ಗುರುವಾರ , ಮೇ 6, 2021
23 °C
‘ಕ್ರಿಮ್ಸ್’ ಆವರಣದಲ್ಲಿದ್ದ ಪುಟಾಣಿಗಳು

ವಲಸೆ ಕಾರ್ಮಿಕರ 11 ಮಕ್ಕಳ ದಾಖಲಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದಲ್ಲಿ ವಲಸೆ ಕಾರ್ಮಿಕರ 11 ಮಕ್ಕಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಶುಕ್ರವಾರ ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿಸಿದರು. ಅಲ್ಲದೇ ಪಾಲಕರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಶಾಲೆಗೆ ಕಡ್ಡಾಯವಾಗಿ ಕಳುಹಿಸುವಂತೆ ಸೂಚಿಸಿದರು.

ನಗರದ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಆಸ್ಪತ್ರೆ ನಿರ್ಮಾಣದ ಕಾಮಗಾರಿಗೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಕಾರ್ಮಿಕರು ಬಂದಿದ್ದಾರೆ. ಈಗಾಗಲೇ ನಾಲ್ಕು ತಿಂಗಳಿನಿಂದ ಇಲ್ಲಿ ನೆಲೆಸಿರುವ ಕಾರ್ಮಿಕರ ಜೊತೆಗೆ ಅವರ ಕುಟುಂಬವೂ ಶೆಡ್‌ಗಳಲ್ಲಿ ನೆಲೆಸಿದೆ. ಇನ್ನೂ ಕನಿಷ್ಠ ಆರು ತಿಂಗಳು ಅವರು ಇಲ್ಲಿ ಇರಲಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ದಾಖಲಾತಿ ಮಾಡುವಂತೆ ಮನವೊಲಿಸಿದರು.

ಮಕ್ಕಳನ್ನು ನಗರದ ಪೊಲೀಸ್ ಹೆಡ್ ಕ್ವಾರ್ಟರ್ಸ್‌ ಶಾಲೆಗೆ ದಾಖಲಾತಿ ಮಾಡಲಾಗಿದೆ. ಸೋಮವಾರ ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು, ಮಂಗಳವಾರದಿಂದ ಮಕ್ಕಳನ್ನು ಕಳುಹಿಸುವುದಾಗಿ ಪಾಲಕರು ತಿಳಿಸಿದ್ದಾರೆ.

ಎರಡು ದಿನಗಳಿಂದ ಮಕ್ಕಳಿಗೆ ಶಿಕ್ಷಕರು ಕನ್ನಡ, ಇಂಗ್ಲಿಷ್ ಮತ್ತು ಗಣಿತದ ಬೋಧನೆ ಮಾಡುತ್ತಿದ್ದಾರೆ. ಅವರಿಗೆ ಕನ್ನಡ ಮಾತಾಡಲು ಬಾರದಿದ್ದರೂ ಅಕ್ಷರಗಳನ್ನು ಗುರುತಿಸಿ ಹೇಳುವಷ್ಟರ ಮಟ್ಟಿಗೆ ಕಲಿತಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ ಸುದ್ದಿಗಾರರ ಜೊತೆ ಮಾತನಾಡಿ, ‘ಮಕ್ಕಳಿಗೆ ಇಲಾಖೆಯಿಂದ ಸಮವಸ್ತ್ರಗಳನ್ನು ಹೊಲಿಸಿ ನೀಡಲಾಗುವುದು. ಕಲ್ಲೂರು ಎಜುಕೇಶನ್ ಟ್ರಸ್ಟ್‌ನವರು ಚೀಲಗಳನ್ನು ನೀಡಿದ್ದಾರೆ. ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಶಿಕ್ಷಣ ಇಲಾಖೆಯ ಧ್ಯೇಯವಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ’ ಎಂದರು.

ಈ ಸಂದರ್ಭದಲ್ಲಿ ಸಿ.ಆರ್.ಪಿ ಸುರೇಂದ್ರ ಗಾಂವ್ಕರ್, ಹೆಡ್‌ಕ್ವಾರ್ಟರ್ಸ್ ಶಾಲೆಯ ಮುಖ್ಯ ಶಿಕ್ಷಕಿ ಸಂಜೀವಿನಿ ಬಿ.ನಾಯಕ, ಶಿಕ್ಷಕರಾದ ದೇವಾಂಗಿನಿ ನಾಯಕ, ಲತಾ ನಾಯಕ, ಸಿಸಿಲಿಯಾ ಫರ್ನಾಂಡಿಸ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು