ಕೃಷಿಕರಿಗೆ ಸಂಕಷ್ಟ ಸುರಿಸಿದ ಭಾರಿ ಮಳೆ

7
ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಹಾನಿ; ಅಧಿಕಾರಿಗಳಿಂದ ಸಮೀಕ್ಷೆ

ಕೃಷಿಕರಿಗೆ ಸಂಕಷ್ಟ ಸುರಿಸಿದ ಭಾರಿ ಮಳೆ

Published:
Updated:
Deccan Herald

ಕಾರವಾರ:  ಈ ಬಾರಿಯ ಮಳೆಗಾಲ ಕೃಷಿ ಚಟುವಟಿಕೆಗಳ ಮೇಲೂ ಸಾಕಷ್ಟು ಹಾನಿಯನ್ನು ಸುರಿದಿದೆ. ಜಿಲ್ಲೆಯ ವಿವಿಧೆಡೆ ಗದ್ದೆ, ತೋಟಗಳು ಜಲಾವೃತವಾಗಿವೆ. ಅಡಿಕೆಗೆ ಕೊಳೆರೋಗ ಬಂದಿದ್ದರೆ, ಗದ್ದೆಯಲ್ಲಿ ಪೈರು ಕೊಳೆಯುತ್ತಿವೆ.

ಒಂದೆಡೆ ಸುರಿಯುವ ಮಳೆ ಮತ್ತೊಂದೆಡೆ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ. ಇವರೊಂದಿಗೇ ತೋಟಗಾರಿಕಾ ಬೆಳೆಗಾರರೂ ಹರಸಾಹಸ ಪಡುವಂತಾಗಿದೆ. ಭತ್ತದ ಗದ್ದೆಗಳಿಗೆ ಗೊಬ್ಬರ ಹರಡಿ ಪೈರು ನಳನಳಿಸುವ ಸಂದರ್ಭದಲ್ಲೇ ಮಳೆ ಅಬ್ಬರಿಸಿತು. ಇದರಿಂದ ಶಿರಸಿ ತಾಲ್ಲೂಕಿನ ಬನವಾಸಿ, ಸಿದ್ದಾಪುರ ತಾಲ್ಲೂಕಿನ ವಿವಿಧೆಡೆ ಗದ್ದೆಗಳು ಜಲಾವೃತವಾದವು.

ನಿರಂತರ ಜಿಟಿಜಿಟಿ ಮಳೆಯಾಗುತ್ತಿರುವ ಕಾರಣ ಯಲ್ಲಾಪುರವನ್ನೂ ಒಳಗೊಂಡಂತೆ ಮಲೆನಾಡಿನ ವಿವಿಧ ತಾಲ್ಲೂಕುಗಳಲ್ಲಿ ಅಡಿಕೆ ತೋಟಗಳಲ್ಲಿ ಕೊಳೆರೋಗ ಮಿತಿಮೀರಿದೆ. ಫಸಲಿಗೆ ಔಷಧ ಸಿಂಪಡಣೆ ಮಾಡಲೂ ಮಳೆ ಅವಕಾಶ ಕೊಡುತ್ತಿಲ್ಲ ಎಂಬ ಗೋಳು ರೈತರದ್ದಾಗಿದೆ.

‘ಜಿಲ್ಲೆಯಲ್ಲಿ ಆ.18ರವರೆಗೆ ಮಾಡಿದ ಸಮೀಕ್ಷೆಯ ಪ್ರಕಾರ 110 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆಯಲಾಗಿದ್ದ ವಿವಿಧ ಬೆಳೆಗಳು ಹಾನಿಗೊಂಡಿರುವುದು ದೃಢಪಟ್ಟಿದೆ. ಇದರಲ್ಲಿ ಭತ್ತದ ಬೆಳೆಯೇ ಹೆಚ್ಚಿದೆ. ಹಳಿಯಾಳ ಭಾಗದಲ್ಲಿ ಅಧಿಕ ಮಳೆಯಿಂದಾಗಿ ಮೆಕ್ಕೆಜೋಳ ಮತ್ತು ಹತ್ತಿ ಬೆಳೆ ನಾಶವಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ರಾಧಾಕೃಷ್ಣ ತಿಳಿಸಿದ್ದಾರೆ.

ಶಿರಸಿ ತಾಲ್ಲೂಕಿನಲ್ಲಿ ಇದೇ 10ರಿಂದ 16ವರೆಗೆ ಸುರಿದ ಭಾರಿ ಮಳೆಯಿಂದ 56 ಹೆಕ್ಟೇರ್‌ ಭತ್ತ, 25 ಹೆಕ್ಟೇರ್ ಮೆಕ್ಕೊಜೋಳಕ್ಕೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ನಿರ್ದಿಷ್ಟವಾಗಿ ಆಗಿರುವ ಬೆಳೆ ನಷ್ಟವನ್ನು ಗದ್ದೆಗಳಲ್ಲಿ ನಿಂತಿರುವ ನೀರು ಸಂಪೂರ್ಣ ಇಳಿದ ಮೇಲೆ ಸಮೀಕ್ಷೆ ನಡೆಸಿ ತಿಳಿದುಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತೋಟಗಾರಿಕಾ ಬೆಳೆಗಳೂ ಸಾಕಷ್ಟು ಹಾನಿಯಾಗಿದ್ದು, ಈಗಲೇ ಇಂತಿಷ್ಟು ಪ್ರಮಾಣ ಎಂದು ಹೇಳುವುದು ಕಷ್ಟ. ಮಳೆ ಕಡಿಮೆಯಾದ ಬಳಿಕ ಲೆಕ್ಕಾಚಾರ ಹಾಕಲಾಗುವುದು ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಅಕ್ಷಯ ಕುಮಾರ ಉಪಾಧ್ಯೆ ಹೇಳಿದ್ದಾರೆ.

ಕೊಳೆರೋಗದಿಂದಾಗಿ ವಿವಿಧೆಡೆ ಅಡಿಕೆಗೆ ಶೇ 20ರಷ್ಟು ಹಾನಿಯಾಗಿದೆ. ಕಾಳುಮೆಣಸಿನ ಬೆಳೆಗೆ ಅಷ್ಟಾಗಿ ತೊಂದರೆಯಾಗಿಲ್ಲ. ಆದರೆ, ಕಾರವಾರ ತಾಲ್ಲೂಕಿನ ಕಡವಾಡ ಭಾಗದಲ್ಲಿ ಅಂದಾಜು ಶೇ 40ರಷ್ಟು ತರಕಾರಿ ಬೆಳೆ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಮೆಯಿಂದ ಪರಿಹಾರ: ತಮ್ಮ ಬೆಳೆಗೆ ಹಾನಿಯಾಗಿದ್ದಕ್ಕೆ ರೈತರು ವಿಮೆ ಪಡೆದುಕೊಳ್ಳಲು ಅವಕಾಶವಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಅಧಿಸೂಚನೆ ಹೊರಡಿಸಿದ ಬಳಿಕ ಅರ್ಜಿ ಸಲ್ಲಿಸಬಹುದು. ವೈಯಕ್ತಿಕ ವಿಮೆ ಮಾಡಿಸಿರುವ ರೈತರೂ ಇದೇ ರೀತಿ ಪರಿಹಾರ ಪಡೆದುಕೊಳ್ಳಬಹುದು. ಬೆಳೆ ಹಾನಿಯಾದ 48 ಗಂಟೆಗಳ ಒಳಗಾಗಿ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕು. ಕೃಷಿ ಇಲಾಖೆಯ ಗಮನಕ್ಕೆ ತರುವುದು ಕೂಡ ಸೂಕ್ತ ಎಂದು ಎಸ್.ಜಿ.ರಾಧಾಕೃಷ್ಣ ಸಲಹೆ ನೀಡಿದ್ದಾರೆ.

ಬೆಳೆ ಹಾನಿ ಪ್ರದೇಶ (ಹೆಕ್ಟೇರ್ ಹಾನಿ ಮೌಲ್ಯ (₹ ಗಳಲ್ಲಿ) ಪರಿಹಾರ (₹ ಗಳಲ್ಲಿ)
ಭತ್ತ 108.41 7,01,500 42,976
ಮೆಕ್ಕೆಜೋಳ 1.65 1,122 1,122
ಹತ್ತಿ 1 ಎಕರೆ 1 ಗುಂಟೆ 272 272
ಒಟ್ಟು 110.51 7.15 ಲಕ್ಷ 56,919

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !