ಸೋಮವಾರ, ಜನವರಿ 18, 2021
25 °C
ಮತದಾರರ ಪಟ್ಟಿಯಲ್ಲಿ ಗೊಂದಲ

ಒಂದೇ ಕುಟುಂಬ, ಬೇರೆ ಬೇರೆ ವಾರ್ಡ್‌!: ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಮತದಾರರ ಪಟ್ಟಿಯ ‍ಪರಿಷ್ಕರಣೆಯ ಬಳಿಕ ಒಂದೇ ಮನೆಯ ಸದಸ್ಯರ ಹೆಸರುಗಳು ಬೇರೆ ಬೇರೆ ವಾರ್ಡ್‌ಗಳಲ್ಲಿ ನಮೂದಾಗಿವೆ. ಹೆಸರುಗಳೂ ಅನುಕ್ರಮವಾಗಿಲ್ಲ. ಈ ರೀತಿ ಮಾಡುವವರು ಯಾರು’ ಎಂದು ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಮತದಾರರ ಪಟ್ಟಿಯಲ್ಲಿ ಇರುವ ಲೋಪಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸದಸ್ಯ ಮಾರುತಿ ನಾಯ್ಕ ಕೂಡ ದನಿಗೂಡಿಸಿದರು.

‘ಒಂದೇ ಕುಟುಂಬದವರ ಹೆಸರುಗಳು ಐದು, 10 ವರ್ಷಗಳಿಂದ ಒಂದೇ ವಾರ್ಡ್‌ನಲ್ಲಿದ್ದವು. ಈ ವರ್ಷ ಬದಲಾಗಿವೆ. ಈ ಬಗ್ಗೆ ಅಮದಳ್ಳಿ ಭಾಗದಲ್ಲಂತೂ ಹಲವು ದೂರುಗಳಿವೆ. ಮನೆಯ ಸಮೀಪದಲ್ಲೇ ಮತಗಟ್ಟೆ ಇದ್ದರೂ ಮನೆಯ ಮಂದಿ ಮತ ಚಲಾವಣೆಗೆ ಮೂರು, ನಾಲ್ಕು ಕಿಲೋಮೀಟರ್ ದೂರ ಹೋಗಬೇಕಾಗಿದೆ. ಇದು ತೀರಾ ಗೊಂದಲ ಮೂಡಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಕಂದಾಯ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಭಾರ ಹೆಚ್ಚಾಗಿದೆ. ಅವರು ಅಂಗನವಾಡಿಗಳಿಗಿಂತ ಹೊರಗೇ ಹೆಚ್ಚು ಕಾಲ ಕಳೆಯಬೇಕಾಗಿದೆ. ಶಾಲೆ ಬಿಟ್ಟ ಮಕ್ಕಳ ಸಮೀಕ್ಷೆಯನ್ನೂ ಅವರೇ ಮಾಡುತ್ತಿದ್ದಾರೆ. ಆ ಜವಾಬ್ದಾರಿಯನ್ನು ಶಾಲಾ ಶಿಕ್ಷಕರು ಯಾಕೆ ನಿಭಾಯಿಸುತ್ತಿಲ್ಲ’ ಎಂದು ಅಧ್ಯಕ್ಷೆ ಪ್ರಮೀಳಾ ನಾಯ್ಕ ಪ್ರಶ್ನಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಇ.ಒ ಡಾ.ಆನಂದಕುಮಾರ ಬಾಲಪ್ಪನವರ, ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಬಳಕೆ ಮಾಡದಂತೆ ನ್ಯಾಯಾಲಯದ ಆದೇಶವಿದೆ ಎಂದು ತಿಳಿಸಿದರು.

ಸದಸ್ಯ ಸುರೇಂದ್ರ ಗಾಂವಕರ ಮಾತನಾಡಿ, ‘ಅಂಗಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯ ಸಮಸ್ಯೆಯು ಐದು ವರ್ಷಗಳಿಂದ ಯಥಾಸ್ಥಿತಿಯಲ್ಲಿದೆ. ಅದನ್ನು ಶೀಘ್ರವೇ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ‘ರಸ್ತೆಯ ಜಾಗವು ಜಿಲ್ಲಾ ಆರೋಗ್ಯಾಧಿಕಾರಿಯ ಹೆಸರಿನಲ್ಲಿದ್ದು, ಅವರಿಗೆ ಪತ್ರ ಬರೆಯಲಾಗಿದೆ. ಅವರು ಹಸ್ತಾಂತರಿಸಿದ ಬಳಿಕ ಕಾಮಗಾರಿ ನಡೆಸಲು ಸಾಧ್ಯ‌’ ಎಂದರು.

ಉಪಾಧ್ಯಕ್ಷ ರವೀಂದ್ರ ಪವಾರ್ ವೇದಿಕೆಯಲ್ಲಿದ್ದರು.

‘ಹಕ್ಕಿ ಜ್ವರ: ಮಾಹಿತಿ ನೀಡಿ’
‘ಕೋಳಿ ಮೊಟ್ಟೆಯನ್ನು ಸಂಪೂರ್ಣವಾಗಿ ಬೇಯಿಸಿ ಸೇವಿಸುವುದರಿಂದ ಹಕ್ಕಿ ಜ್ವರ ಬರುವುದಿಲ್ಲ’ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ದೀಪಕ್ ಹೇಳಿದರು.

‘ಜಿಲ್ಲೆಯಲ್ಲಿ ಹಕ್ಕಿ ಜ್ವರದ ವರದಿಯಾಗಿಲ್ಲ. ಆದರೂ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ. ಕೇಂದ್ರ ಕಚೇರಿಗೆ ಪ್ರತಿದಿನ ವರದಿ ಸಲ್ಲಿಸಲಾಗುತ್ತಿದೆ. ಹಕ್ಕಿಗಳು, ಕೋಳಿಗಳು ಗುಂಪಾಗಿ ಒಂದೇ ಕಡೆ ಸತ್ತಿರುವುದನ್ನು ಸಾರ್ವಜನಿಕರು ಗಮನಿಸಿದರೆ ಇಲಾಖೆಗೆ ಮಾಹಿತಿ ನೀಡಿ. ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ದೃಢಪಡಿಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಹಕ್ಕಿ ಜ್ವರದಿಂದ ಮೃತಪಟ್ಟ ಹಕ್ಕಿಗಳ ಶರೀರವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಎಂಟು, ಹತ್ತು ಕೋಳಿಗಳು ಒಮ್ಮೆಗೇ ಸಾಯುತ್ತವೆ’ ಎಂದೂ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು