ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯ ಗತ ವೈಭವದ ಸ್ಮರಣೆ!

ಸಿದ್ದಾಪುರ ತಾಲ್ಲೂಕು ಆಸ್ಪತ್ರೆ: ಸೌಲಭ್ಯಗಳಿದ್ದರೂ ಮರಳದ ಹಿಂದಿನ ಜನಪ್ರಿಯತೆ
Last Updated 5 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಸಿದ್ದಾಪುರ: ಪಟ್ಟಣದ ತಾಲ್ಲೂಕು ಆಸ್ಪತ್ರೆ ವಿಸ್ತಾರವಾದ ಕಟ್ಟಡವೂ ಸೇರಿದಂತೆ ವಿವಿಧ ಸೌಲಭ್ಯಗಳಿಂದ ಸಜ್ಜುಗೊಂಡಿದೆ. ಆದರೂ ದಶಕಗಳ ಹಿಂದಿದ್ದ ಜನಪ್ರಿಯತೆ ಮಾತ್ರ ಅದಕ್ಕೆ ದಕ್ಕುತ್ತಿಲ್ಲ.

ಸ್ತ್ರೀರೋಗ ತಜ್ಞ ಡಾ.ಕೆ.ಶ್ರೀಧರ ವೈದ್ಯ ವೈದ್ಯಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದ ಈ ಆಸ್ಪತ್ರೆ, ಅವರುಸರ್ಕಾರಿ ವೃತ್ತಿಯನ್ನು ಬಿಟ್ಟನಂತರ ಏರಿಳಿತಗಳನ್ನು ಕಾಣತೊಡಗಿತು. ಒಮ್ಮೊಮ್ಮೆ ಜನರ ಹೊಗಳಿಕೆ ಪಡೆದರೆ, ಒತ್ತೊಮ್ಮೆ ಕಳಾಹೀನವಾಗತೊಡಗಿತು.‘ವೈದ್ಯ ಡಾಕ್ಟರ್’ ಕಾಲದ ಸರ್ಕಾರಿ ಆಸ್ಪತ್ರೆಯನ್ನು ಜನರು ಇಂದೂ ನೆನಪಿಸಿಕೊಳ್ಳುತ್ತಾರೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಎಂಟು ತಜ್ಞ ವೈದ್ಯರು (ಹೆರಿಗೆ ತಜ್ಞರು, ಮಕ್ಕಳ ತಜ್ಞರು, ಸರ್ಜನ್, ಪಿಜಿಷಿಯನ್, ಅರಿವಳಿಕೆ ತಜ್ಞರು, ಗಂಟಲು ತಜ್ಞರು, ಮೂಳೆ ತಜ್ಞರು, ಕಣ್ಣಿನ ತಜ್ಞರು), ಒಬ್ಬ ದಂತ ವೈದ್ಯರು, ಇಬ್ಬರು ಆಯುಷ್ ವೈದ್ಯರಿದ್ದಾರೆ. ಆದ್ದರಿಂದ ಉತ್ತಮ ಹಾಗೂ ನುರಿತ ವೈದ್ಯರ ಸೇವೆ ಲಭ್ಯ ಇದೆ.

‘ಆಸ್ಪತ್ರೆಯಲ್ಲಿ ನಮಗೆ ಡಾಕ್ಟರೇ ಸಿಗಲಿಲ್ಲ’ ಎಂಬ ಆಕ್ಷೇಪವೂ ಸೇರಿದಂತೆ ಸಾರ್ವಜನಿಕರ ಹೇಳಿಕೆಗಳಿಂದ ಈ ಆಸ್ಪತ್ರೆಯ ಸಮಸ್ಯೆಗಳು ಆಗಾಗ ಬೆಳಕಿಗೆ ಬರುತ್ತವೆ. ಸಾರ್ವಜನಿಕರ ಅಸಮಾಧಾನ ತಾಲ್ಲೂಕು ಪಂಚಾಯ್ತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಜನ ಪ್ರತಿನಿಧಿಗಳಿಂದ ಆಗಾಗ ಪ್ರಕಟವಾಗುತ್ತದೆ.

ಕೆಲವು ವರ್ಷಗಳ ಹಿಂದೆ₹ 4.50 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡವನ್ನು ನವೀಕರಿಸಲಾಗಿದೆ. ಮೊದಲು 30 ಹಾಸಿಗೆಗಳ ಸೌಲಭ್ಯವಿದ್ದ ಈ ಆಸ್ಪತ್ರೆ, ಈಗ 100 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಕೆಯಾಗಿದೆ. ಡಯಾಲಿಸಿಸ್ ಘಟಕ, ಐ.ಸಿ.ಯು, ರಕ್ತ ತಪಾಸಣೆ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ತಾಲ್ಲೂಕಿನಲ್ಲಿ ‘108’, ‘ನಗು–ಮಗು’ ಸೇರಿದಂತೆ ಒಟ್ಟು ಐದು ಆಂಬುಲೆನ್ಸ್‌ಗಳಿವೆ.

ಕೊರೊನಾ ವಾರ್ಡ್, ಜ್ವರ ವಿಭಾಗ

ಈಗ ತಾಲ್ಲೂಕು ಆಸ್ಪತ್ರೆಯಲ್ಲಿ ಕೊರೊನಾ ವಾರ್ಡ್ ಮತ್ತು ಜ್ವರ ವಿಭಾಗ ಆರಂಭಿಸಲಾಗಿದೆ. ಕೊರೊನಾ ಚಿಕಿತ್ಸೆಗೆ 30 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.

‘ಕೊರೊನಾ ಸೋಂಕಿನ ಶಂಕಿತ ರೋಗಿಗಳಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗುತ್ತದೆ. ಯಾವುದೇ ರೋಗಿಯಲ್ಲಿ ಕೊರೊನಾ ಸೋಂಕು ದೃಢಪಟ್ಟರೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುತ್ತದೆ’ ಎಂದು ತಹಶೀಲ್ದಾರ್ ಮಂಜುಳಾ ಭಜಂತ್ರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT