ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ಸ್ಯಕ್ಷಾಮದಿಂದ ಕಂಗೆಟ್ಟ ‘ಕಡಲ ಮಕ್ಕಳು’

ಈ ವರ್ಷ ಸುಮಾರು 75 ದಿನ ಮಾತ್ರ ವಾಡಿಕೆಯಂತೆ ಮೀನುಗಾರಿಕೆಗೆ ಸಿಕ್ಕಿದ ಅವಕಾಶ
Last Updated 19 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕಾರವಾರ: ಡಿಸೆಂಬರ್‌ ತಿಂಗಳೆಂದರೆ ಮೀನುಗಾರರಿಗೆ ಕೈತುಂಬ ಕೆಲಸ ಇರುವ ಅವಧಿಯೆಂದೇ ಭಾವಿಸಲಾಗುತ್ತದೆ. ಆದರೆ, ಈ ಬಾರಿ ಮತ್ಸ್ಯಕ್ಷಾಮದಿಂದಾಗಿ ಜಿಲ್ಲೆಯ ಸಾವಿರಾರು ಮಂದಿಯ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೇ ‘ಕಡಲ ಮಕ್ಕಳು’ ಕಂಗಾಲಾಗಿದ್ದಾರೆ.

ಆ.1ರಂದು ಮೀನುಗಾರಿಕಾ ಋತು ಆರಂಭವಾದರೂ ಈ ಬಾರಿ ಹವಾಮಾನ ವೈಪರೀತ್ಯದಿಂದ ಸುಮಾರು 75 ದಿನಗಳಷ್ಟೇ ವಾಡಿಕೆಯಮೀನುಗಾರಿಕೆ ಸಾಧ್ಯವಾಗಿದೆ ಎಂಬ ಅಳಲು ಮೀನುಗಾರರದ್ದಾಗಿದೆ. ಈ ವರ್ಷ ಮೊದಲ ದಿನವೇ ಆಳಸಮುದ್ರದಲ್ಲಿ ಮೀನುಗಳು ಸಿಗದೇ ದೋಣಿಗಳು ಖಾಲಿಯಾಗಿ ವಾಪಸ್ ಬಂದಿದ್ದವು. ಮರುದಿನವೇ ಅಂದರೆ, ಆ.2ರಿಂದ ಆ.16ವರೆಗೆ ಸಮುದ್ರದಲ್ಲಿ ಚಂಡಮಾರುತ ಬೀಸಿದ್ದರಿಂದ ಮೀನುಗಾರಿಕೆ ನಿಲ್ಲಿಸಲಾಗಿತ್ತು. 17ರಿಂದ ಆ.31ರವರೆಗೆ ಪ್ರತಿ ದಿನ ಮತ್ಸ್ಯ ಶಿಕಾರಿ ಸಾಧ್ಯವಾಗಿತ್ತು.

ಸೆ.2ರಂದು ಮತ್ತೆ ಚಂಡಮಾರುತವೆದ್ದ ಪರಿಣಾಮ ದೋಣಿಗಳೆಲ್ಲ ದಡ ಸೇರಿದವು. ನಂತರ ಮೀನುಗಾರಿಕೆ ಆರಂಭವಾಗಿದ್ದು ಸೆ.22ರಂದು. ಆಗಸ್ಟ್ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ಟ್ರೋಲ್ ದೋಣಿಗಳಿಗೆ ತಕ್ಕಮಟ್ಟಿಗೆ ಮೀನು ಸಿಕ್ಕವೇ ಹೊರತು, ಪರ್ಸೀನ್ ಹಾಗೂ ಸಾಂಪ್ರದಾಯಿಕಮೀನುಗಾರರಿಗೆ ನಿರಾಸೆಯಾಗಿತ್ತು.

‘ಬೈತಖೋಲ್ ಬಂದರಿನಲ್ಲಿ ಸುಮಾರು 70 ಟ್ರೋಲ್ ದೋಣಿಗಳಿವೆ. ಅವುಗಳ ಪೈಕಿ 50 ಮೀನುಗಾರಿಕೆಗೆ ಹೋಗುತ್ತಿವೆ. ಡಿಸೆಂಬರ್‌ ತಿಂಗಳಿನಲ್ಲಿ ಕೂಡ ಮೀನುಗಾರಿಕೆಚೇತರಿಸಿಲ್ಲ. ಸಿಗುವ ಆದಾಯವು ದೋಣಿಯ ಡೀಸೆಲ್ ಖರ್ಚಿಗೆ ಸರಿ ಹೋಗುವಂತಿದೆ’ ಎನ್ನುತ್ತಾರೆ ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ.

‘ಮೀನುಗಾರರಿಗೆ ಆಗಸ್ಟ್‌ ನಂತರದ ನಾಲ್ಕು ತಿಂಗಳು ಸಿಗುವ ಆದಾಯವೇ ಪ್ರಮುಖವಾಗಿರುತ್ತದೆ. ಟ್ರೋಲ್‌ ದೋಣಿಯವರಿಗೆ ನಾಲ್ಕೈದುವರ್ಷಗಳಿಂದ ಆಗಸ್ಟ್ ತಿಂಗಳ ಮೊದಲ 15 ದಿನ ಹಾಗೂ ಡಿಸೆಂಬರ್‌ಕೊನೆಯಿಂದ ಮಾರ್ಚ್‌ವರೆಗೆಸಾಕಷ್ಟುಮೀನು ಸಿಗುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಹಾಗಿಲ್ಲ’ ಎಂದು ವಿವರಿಸಿದರು.

‘ಈಗ ಟ್ರೋಲ್ ದೋಣಿಗಳು ಆಳಸಮುದ್ರಕ್ಕೆ ಹೋಗುತ್ತಿವೆ. ಆದರೆ, ಉದ್ಯಮವು ಲಾಭದಾಯಕಸ್ಥಿತಿಯಲ್ಲಿ ಖಂಡಿತ ಇಲ್ಲ. ಮಾರುಕಟ್ಟೆಯಲ್ಲಿ ಕೂಡ ಮೀನಿನ ದರ ಏರಿಳಿತ ಕಾಣುತ್ತಿದೆ. ಸದ್ಯ ಪ್ರತಿ ಕೆ.ಜಿ ಲೆಪ್ಪೆಗೆ ₹ 50ರ ಆಸುಪಾಸಿನಲ್ಲಿದೆ. ಮೊದಲು ₹ 100ರಂತೆ ಸಿಗುತ್ತಿತ್ತು. ಈ ಸಂದರ್ಭದಲ್ಲಿ ಸೆಟ್ಲೆ ಮೀನುಗಳೇ ಹೆಚ್ಚು ಸಿಗುತ್ತಿದ್ದು, ಇತರ ಪ್ರಭೇದಗಳು ಕಡಿಮೆಯಾಗಿವೆ’ ಎಂದು ಹೇಳಿದರು.

ನಿರ್ವಹಣೆ ಬಲು ದುಬಾರಿ:‘ಒಂದು ಪರ್ಸೀನ್ ದೋಣಿಯ ದಿನವೊಂದರ ನಿರ್ವಹಣೆಗೆ ಸಾವಿರಾರು ರೂಪಾಯಿ ಖರ್ಚು ಬರುತ್ತದೆ. ಸಿಬ್ಬಂದಿಯ ವೇತನ, ಊಟ, ತಿಂಡಿ ಮುಂತಾದ ಮೂಲ ಅವಶ್ಯಕತೆಗಳ ಪೂರೈಕೆಗೇ ₹ 6 ಸಾವಿರ ಬೇಕು. ಈ ದೋಣಿಗೆ ದಿನವೊದಕ್ಕೆ ಸುಮಾರು 300 ಲೀಟರ್ ಡೀಸೆಲ್ ಬೇಕು. ಈ ವೆಚ್ಚವನ್ನೂ ಪ್ರತ್ಯೇಕವಾಗಿ ಸೇರಿಸಿದಾಗ ಈಗಿನ ಪರಿಸ್ಥಿತಿಯಲ್ಲಿ ಮೀನುಗಾರಿಕೆ ಬಹಳ ಕಷ್ಟವಾಗುತ್ತಿದೆ’ ಎನ್ನುತ್ತಾರೆ ಮೀನುಗಾರ ಮುಖಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT