ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ವಸತಿಗೃಹ ಬಳಕೆಗೆ ಅನುಮತಿ

ರೆಡ್‌ಕ್ರಾಸ್ ದಿನಾಚರಣೆ: ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಹೇಳಿಕೆ
Last Updated 3 ಜೂನ್ 2018, 9:00 IST
ಅಕ್ಷರ ಗಾತ್ರ

ಕಲಬುರ್ಗಿ: ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಗೆ ರಾಜಾಪುರ ಪ್ರದೇಶದಲ್ಲಿರುವ ಕಂದಾಯ ವಸತಿಗೃಹವನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಪ್ರಾದೇಶಿಕ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ರೆಡ್‌ಕ್ರಾಸ್‌ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ರೆಡ್‌ಕ್ರಾಸ್‌ ಸಂಸ್ಥೆಯು ರಾಜ್ಯ ಮಟ್ಟದಲ್ಲಿ ಸತತ ಮೂರು ವರ್ಷ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದಿದೆ. ರೆಡ್‌ಕ್ರಾಸ್‌ ಸಂಸ್ಥೆ ಕೈಗೊಳ್ಳುವ ಮಾನವೀಯ ಕಾರ್ಯಕ್ರಮಗಳ ಜತೆಗೆ ಯುವ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಲ್ಲಿ ಅನುಕೂಲವಾಗುತ್ತದೆ. ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ರೆಡ್‌ಕ್ರಾಸ್‌ ಸಂಸ್ಥೆಯ ಸದಸ್ಯತ್ವ ಪಡೆದು, ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಯುವಕರು ರಕ್ತದಾನಕ್ಕೆ ಮುಂದೆ ಬರುತ್ತಿಲ್ಲ. ಕಾಲೇಜುಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು. ನಿಫಾ ವೈರಸ್ ರೋಗದ ಮುಂಜಾಗ್ರತಾ ಕ್ರಮಗಳ ಕುರಿತು ಯುವಕರು ಮತ್ತು ಸಂಘ–ಸಂಸ್ಥೆಗಳು ರೆಡ್‌ಕ್ರಾಸ್‌ ಸಂಸ್ಥೆಯೊಂದಿಗೆ ಸೇರಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ರಾಜ್ಯ ಶಾಖೆ ಉಪ ಸಭಾಪತಿ ಅಪ್ಪಾರಾವ ಅಕ್ಕೋಣಿ ಮಾತನಾಡಿ, ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆಗೆ 2017-18ನೇ ಸಾಲಿನಲ್ಲಿ ರಾಜ್ಯದಲ್ಲಿ ಉತ್ತಮ ಸಾಧನೆಗೆ ಪ್ರಥಮ ಬಹುಮಾನ ಲಭಿಸಿದೆ. 2016-17ನೇ ಸಾಲಿನಲ್ಲಿ ಜೂನಿಯರ್ ರೆಡ್‌ಕ್ರಾಸ್‌ ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಜರಾದ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 1,680 ಜನರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಕ್ಕಾಗಿ ರಾಜ್ಯದಲ್ಲಿ ಕಲಬುರ್ಗಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ರೆಡ್‌ಕ್ರಾಸ್‌ ಸಂಸ್ಥೆ ವತಿಯಿಂದ ರಕ್ತ ಮತ್ತು ಕಣ್ಣಿನ ಬ್ಯಾಂಕ್ ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಕಡಿಮೆ ದರದಲ್ಲಿ ಕನ್ನಡಕಗಳು ದೊರೆಯುವ ಹಾಗೆ ಆಪ್ಟಿಕಲ್ ಸೆಂಟರ್ ಪ್ರಾರಂಭಿಸುವ ಯೋಜನೆ ಸಹಿತ ಹಮ್ಮಿಕೊಳ್ಳಲಾಗಿದೆ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಬಸವರಾಜ ಗಾದಗೆ, ಕೆಎಸ್‌ಆರ್‌ಪಿ ಕಮಾಂಡೆಂಟ್ ಬಸವರಾಜ ಜಿಳ್ಳೆ, ಜಿಲ್ಲಾ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ, ಉಪ ಸಭಾಪತಿ ಅರುಣಕುಮಾರ ಲೋಯಾ, ಗೌರವ ಕೋಶಾಧ್ಯಕ್ಷರಾದ ಭಾಗ್ಯಲಕ್ಷ್ಮೀ ಎಂ., ಕಾರ್ಯಕ್ರಮ ಸಂಯೋಜಕ ಸಿದ್ರಾಮಪ್ಪ ಬಮನಾಳಕರ ಇದ್ದರು.

ಸಂಸ್ಥೆಗೆ ರಾಜ್ಯಪಾಲರು ನೀಡಿದ ಪ್ರಥಮ ಬಹುಮಾನದ ಪ್ರಶಸ್ತಿ ಫಲಕವನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಹಸ್ತಾಂತರಿಸಲಾಯಿತು.

ಬಸವರಾಜ ಜಿಳ್ಳೆ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಮಹಾಗಾಂವ ಕ್ರಾಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಕಿಶನ್ ಠಾಕೂರ ಅವರನ್ನು ಸನ್ಮಾನಿಸಲಾಯಿತು.

**
ಜಿಲ್ಲೆಯಲ್ಲಿ ಯಾವುದೇ ವಿಪತ್ತು ಸಂಭವಿಸಿದಾಗ ಯುವಕರು ಹಾಗೂ ಸಂಘಟನೆಗಳು ನೆರವಿಗೆ ಧಾವಿಸಿದರೆ ದೊಡ್ಡ ವಿಪತ್ತುಗಳನ್ನು ಸುಲಭವಾಗಿ ನಿಭಾಯಿಸಬಹುದು
- ಆರ್.ವೆಂಕಟೇಶಕುಮಾರ್, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT