ಬಲೆ ಹಾನಿ, ವೈದ್ಯಕೀಯ ಪರಿಹಾರ ವಿಳಂಬ: ಮೀನುಗಾರರ ಅಸಮಾಧಾನ

ಮಂಗಳವಾರ, ಮಾರ್ಚ್ 26, 2019
29 °C
ಸರ್ಕಾರದಿಂದ ಬಿಡುಗಡೆಯಾಗದ ಲಕ್ಷಾಂತರ ರೂಪಾಯಿ

ಬಲೆ ಹಾನಿ, ವೈದ್ಯಕೀಯ ಪರಿಹಾರ ವಿಳಂಬ: ಮೀನುಗಾರರ ಅಸಮಾಧಾನ

Published:
Updated:
Prajavani

ಕಾರವಾರ: ಮೀನುಗಾರರು ಬಳಸುವ ಬಲೆ ಮತ್ತು ಅವರ ವೈದ್ಯಕೀಯ ವೆಚ್ಚಗಳಿಗೆ ಕಳೆದ ಸಾಲಿನ ₹ 6.88 ಲಕ್ಷ ರೂಪಾಯಿ ಪರಿಹಾರ ಮೀನುಗಾರಿಕಾ ಇಲಾಖೆಯಿಂದ ಇನ್ನೂ ಬಿಡುಗಡೆಯಾಗಿಲ್ಲ. ಇದು ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ.

ಬಾಕಿ (ತಾಲ್ಲೂಕುವಾರು): ವೈದ್ಯಕೀಯ ವೆಚ್ಚದ ಪರಿಹಾರ ಭಟ್ಕಳ ಹಾಗೂ ಕಾರವಾರ ತಾಲ್ಲೂಕುಗಳಿಗೆ ತಲಾ ₹ 1 ಲಕ್ಷ, ಅಂಕೋಲಾಕ್ಕೆ ₹ 70 ಸಾವಿರ ಬರಬೇಕಿದೆ. ಬಲೆ ಹಾನಿಗೆ ಕಾರವಾರ ತಾಲ್ಲೂಕಿಗೆ 3.40 ಲಕ್ಷ, ಹೊನ್ನಾವರ ತಾಲ್ಲೂಕಿಗೆ ₹ 1.28 ಲಕ್ಷ, ಅಂಕೋಲಾ ತಾಲ್ಲೂಕಿಗೆ ₹ 50 ಸಾವಿರ ಪರಿಹಾರ ಸಿಗಬೇಕಿದೆ.

ದೋಣಿ ಹಾನಿ ಸಂಬಂಧ ಕಾರವಾರ ತಾಲ್ಲೂಕಿಗೆ ₹ 1.60 ಲಕ್ಷ ಪರಿಹಾರ ಕೊಡಲು ಅವಕಾಶವಿದೆ. ಈಗಾಗಲೇ ₹ 50 ಸಾವಿರ ಮಂಜೂರಾಗಿದೆ. ಭಟ್ಕಳ ತಾಲ್ಲೂಕಿಗೆ ₹ 5 ಲಕ್ಷದಿಂದ ₹ 6 ಲಕ್ಷ ಅನುದಾನ ನೀಡಲು ಶಿಫಾರಸು ಮಾಡಲಾಗಿದೆ. ಆದರೆ, ಒಂದು ರೂಪಾಯಿಯೂ ಅನುದಾನ ಬಂದಿಲ್ಲ. ಬಲೆಹಾನಿಗೆ ಸಂಬಂಧಿಸಿ ಅಂಕೋಲಾ ತಾಲ್ಲೂಕಿಗೆ ₹ 50 ಸಾವಿರಕ್ಕೆ ಶಿಫಾರಸು ಮಾಡಲಾಗಿದ್ದು, ಬಿಡುಗಡೆಯಾಗಿದ್ದು ಕೇವಲ ₹ 17,509.

ಮೀನುಗಾರರು ಹೇಳುವ ಪ್ರಕಾರ ಉತ್ತಮ ಗುಣಮಟ್ಟದ ಬಲೆ ಗರಿಷ್ಠ ನಾಲ್ಕು ವರ್ಷ ಬಾಳಿಕೆ ಬರುತ್ತದೆ. ಸಮುದ್ರದಲ್ಲಿ ಮೀನುಗಳು ಬಲೆಯನ್ನು ಕಚ್ಚಿ ತುಂಡು ಮಾಡುತ್ತವೆ. ಕೆಲವೊಮ್ಮೆ ಕಲ್ಲುಗಳ ಮಧ್ಯೆ ಸಿಲುಕಿ ಹರಿದು ಹೋಗುತ್ತವೆ. ಈ ಬಲೆಗಳ ದುರಸ್ತಿಗೇ ಸುಮಾರು ₹ 30 ಸಾವಿರ ವೆಚ್ಚವಾಗುತ್ತದೆ ಎನ್ನುತ್ತಾರೆ.

ಗಮನ ಸೆಳೆಯಬೇಕು: ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆಯಬೇಕು. ಕಾಲಕಾಲಕ್ಕೆ ನ್ಯಾಯೋಚಿತ ಪರಿಹಾರ ಸಿಗುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಇಲ್ಲದಿದ್ದರೆ ಸಮಸ್ಯೆ ಮುಂದುವರಿದು, ಮೀನುಗಾರರ ಸಂಕಷ್ಟಕ್ಕೆ ಕೊನೆಯಿಲ್ಲದಂತಾಗುತ್ತದೆ ಎನ್ನುತ್ತಾರೆ ಜಿಲ್ಲಾ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಸಂಘದ ಅಧ್ಯಕ್ಷ ಸದಾನಂದ ಹರಿಕಂತ್ರ.

ಒಂದು ಬಲೆಗೆ ₹30 ಸಾವಿರದಿಂದ ₹ 1 ಲಕ್ಷದವರೆಗೆ ವ್ಯಯಿಸಬೇಕಾಗುತ್ತದೆ. ಸರ್ಕಾರ ಪರಿಹಾರ ನೀಡಿದರೆ ಸ್ವಲ್ಪವಾದರೂ ಆರ್ಥಿಕ ಸಹಾಯವಾಗುತ್ತದೆ ಎಂಬ ಅಭಿಪ್ರಾಯ ಅವರದ್ದಾಗಿದೆ.

‘ಶೀಘ್ರವೇ ಮಂಜೂರು’: ಜಿಲ್ಲೆಯಲ್ಲಿ ಬಾಕಿಯಿರುವ ಪರಿಹಾರಕ್ಕೆ ಸಂಬಂಧಿಸಿ ಇಲಾಖೆಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಪರಿಹಾರ ಬಿಡುಗಡೆಯಾಗಿದ್ದು, ಉಳಿದವು ಮಂಜೂರಾಗುವ ಹಂತದಲ್ಲಿವೆ. ಈ ಸಂಬಂಧ  ಪೂರಕವಾಗಿ ಕೇಳಿದ್ದ ದಾಖಲೆಗಳನ್ನೂ ಇಲಾಖೆಗೆ ನೀಡಲಾಗಿದೆ. ಹಣ ಬಿಡುಗಡೆಯಾದ ಕೂಡಲೇ ಎಲ್ಲರಿಗೂ ಹಸ್ತಾಂತರಿಸಲಾಗುವುದು ಎಂದು ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ನಾಗರಾಜ ಹೇಳಿದರು.

ಮೀನುಗಾರರಿಗೆ ದೋಣಿ ಮತ್ತು ಬಲೆಹಾನಿಗೆ ಗರಿಷ್ಠ ₹ 1 ಲಕ್ಷದವರೆಗೆ ಅಥವಾ ಹಾನಿಯ ಶೇ 50ರಷ್ಟು ಪರಿಹಾರ ನೀಡಲು ಅವಕಾಶವಿದೆ. ಗರಿಷ್ಠ ₹ 1.20 ಲಕ್ಷ ವೈದ್ಯಕೀಯ ವೆಚ್ಚ ನೀಡಬಹುದು. ವ್ಯಯಿಸಿದ ಹಣದ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !