ಅಬುಧಾಬಿ ತೊರೆದು ಬಂದ ಮೀನುಗಾರರು

7
ಬಲೆ ಮೀನುಗಾರಿಕೆಗೆ ನಿಷೇಧ ಹೇರಿದ್ದರಿಂದ ತವರಿಗೆ ವಾಪಸಾದ 15ಕ್ಕೂ ಹೆಚ್ಚು ಮಂದಿ

ಅಬುಧಾಬಿ ತೊರೆದು ಬಂದ ಮೀನುಗಾರರು

Published:
Updated:
Prajavani

ಭಟ್ಕಳ: ಅಬುಧಾಬಿಯಲ್ಲಿ ಬಲೆ ಮೀನುಗಾರಿಕೆಗೆ ಅಲ್ಲಿನ ಆಡಳಿತ ನಿಷೇಧ ಹೇರಿದೆ. ಇದರಿಂದ ಕಂಗೆಟ್ಟ ಭಟ್ಕಳ ತಾಲ್ಲೂಕಿನ 15ಕ್ಕೂ ಹೆಚ್ಚು ಮೀನುಗಾರರು, ನಾಲ್ಕು ದಿನಗಳ ಅವಧಿಯಲ್ಲಿ ತವರಿಗೆ ಮರಳಿದ್ದಾರೆ.

ಭಟ್ಕಳ ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಬ್ದುಲ್ ಕರೀಮ್‌, ಜುಬೈರ್ ಉಸ್ಮಾನಿ, ಜಲಾಲುದ್ದಿನ್ ಘಾರು, ಅಬ್ದುಲ್ ರಶೀದ್ ಉಸ್ಮಾನಿ, ರಿಯಾಜ್ ಬಂಗಾಲಿ ಹಾಗೂ ಅವರ ಸಂಗಡಿಗರು ಹಿಂತಿರುಗಿ ಬಂದವರು. ಅವರು ಏಳೆಂಟು ವರ್ಷಗಳಿಂದ ಅಬುಧಾಬಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಸದ್ಯದಲ್ಲೇ ಮತ್ತಷ್ಟು ಮೀನುಗಾರರು ಹಿಂತಿರುಗಿ ಬರಲಿದ್ದಾರೆ ಎಂದು ಅವರು ಹೇಳುತ್ತಾರೆ.

ಮೀನಿನ ಬದಲು ಕಡಲೆಮ್ಮೆ ಬೇಟೆ: ಅತಿ ಆಸೆಗೆ ಬಿದ್ದ ಅಬುಧಾಬಿಯ ಸ್ಥಳೀಯ ಮೀನುಗಾರರು, ‘ಸೀ ಕೌ’ ಎಂದು ಕರೆಯಲಾಗುವ ಕಡಲೆಮ್ಮೆಗಳನ್ನು ಬೇಟೆ ಆಡಿದ್ದಾರೆ. ಜಾನುವಾರು ಮುಖ ಹೋಲುವ ಅವುಗಳ ಶಿಕಾರಿಯೇ ಅಲ್ಲಿನ ಆಡಳಿತ ಬಲೆ ಮೀನುಗಾರಿಕೆಗೆ ನಿಷೇಧ ಹೇರಲು ಪ್ರಮುಖ ಕಾರಣವಾಗಿದೆ ಎನ್ನುತ್ತಾರೆ ಕೊಲ್ಲಿ ರಾಷ್ಟ್ರದಿಂದ ವಾಪಸ್ ಬಂದ ಮೀನುಗಾರರು.

‘ಕಡಲೆಮ್ಮೆ ಬೇಟೆಯಾಡಿದ ಸ್ಥಳೀಯ ಅರಬ್ ಮೀನುಗಾರರಿಗೆ ದಂಡ ವಿಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಇರಾನ್‌ನಲ್ಲಿ ಮೀನುಗಾರರು ದಿಗ್ಬಂಧನಕ್ಕೆ ಒಳಗಾಗಿರುವ ಸುದ್ದಿ ತಿಳಿದ ನಮಗೆ, ಅಲ್ಲಿನ ಮೀನುಗಾರಿಕೆಯ ಸಹವಾಸವೇ ಬೇಡ ಎಂಬಂತಾಗಿದೆ. ನಾವು ಅಬುಧಾಬಿಯನ್ನು ಬಿಟ್ಟು ಇಲ್ಲಿಗೆ ಬಂದಿದ್ದೇವೆ’ ಎಂದು ತೆಂಗಿನಗುಂಡಿಯ ರಶೀದ್ ಉಸ್ಮಾನಿ ಹೇಳುತ್ತಾರೆ.

ಸಾವಿರಾರು ಭಾರತೀಯ ಮೀನುಗಾರರು: ಅಬುಧಾಬಿಯಲ್ಲಿ 500ಕ್ಕೂ ಹೆಚ್ಚು ಅತ್ಯಾಧುನಿಕ ಯಾಂತ್ರೀಕೃತ ದೋಣಿಗಳಿವೆ. ಅರಬ್ಬರೊಂದಿಗೆ ಸಾವಿರಾರು ಭಾರತೀಯರು ಮೀನುಗಾರಿಕೆ ಕೆಲಸ ಮಾಡುತ್ತಿದ್ದಾರೆ.

‘ಕಡಲೆಮ್ಮೆ ಬಲೆಗೆ ಬಿದ್ದರೆ ನಮ್ಮ ಮೀನುಗಾರರು ಬಲೆ ಕತ್ತರಿಸಿ ಸಮುದ್ರದ ನೀರಿಗೆ ಪುನಃ ಬಿಟ್ಟು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಆದರೆ, ಅರಬ್‌ ಮೀನುಗಾರರು ಅದನ್ನು ದೋಣಿಗೆ ಎಳೆದು ತರುತ್ತಾರೆ. ನಮಗೆ ಅಲ್ಲಿ ಮೀನುಗಾರಿಕೆ ನಡೆಸುವುದು, ಮತ್ತು ಅಲ್ಲಿನ ಕಾನೂನು ಎದುರಿಸುವುದು ಕಷ್ಟದ ಕೆಲಸವಾಗಿದೆ. ಆದ್ದರಿಂದ ಅಬುಧಾಬಿ ತೊರೆಯುವುದು ಅನಿವಾರ್ಯ ಆಯಿತು’ ಎಂದು ಮತ್ತೊಬ್ಬ ಮೀನುಗಾರ ಅಬ್ದುಲ್ ಕರೀಮ್ ಹೇಳುತ್ತಾರೆ.

ಇರಾನ್ ಗಡಿಯಲ್ಲಿ ಭಟ್ಕಳ ಸೇರಿದಂತೆ ಜಿಲ್ಲೆಯ 18 ಮೀನುಗಾರರು ಗಡಿ ಉಲ್ಲಂಘನೆಯ ಆರೋಪದಲ್ಲಿ ದಿಗ್ಬಂಧನಕ್ಕೆ ಗುರಿಯಾಗಿದ್ದಾರೆ. ನಾಲ್ಕು ತಿಂಗಳಾದರೂ ಅವರ ಬಿಡುಗಡೆಯಾಗಿಲ್ಲ. ಅವರ ಬರುವಿಕೆಗೆ ಕುಟುಂಬ ಸದಸ್ಯರು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇನ್ನೊಂದೆಡೆ ಮಲ್ಪೆಯಿಂದ ಮೀನುಗಾರಿಕೆ ತೆರಳಿದ್ದ ಏಳು ಮೀನುಗಾರರು ನಾಪತ್ತೆಯಾಗಿ ಮೂರು ವಾರಗಳೇ ಕಳೆದರೂ ಅವರ ಸುಳಿವಿಲ್ಲ. ಈ ಎಲ್ಲ ಪ್ರಕರಣಗಳಿಂದ ಈ ಭಾಗದ ಮೀನುಗಾರರು ಆತಂಕಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !