ಕಾರವಾರ: ಮನೆಮನೆಗಳಲ್ಲಿ ಮಂಗಲಮೂರ್ತಿಯ ಗುಣಗಾನ

7
ವಿವಿಧ ಬಡಾವಣೆಗಳಲ್ಲಿ ಸಂಭ್ರಮದ ಗಣೇಶ ಚತುರ್ಥಿ, ಭಕ್ತರಿಂದ ಪೂಜೆ

ಕಾರವಾರ: ಮನೆಮನೆಗಳಲ್ಲಿ ಮಂಗಲಮೂರ್ತಿಯ ಗುಣಗಾನ

Published:
Updated:
Deccan Herald

ಕಾರವಾರ: ನಗರದಲ್ಲಿ ಎರಡು ದಿನಗಳಿಂದ ಗಣೇಶೋತ್ಸವದ ಸಂಭ್ರಮ ಕಳೆಗಟ್ಟಿದೆ. ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಏಕದಂತನ ಮೂರ್ತಿಗಳಿಗೆ ಭಕ್ತಿಭಾವದಿಂದ ಪೂಜೆ ನೆರವೇರುತ್ತಿದೆ. 

ಚತುರ್ಥಿಯ ದಿನವಾದ ಗುರುವಾರ ಬೆಳಿಗ್ಗೆಯೇ ಬೆನಕನ ಮೂರ್ತಿಗಳನ್ನು ಭಕ್ತರು ಶ್ರದ್ಧಾಭಕ್ತಿಯಿಂದ ತಂದಿದ್ದರು. ಆ ಸಂದರ್ಭದಲ್ಲಿ ‘ಗಣಪತಿ ಬಪ್ಪಾ ಮೋರೆಯಾ.. ಮಂಗಲಮೂರ್ತಿ ಮೋರೆಯಾ..’, ‘ಜೈ ಗಣೇಶ’ ಮುಂತಾದ ಉದ್ಗೋಷಗಳು ಮುಗಿಲುಮುಟ್ಟಿದ್ದವು. 

ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡಲು ಸಣ್ಣ, ಸುಂದರ ವಿಗ್ರಹಗಳನ್ನು ತರುವಾಗ ಕುಟುಂಬ ಸದಸ್ಯರ ಸಂಭ್ರಮ, ಭಕ್ತಿ ಭಾವಗಳು ಗಮನ ಸೆಳೆದವು. ಸಾಂಪ್ರದಾಯಿಕ ವಾದ್ಯಗಳಾದ ಗುಮ್ಟೆ, ಸಮ್ಮಾಳ, ವಾದ್ಯಗಳ ಜತೆಗೇ ಸಿಡಿಮದ್ದುಗಳ ಸದ್ದೂ ಆ ಸಂದರ್ಭಕ್ಕೆ ಮತ್ತಷ್ಟು ರಂಗು ತಂದವು. 

ಭಕ್ತರು ಮನೆಗಳಲ್ಲಿ ವಿವಿಧ ಹೂವು, ಬಾಳೆ ಕಂದುಗಳು, ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ದೇವರ ಮಂಟಪವನ್ನು ಅಲಂಕರಿಸಿದ್ದರು. ಜಯಘೋಷ, ಮಂಗಲವಾದ್ಯಗಳ ನಿನಾದಗಳೊಂದಿಗೆ ಪೀಠದಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು. 

ಮನೆಗಳಲ್ಲಿ ಪೂಜಿಸುವವರು ಗಣೇಶನ ವಿಗ್ರಹಗಳನ್ನು ಒಂದೂವರೆ ದಿನ, ಐದು, ಏಳು, ಒಂಬತ್ತು ಹಾಗೂ 11 ದಿನಗಳ ನಂತರ ವಿಸರ್ಜನೆ ಮಾಡುತ್ತಾರೆ. ಅನಂತ ಚತುರ್ದಶಿಯ ನಂತರ ವಿಸರ್ಜನೆ ಮಾಡುವ ವಾಡಿಕೆಯೂ ಇದೆ. 

ಸಾರ್ವಜನಿಕ ಗಣೇಶೋತ್ಸವ: ನಗರದ ಆಟೊ ಮಾಲೀಕ ಮತ್ತು ಚಾಲಕ ಸಂಘ, ಮಾರುತಿ ದೇವಸ್ಥಾನ, ನಗರಸಭೆ, ನಗರ ಮತ್ತು ಗ್ರಾಮೀಣ ಪೊಲೀಸ್ ಠಾಣೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಕಚೇರಿ ಆವರಣ ಮುಂತಾದೆಡೆ ಪ್ರತಿಷ್ಠಾಪಿಸಲಾಗಿರುವ ಗಣಪತಿಯ ವಿಗ್ರಹಗಳಿಗೆ ದಿನವೂ ಪೂಜೆ ಸಲ್ಲಿಸಲಾಗುತ್ತಿದೆ. ವಿವಿಧ ಭಂಗಿಗಳಲ್ಲಿರುವ ವಿಗ್ರಹಗಳು ಭಕ್ತರನ್ನು ಆಕರ್ಷಿಸುತ್ತಿವೆ. 

ಇದೇರೀತಿ ಕೋಡಿಬಾಗ, ಕಾಜುಬಾಗ, ಸುಂಕೇರಿ ಭಾಗದಲ್ಲೂ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕ ಗಣೇಶೋತ್ಸವ ಹಮ್ಮಿಕೊಂಡಿವೆ. ಮೂರ್ತಿಯ ವಿಸರ್ಜನೆ ಆಗುವವರೆಗೂ ಪ್ರತಿ ಸಂಜೆ ವಿಶೇಷ ಪೂಜೆ, ಭಜನೆ, ಕೀರ್ತನೆ, ಪ್ರಸಾದ ವಿತರಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 

ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಮಾಡಿದ ಮೂರ್ತಿಗಳನ್ನು ಜಿಲ್ಲಾಡಳಿತವು ಸಂಪೂರ್ಣವಾಗಿ ನಿಷೇಧಿಸಿದೆ. ಅವುಗಳಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಸಾರ್ವಜನಿಕರಿಗೂ ಹೆಚ್ಚಿನ ಅರಿವು ಉಂಟಾಗಿದೆ. ಆದ್ದರಿಂದ ಈ ಬಾರಿ ಮಣ್ಣಿನ ವಿಗ್ರಹಗಳೇ ಅಧಿಕ ಸಂಖ್ಯೆಯಲ್ಲಿರುವುದು ಗಮನಾರ್ಹವಾಗಿದೆ. 

ವಿಪರೀತ ವಾಹನ ದಟ್ಟಣೆ: ಕಾರವಾರ ನಗರವಿಡೀ ಹಬ್ಬದ ವಾತಾವರಣದಲ್ಲಿದೆ. ಎಲ್ಲ ಕಡೆಗಳಲ್ಲಿ ಹೂವು, ಹಣ್ಣಿನ ವ್ಯಾಪಾರವೂ ಭರ್ಜರಿಯಾಗಿ ಮುಂದುವರಿದಿದೆ. ಗಣಪತಿ ದೇವಸ್ಥಾನ, ಸವಿತಾ ವೃತ್ತ, ಸುಭಾಶ್ ವೃತ್ತದ ಸುತ್ತಮುತ್ತ ಶುಕ್ರವಾರ ವಾಹನ ದಟ್ಟಣೆ ವಿಪರೀತವಾಗಿತ್ತು. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದ ಕಾರಣ ಪಾದಚಾರಿಗಳು ತೊಂದರೆ ಅನುಭವಿಸಬೇಕಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !