ಮಂಗಳವಾರ, ಅಕ್ಟೋಬರ್ 26, 2021
21 °C
ಪಹಣಿ ಪತ್ರದ ಮೂಲಕವೇ ವ್ಯವಹರಿಸಲು ಅವಕಾಶ ನೀಡಲು ಒತ್ತಾಯ

ಕಾರವಾರ: ಇ- ಸ್ವತ್ತಿನಿಂದ ವಿನಾಯಿತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಬಿನ್ ಶೇತ್ಕಿ ಜಮೀನಿಗೆ ಇ–ಸ್ವತ್ತು ಮತ್ತು ಇ– ಖಾತೆಯಿಂದ ವಿನಾಯಿತಿ ನೀಡಬೇಕು. ಪಹಣಿ ಪತ್ರದ ಮೂಲಕವೇ ವ್ಯವಹರಿಸಲು ಅವಕಾಶ ಕಲ್ಪಿಸಬೇಕು ಎಂದು ನಗರದ ಹಲವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ ಮೂಲಕ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬುಧವಾರ ಮನವಿ ಸಲ್ಲಿಸಿದರು.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, ‘ಎರಡೇ ಕಾಗದ ಪತ್ರಗಳನ್ನು ಪಡೆದುಕೊಳ್ಳಲು ಪಡೆಯಲು ಹತ್ತಾರು ದಾಖಲೆಗಳನ್ನು ಲಗತ್ತಿಸಬೇಕು. ತಿಂಗಳುಗಟ್ಟಲೆ ಅಲೆದಾಡಿದರೂ ಪರಿಹಾರವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಐದಾರು ವರ್ಷಗಳ ಮೊದಲು ಬಿನ್ ಶೇತ್ಕಿ ಜಮೀನಿಗೆ ಸಂಬಂಧಿಸಿ ಪಹಣಿ ಪತ್ರದಲ್ಲೇ ವ್ಯವಹಾರ ನಡೆಯುತ್ತಿತ್ತು. ಮಕ್ಕಳ ಮದುವೆ, ಆಸ್ಪತ್ರೆಗಳಿಗೆ ದಾಖಲಾದಾಗ ಮುಂತಾದ ಅಗತ್ಯ ಸಂದರ್ಭಗಳಲ್ಲಿ ಜಮೀನು ಬಳಸಿಕೊಂಡು ಹಣಕಾಸು ನೆರವು ಪಡೆಯಲು ಸಾಧ್ಯವಾಗುತ್ತಿತ್ತು. ಬಿನ್ ಶೇತ್ಕಿ ಜಮೀನಿನ ನಿರ್ವಹಣೆ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ವರ್ಗಾವಣೆ ಮಾಡಿದ್ದರಿಂದ ಸಮಸ್ಯೆ ಉಲ್ಬಣಿಸಿತು’ ಎಂದು ದೂರಿದರು.

‘ಜಿಲ್ಲೆಯ ಜನ ಈಗಾಗಲೇ ವಿವಿಧ ಯೋಜನೆಗಳಿಗೆ ಜಮೀನು ಕಳೆದುಕೊಂಡಿದ್ದಾರೆ. ಇರುವ ಜಮೀನಿನಲ್ಲೇ ಜೀವನ ನಡೆಸಲು ಇ ಸ್ವತ್ತು ದುಃಸ್ವಪ್ನವಾಗಿದೆ. ಇ ಸ್ವತ್ತು ಮತ್ತು ಇ ಖಾತೆ ಮಾಡಲು ಬಡಾವಣೆ ನಕ್ಷೆ ಕಡ್ಡಾಯ. ಒಂಬತ್ತು ಮೀಟರ್ (29.50 ಅಡಿ) ಸ್ವಂತ ಜಮೀನನ್ನು ರಸ್ತೆಗಾಗಿ ಹಸ್ತಾಂತರಿಸಬೇಕು. ಸಾರ್ವಜನಿಕ ರಸ್ತೆ ಎಂದು ನಿರಾಕ್ಷೇಪಣಾ ಪತ್ರ ಪಡೆಯಬೇಕು. ಆ ರಸ್ತೆಯು ಡಾಂಬರು ಅಥವಾ ಕಾಂಕ್ರೀಟ್‌ನದ್ದಾಗಿರಬೇಕು’ ಎಂದು ವಿವರಿಸಿದರು.

‘ನಾಲ್ಕೈದು ದಶಕಗಳ ಹಿಂದಿನ ಮನೆಯಾಗಿದ್ದು, ತೆರಿಗೆ ಪಾವತಿಸುತ್ತಿದ್ದರೂ ಬಿನ್ ಶೇತ್ಕಿ ಅಡಿಯಲ್ಲಿ ಬರುವುದಿಲ್ಲ. ಅವುಗಳಿಗೆ ಅನಧಿಕೃತ ಎಂದು ಫಾರ್ಮ್ ನಂಬರ್ 11 (ಬಿ) ನೀಡಲಾಗುತ್ತಿದೆ. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಬಹುತೇಕರು ತುಂಡು ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ರಸ್ತೆಗೆಂದು 12 ಅಡಿ ಜಮೀನು ಬಿಟ್ಟುಕೊಟ್ಟಿದ್ದಾರೆ. ಆಗ ಕಾನೂನು ಪ್ರಕಾರ ನೋಂದಣಿಯಾದ ಜಮೀನಿನಲ್ಲಿ ಈಗ ಮನೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಅದನ್ನು ಮಾರಾಟ ಮಾಡಲೂ ಆಗುತ್ತಿಲ್ಲ. ಈ ರೀತಿ ತೊಂದರೆಗೆ ಸಿಲುಕಿಸುವಂಥ ನಿಯಮಗಳ ಅಗತ್ಯವೇನು’ ಎಂದು ಕೇಳಿದರು.

‘30 ಅಡಿ ರಸ್ತೆ ಯಾಕೆ?’

‘ಮನೆಗಳಿಗೆ ಹೋಗಲು 12ರಿಂದ 15 ಅಡಿಗಳ ರಸ್ತೆ ಸಾಕು. 30 ಅಡಿಗಳಷ್ಟು ವಿಸ್ತಾರವಾದ ರಸ್ತೆ ನಿರ್ಮಿಸಿಕೊಂಡು, ಅದರಲ್ಲಿ 18 ಟೈರ್‌ಗಳ ಲಾರಿಗಳನ್ನು ದಿನಬಳಕೆಗೆ ಚಲಾಯಿಸುತ್ತೇವೆಯೇ’ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ.

‘ಆಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳ ಸಂಚಾರಕ್ಕೆ 15 ಅಡಿಗಳ ರಸ್ತೆ ಸಾಕಾಗುತ್ತದೆ. 30 ಅಡಿಗಳಷ್ಟು ಜಾಗವನ್ನು ರಸ್ತೆಗೇ ಬಿಟ್ಟರೆ ಬದುಕು ಬೀದಿಗೆ ಬೀಳುತ್ತದೆ. ಹಾಗಾಗಿ ಜಿಲ್ಲೆಗೆ ಇ ಸ್ವತ್ತು ಮತ್ತು ಇ ಖಾತೆಯಿಂದ ವಿನಾಯಿತಿ ನೀಡಬೇಕು’ ಎಂದು ಆಗ್ರಹಿಸಲಾಗಿದೆ.

ಪ್ರಮುಖರಾದ ಕೃಷ್ಣಾನಂದ ಬಾಂದೇಕರ್, ಸ್ವಪ್ನಾ ಗುನಗಿ, ದೀಪಾಶ್ರೀ ಎಂ.ನಾಯ್ಕ, ಇಮ್ತಿಯಾಜ್ ಬುಖಾರಿ, ಸ್ಯಾಮ್ಸನ್ ಡಿಸೋಜಾ, ಆನಂದು ಎಸ್.ನಾಯ್ಕ, ಗಣೇಶ ಭೂಮ್ಕರ್, ಮನ್ಸೂರ್ ಮೊಮಿನ್, ಕಾಶಿನಾಥ್ ಎಂ.ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು