊಂದು ನಾಯಿಗಳ ದಾಳಿಯಿಂದ ಮೃತಪಟ್ಟಿದೆ.

ಗ್ರಾಮದತ್ತ ಬಂದಿದ್ದ ಮೂರು ವರ್ಷದ ಗಂಡು ಜಿಂಕೆಯನ್ನು ನಾಲ್ಕೈದು ನಾಯಿಗಳು ಬೆನ್ನಟ್ಟಿದ್ದವು. ಅವುಗಳಿಂದ ತಪ್ಪಿಸಿಕೊಂಡು ಅರಣ್ಯದತ್ತ ಹೋಗಿದ್ದ ಜಿಂಕೆಯನ್ನು ಬೆನ್ನಟ್ಟಿದ ನಾಯಿಗಳು ಪುನಃ ಗ್ರಾಮದತ್ತ ಓಡಿಸಿಕೊಂಡು ಬಂದವು. ಅದನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದವು. ಗಂಭೀರವಾಗಿ ಗಾಯಗೊಂಡ ಜಿಂಕೆ ಸ್ಥಳದಲ್ಲಿಯೇ ಸಾವನ್ನಪ್ಪಿತು.

ರಕ್ಷಣೆಗೆ ಗ್ರಾಮಸ್ಥರ ಹಿಂದೇಟು

ಜಿಂಕೆಯ ಮೇಲೆ ನಾಯಿಗಳ ಹಿಂಡು ದಾಳಿ ನಡೆಸುತ್ತಿದ್ದರೂ ಗ್ರಾಮಸ್ಥರು ನಾಯಿಗಳನ್ನು ಓಡಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರಲಿಲ್ಲ. ಅರಣ್ಯ ಸಿಬ್ಬಂದಿ ಒತ್ತಾಯ ಮಾಡಿದ ನಂತರ ಬಂದ ಗ್ರಾಮಸ್ಥರು, ನಾಯಿಗಳನ್ನು ಓಡಿಸಿದರು ಎಂದು ಅರಣ್ಯ ಸಿಬ್ಬಂದಿ ನಿಂಗಪ್ಪ ಕಲಾದಗಿ ಹೇಳಿದರು.

ಇತ್ತೀಚೆಗೆ ಇದೇ ಅರಣ್ಯ ವ್ಯಾಪ್ತಿಯಲ್ಲಿ ಹೆಬ್ಬಾವಿನ ಬಾಯಿಯಿಂದ ಜಿಂಕೆಯೊಂದನ್ನು ರಕ್ಷಿಸಲು ಮುಂದಾಗಿದ್ದ ಗ್ರಾಮಸ್ಥರು, ಹೆಬ್ಬಾವನ್ನು ಕೊಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಸಿಬ್ಬಂದಿ ಏಳು ಜನರನ್ನು ಬಂಧಿಸಿ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಇದರಿಂದ ಆತಂಕಗೊಂಡಿದ್ದ ಗ್ರಾಮಸ್ಥರು, ಮಂಗಳವಾರ ನಾಯಿಗಳ ಹಿಂಡು ದಾಳಿ ನಡೆಸುತ್ತಿದ್ದರೂ ಜಿಂಕೆಯನ್ನು ರಕ್ಷಿಸಲು ಹಿಂದೇಟು ಹಾಕಿದರು ಎಂದು ಅರಣ್ಯ ಸಿಬ್ಬಂದಿ ತಿಳಿಸಿದರು.

‘ನಾಯಿಗಳ ದಾಳಿಯಿಂದ ಜಿಂಕೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ನಡೆಸಿ ನಂತರ ಟಿಂಬರ್ ಡಿಪೊ ಆವರಣದಲ್ಲಿ ಸುಡಲಾಯಿತು’ ಎಂದು ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೋಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !