ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಸಚಿವ ಕೋಟ ಸೂಚನೆ

ಅಧಿಕಾರಿಗಳ ಸಭೆ
Last Updated 5 ಆಗಸ್ಟ್ 2022, 15:57 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು. ವಿಳಂಬಕ್ಕೆ ಆಸ್ಪದ ನೀಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ವಿವರ ಪಡೆದರು. 68 ಖಾರ್ಲ್ಯಾಂಡ್ ಕಾಮಗಾರಿಗಳಿಗೆ ಮಂಜೂರಾತಿ ಸಿಕ್ಕಿದೆ. 33 ಈಗಾಗಲೆ ಪ್ರಗತಿಯಲ್ಲಿವೆ. ಉಳಿದ ಕಾಮಗಾರಿಗಳನ್ನು ಇನ್ನಷ್ಟೆ ಆರಂಭಿಸಬೇಕಿದೆ ಎಂದು ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮಾಹಿತಿ ನೀಡಿದರು.

ಬಾಕಿ ಇರುವ ಕಾಮಗಾರಿಗಳನ್ನು ಆ.12ರ ಒಳಗೆ ಕಾರ್ಯಾದೇಶ ನೀಡಿ ಆರಂಭಿಸಬೇಕು. ಪಶ್ಚಿಮ ವಾಹಿನಿ ಯೋಜನೆ ಅಡಿ ಕೈಗೊಳ್ಳುತ್ತಿರುವ ಕಾಮಗಾರಿಗಳ ವೇಗ ಹೆಚ್ಚಿಸಬೇಕು. ಮುಂದಿನ ಪ್ರಗತಿ ಪರಿಶೀಲನಾ ಸಭೆ ವೇಳೆಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ 28 ಸೇತುವೆ ಕಾಮಗಾರಿ ಪೈಕಿ ಕೇವಲ 9 ಮಾತ್ರ ಪೂರ್ಣಗೊಂಡಿದೆ. ಕಾಮಗಾರಿ ಮುಗಿಯುವವರೆಗೆ ಕಾರವಾರವನ್ನೇ ಕೇಂದ್ರ ಸ್ಥಾನ ಮಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಸಚಿವರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್) ಅಧಿಕಾರಿಗೆ ಸೂಚನೆ ನೀಡಿದರು.

ಕಾಮಗಾರಿ ವಿಳಂಬವಾದರೂ ಗುತ್ತಿಗೆದಾರರಿಗೆ ದಂಡ ವಿಧಿಸಿಲ್ಲ. ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರ ಮಾತು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಇಂತಹದ್ದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸರ್ಕಾರಿ ಮೆಡಿಕಲ್ ಕಾಲೇಜ್‌ನ ಜತೆ ನಿರ್ಮಾಣಗೊಳ್ಳುತ್ತಿರುವ 450 ಹಾಸಿಗೆಗಳ ಬೋಧಕ ಆಸ್ಪತ್ರೆಯ ನಿರ್ಮಾಣ ಕಾಮಗಾರಿ ವಿಳಂಬದ ಕುರಿತು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆಯ ಎಇಇ ಅವರನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರ ಕಾಮಗಾರಿ ಮುಗಿಸಲು ಅದೇಶಿಸಿದರು.

ಪುಣ್ಯಕೋಟಿ ಯೋಜನೆಯಡಿಯಲ್ಲಿ ಗೋವುಗಳನ್ನು ದತ್ತು ಪಡೆಯುವ ಕಾರ್ಯ ಇನ್ನು ಹೆಚ್ಚಾಗಿ ಆಗಬೇಕು ಎಂದು ಜಿಲ್ಲಾ ಪಶು ಸಂಗೋಪನ ಇಲಾಖೆ ಅಧಿಕಾರಿಗೆ ಸೂಚಿಸಿದರು. ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯ್ತಿ ಸಿಇಓ ಎಂಪ್ರಿಯಾಂಗಾ ಇದ್ದರು.

ಹತ್ಯೆಗೆ ಕಾಂಗ್ರೆಸ್ ತಪ್ಪು ಕಾರಣ:‘ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ 23 ಹಿಂದೂ ಕಾರ್ಯಕರ್ತರ ಕೊಲೆಗಳು ನಡೆದಿದ್ದವು. ಅಂದು ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ರಾಜ್ಯದಲ್ಲಿ ಹತ್ಯೆ ಸರಣಿ ಮುಂದುವರೆಯುತ್ತಿರಲಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಇಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಹಲವು ಹತ್ಯೆ ಪ್ರಕರಣದಲ್ಲಿ ಅಂದಿನ ಕಾಂಗ್ರೆಸ್ ಆರೋಪಿಗಳನ್ನು ಬಂಧಿಸಿಯೇ ಇರಲಿಲ್ಲ’ ಎಂದು ಆರೋಪಿಸಿದರು.

‘ಪ್ರವೀಣ ನೆಟ್ಟಾರು ಹತ್ಯೆ ಆರೋಪಿಗಳ ಸುಳಿವು ತನಿಖಾಧಿಕಾರಿಗಳಿಗೆ ಸಿಕ್ಕಿದ್ದು ಶೀಘ್ರದಲ್ಲಿಯೇ ಅವರ ಬಂಧನವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT