ಶನಿವಾರ, ಜುಲೈ 31, 2021
23 °C
40 ಎಕರೆಯಲ್ಲಿ ಭತ್ತದ ಬೇಸಾಯ ಮಾಡುತ್ತಿರುವ ಕಾರವಾರ ತಾಲ್ಲೂಕಿನ ಹಳಗಾದ ರೈತ

ಗೇಣಿ ಕೃಷಿಯಲ್ಲಿ ದೊರೆತ ‘ಯಶ’ಸ್ಸು

ಸದಾಶಿವ ಎಂ.ಎಸ್ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಇವರು ತಮಗೆ ಕೃಷಿ ಜಮೀನು ಕಡಿಮೆಯಿದೆ ಎಂದು ಬೇಸರಿಸಲಿಲ್ಲ. ಸಮೀಪದಲ್ಲಿ ಪಾಳು ಬಿದ್ದ ಗದ್ದೆಗಳನ್ನು ಗೇಣಿಗೆ ಪಡೆದು ಕೃಷಿ ಆರಂಭಿಸಿದರು. ಇದರಲ್ಲಿ ಯಶಸ್ಸು ಕಂಡು, ಬೇಸಾಯವನ್ನು ಮತ್ತಷ್ಟು ವಿಸ್ತರಿಸಿ ಈ ಬಾರಿ 40 ಎಕರೆಯಲ್ಲಿ ಉಳುಮೆ ಮಾಡುತ್ತಿದ್ದಾರೆ.

ತಾಲ್ಲೂಕಿನ ಹಳಗಾದ ದೋಲ್ ನಿವಾಸಿ ಯಶವಂತ ಹುಂಡೇಕರ್, ಗೇಣಿ ಜಮೀನು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಭತ್ತದ ವ್ಯಾಪಾರವನ್ನೂ ಮಾಡುವ ಅವರಿಗೆ, ಸ್ವಂತ 10 ಎಕರೆ ಜಮೀನು ಇದೆ. ಅದನ್ನು ಉಳುಮೆ ಮಾಡಿ ಫಸಲು ಪಡೆಯುತ್ತಿದ್ದ ಅವರಿಗೆ ಮತ್ತಷ್ಟು ಪ್ರದೇಶದಲ್ಲಿ ಬೇಸಾಯ ಮಾಡುವ ಹಂಬಲ ಉಂಟಾಯಿತು. ಆದರೆ, ಜಮೀನು ಖರೀದಿಸಲು ಅವರ ಬಳಿ ಲಕ್ಷಾಂತರ ರೂಪಾಯಿ ಹಣವಿಲ್ಲ. ಅದಕ್ಕೆ ತಮ್ಮ ಊರಿನಲ್ಲಿ ಪಾಳು ಬಿದ್ದಿರುವ, ಇತರ ರೈತರ ಜಮೀನುಗಳನ್ನೇ ಉಳುಮೆ ಮಾಡಲು ಯೋಚಿಸಿದರು.

ಗ್ರಾಮದಲ್ಲಿ ನೂರಾರು ಎಕರೆ ಜಮೀನು ನಾನಾ ಕಾರಣಗಳಿಂದ ಪಾಳು ಬಿದ್ದಿವೆ. ಅವುಗಳ ಮಾಲೀಕರು ಕೃಷಿ ಮುಂದುವರಿಸಲು ಮನಸ್ಸು ಮಾಡಲಿಲ್ಲ. ಅಂಥವರನ್ನು ಸಂಪರ್ಕಿಸಿ ಅವರ ಜಮೀನನ್ನು ಇಂತಿಷ್ಟು ದರಕ್ಕೆ ಎಂದು ಒಪ್ಪಂದ ಮಾಡಿಕೊಂಡು ಗೇಣಿಗೆ ಪಡೆದುಕೊಂಡರು. ಅವುಗಳಲ್ಲಿ ಬೆವರು ಸುರಿಸಿ ಭತ್ತದ ನಾಟಿ ಮಾಡಿದರು. ಕಳೆದ ವರ್ಷ 32 ಎಕರೆಯಲ್ಲಿ ಬೇಸಾಯ ಮಾಡಿದ್ದ ಅವರು, ಸುಮಾರು 50 ಟನ್ ಭತ್ತದ ಇಳುವರಿ ಪಡೆದಿದ್ದರು.ಯಶವಂತ ಹುಂಡೇಕರ್ ಅವರು ಕಳೆದ ವರ್ಷ ಗೇಣಿಗೆ ಪಡೆದ ಗದ್ದೆಯಲ್ಲಿ ಪಡೆದ ಭತ್ತದ ಫಸಲು (ಸಂಗ್ರಹ ಚಿತ್ರ)

ಅವರ ಪರಿಶ್ರಮವನ್ನು ನೋಡಿದ ಮತ್ತೊಂದಷ್ಟು ಜಮೀನು ಮಾಲೀಕರು, ತಮ್ಮ ಗದ್ದೆಗಳಲ್ಲೂ ಬೇಸಾಯ ಮಾಡಬಹುದು ಎಂದು ತಿಳಿಸಿದರು. ಈ ವರ್ಷ 20 ಮಂದಿ ಭೂಮಾಲೀಕರ 40 ಎಕರೆ ಗದ್ದೆಯನ್ನು ಗೇಣಿಗೆ ಪಡೆದುಕೊಂಡು ಬೇಸಾಯ ಆರಂಭಿಸಿದ್ದಾರೆ.

‘ಫಸಲು ಕಟಾವಿಗೆ ಗಂಗಾವತಿಯಿಂದ ಯಂತ್ರೋಪಕರಣಗಳನ್ನು ತರಿಸುತ್ತೇನೆ. ಆದರೆ, ಅದಕ್ಕೂ ಪೂರ್ವದಲ್ಲಿ ಬೇಸಾಯದ ಆರಂಭಿಕ ಚಟುವಟಿಕೆಗಳಾದ ಕಳೆ ತೆಗೆಯುವುದು, ನಾಟಿ ಮಾಡುವುದನ್ನು ಕೈಯಿಂದಲೇ ಮಾಡುತ್ತೇವೆ. ಅದಕ್ಕೂ ಯಂತ್ರೋಪಕರಣಗಳು ಸಿಕ್ಕಿದ್ದರೆ ಕನಿಷ್ಠ 100 ಎಕರೆಯಲ್ಲಿ ಬೆಳೆ ತೆಗೆಯಲು ನಾನು ಸಿದ್ಧನಿದ್ದೇನೆ’ ಎಂದು ಯಶವಂತ ದೃಢ ವಿಶ್ವಾಸದಿಂದ ಹೇಳುತ್ತಾರೆ.

ಬೇಸಾಯದೊಂದಿಗೆ ಹೈನುಗಾರಿಕೆ: ‘ಗೇಣಿ ಆಧಾರದಲ್ಲಿ ಜಮೀನು ನೀಡಿದವರಿಗೆ ಈ ವರ್ಷ ಪ್ರತಿ ಎಕರೆಗೆ ₹1,200 ನೀಡುತ್ತಿದ್ದೇನೆ. ಎಂ.ಒ.4 ಮತ್ತು ಜ್ಯೋತಿ ತಳಿಯ ಬೀಜಗಳನ್ನು ಬಿತ್ತನೆ ಮಾಡುತ್ತಿದ್ದು, ವರ್ಷಕ್ಕೆ ಒಂದು ಬೆಳೆ ಬೆಳೆಯುತ್ತೇವೆ. ಕಳೆದ ವರ್ಷ ಎಕರೆಗೆ ಸುಮಾರು 20 ಕ್ವಿಂಟಲ್ ಫಸಲು ಬಂದಿತ್ತು’ ಎಂದು ಯಶವಂತ ಹುಂಡೇಕರ್ ‘ಪ್ರಜಾವಾಣಿ’ ಜೊತೆ ಕೃಷಿ ಅನುಭವ ಹಂಚಿಕೊಂಡರು.ಯಶವಂತ ಹುಂಡೇಕರ್

‘ಕೃಷಿ ಕೆಲಸಕ್ಕೆಂದು ಜೊಯಿಡಾ ಮತ್ತು ಅಣಶಿಯಿಂದ 23 ಮಂದಿ ಕೂಲಿಯಾಳುಗಳನ್ನು ಕರೆಸಿದ್ದೇನೆ. ಅವರಿಗೆ ದಿನವೊಂದಕ್ಕೆ ₹310 ಕೂಲಿ, ಊಟ ಮತ್ತು ವಸತಿಯ ಸೌಕರ್ಯವನ್ನು ಒದಗಿಸಿದ್ದೇನೆ. ನಾಟಿ ಮುಕ್ತಾಯವಾಗುವ ತನಕವೂ ಅವರು ನಮ್ಮ ಜೊತೆಗೇ ಇರುತ್ತಾರೆ’ ಎಂದು ಹೇಳುತ್ತಾರೆ.

ಭತ್ತದ ಕೃಷಿಗೆ ಪೂರಕವಾಗಿ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ಎಂಟು ಎಮ್ಮೆಗಳು ಸೇರಿದಂತೆ 34 ಜಾನುವಾರು ಸಲಹುತ್ತಿದ್ದಾರೆ. ಇದರಿಂದ ಗದ್ದೆಗೆ ಸಾವಯವ ಗೊಬ್ಬರವೂ ಸಿಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು