ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರದ ಕೆಲ ಹಳ್ಳಿಗಳಲ್ಲಿ ನೀರಿನಲ್ಲಿ ದಿನ ಕಳೆದ ಗ್ರಾಮಸ್ಥರು

ಚರಂಡಿ, ಹಳ್ಳದಲ್ಲಿ ಮಣ್ಣು, ಕಲ್ಲು: ಕೃತಕ ನೆರೆಯಿಂದ ಜನ ಕಂಗಾಲು
Last Updated 9 ಜುಲೈ 2020, 12:17 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಅಮದಳ್ಳಿ, ಮುದಗಾ,ಅಂಕೋಲಾ ತಾಲ್ಲೂಕಿನ ಅವರ್ಸಾ, ಹಾರವಾಡ ಮತ್ತು ಹಟ್ಟಿಕೇರಿ ಗ್ರಾಮಸ್ಥರು ಗುರುವಾರ ಅಕ್ಷರಶಃ ನೀರಿನಲ್ಲಿ ದಿನ ಕಳೆದರು. ಒಂದೆಡೆ ಭಾರಿ ಮಳೆಯಾದರೆ, ಮತ್ತೊಂದೆಡೆ ನೀರು ಹರಿದು ಹೋಗುವ ಹಳ್ಳಕ್ಕೆ ಮಣ್ಣು ತುಂಬಿದ್ದರಿಂದ ಕೃತಕ ನೆರೆ ಸೃಷ್ಟಿಯಾಗಿ ಜನ ಸಂಕಷ್ಟಕ್ಕೀಡಾದರು.

ಅಮದಳ್ಳಿ ಮತ್ತು ಮುದಗಾ ಸಮೀಪ ಗುಡ್ಡದ ಮೇಲಿನ ನೀರು ಹರಿಯುವ ಹಳ್ಳವನ್ನು ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಸಂದರ್ಭ ಮುಚ್ಚಲಾಗಿದೆ. ಇದರಿಂದ ಮಳೆ ನೀರು ಸಂಪೂರ್ಣವಾಗಿ ರಸ್ತೆಯ ಮೇಲೆ ಹರಿಯಿತು. ಜೊತೆಗೇ ನೌಕಾನೆಲೆಯ ಸಮೀಪ ಕಟ್ಟಡವೊಂದರ ಬದಿಯಲ್ಲಿ ನೀರಿನ ಹಾದಿಗೆ ಕಲ್ಲು, ಮಣ್ಣು ಸುರಿಯಲಾಗಿತ್ತು. ಇದರ ಪರಿಣಾಮ ಮಳೆಯ ನೀರು ಸಮುದ್ರಕ್ಕೆ ಹರಿಯಲು ಸಾಧ್ಯವಾಗದೇರಾಷ್ಟ್ರೀಯ ಹೆದ್ದಾರಿಯ ಮೇಲೆ ಸಂಗ್ರಹವಾಯಿತು.

ಹೊಳೆಯಂತಾದ ಹೆದ್ದಾರಿ:ಬುಧವಾರ ತಡರಾತ್ರಿಯಿಂದ ಆರಂಭವಾದ ಮಳೆಯು ಗುರುವಾರ ಬೆಳಿಗ್ಗೆ ಮತ್ತಷ್ಟು ಜೋರಾಯಿತು. ಅಮದಳ್ಳಿಯಲ್ಲಿ ಹಳ್ಳ ಕಟ್ಟಿಕೊಂಡಿದ್ದ ಕಾರಣ ನೀರಿನ ಪ್ರಮಾಣ ಕ್ಷಣ ಕ್ಷಣಕ್ಕೂ ಏರುತ್ತ ಹೋಯಿತು. ಹೆದ್ದಾರಿ ಸಂಪೂರ್ಣ ಜಲಾವೃತವಾಗಿ ಸುಮಾರು ಮೂರು ಅಡಿಗಳಷ್ಟು ನೀರು ಸಂಗ್ರಹವಾಯಿತು. ಅಮದಳ್ಳಿಯ ವೀರಗಣಪತಿ ದೇಗುಲದ ಆವರಣಕ್ಕೂ ನೀರು ಹರಿಯಿತು. ಮುದಗಾ ಮತ್ತು ಅಮದಳ್ಳಿ ನಡುವೆ ಹೆದ್ದಾರಿ ಸಂಪರ್ಕ ಕಡಿತವಾಯಿತು. ಹೆದ್ದಾರಿಯ ಇಕ್ಕೆಲಗಳಲ್ಲಿ ಮೂರು ಕಿಲೋಮೀಟರ್‌ಗೂ ಹೆಚ್ಚುದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಅಂಕೋಲಾ ತಾಲ್ಲೂಕಿನ ಅವರ್ಸಾ, ಬಸ್ ನಿಲ್ದಾಣದ ಸಮೀಪ ನಾಲ್ಕೈದು ಮನೆಗಳಿಗೆ ನೀರು ನುಗ್ಗಿತು. ಹಾರವಾಡದಲ್ಲೂ ಸಾಕಷ್ಟು ಹಾನಿಯಾಯಿತು. ಮನೆಗಳಲ್ಲಿದ್ದ ಟಿ.ವಿ, ಫ್ರಿಜ್, ದಿನಸಿ ಮುಂತಾದ ವಸ್ತುಗಳು ನೀರುಪಾಲಾದವು. ಇದೇ ಮೊದಲ ಬಾರಿಗೆ ಈ ರೀತಿಯಾಗಿದ್ದನ್ನು ಕಂಡುಸ್ಥಳೀಯರು ಗಾಬರಿಯಾದರು.

ಕೇಣಿಯ ಮೈದಾನದಲ್ಲಿ ಬೃಹತ್ ಮರವೊಂದು ಉರುಳಿದ ಪರಿಣಾಮ ಎರಡು ಕಾರುಗಳು ಸಂಪೂರ್ಣ ನಜ್ಜುಗುಜ್ಜಾದವು. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದ ಕಾರಣ ಪ್ರಾಣಾಪಾಯವಾಗಿಲ್ಲ.

ರಕ್ಷಣಾ ಕಾರ್ಯಾಚರಣೆ:ಹಾರವಾಡ, ಹಟ್ಟಿಕೇರಿ ಭಾಗದಲ್ಲಿ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದಾಗಿ ನಿವಾಸಿಗಳ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಸೊಂಟದೆತ್ತರಕ್ಕೆ ನಿಂತಿದ್ದ ನೀರಿನಲ್ಲಿ ಮನೆ ಮಂದಿಯನ್ನು ತೆರವು ಮಾಡಿ ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿದರು.

ಈ ಸಂದರ್ಭದಲ್ಲಿ ಮಾರುತಿ ಬಾಬುರಾಯ ನಾಯಕ, ರಾಜೇಶ ನಾಯ್ಕ, ಪ್ರಸಾದ ನಾಯ್ಕ, ಸುನೀಲ ನಾಯ್ಕ, ಸುಜಿತ ನಾಯ್ಕ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗಿರೀಶ ತಳವಾರ್, ಆಡಳಿತಾಧಿಕಾರಿ ಅರುಣ ನಾಯ್ಕ ಮುಂತಾದವರು ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು.

ಭಾರಿ ಮಳೆಯಿಂದಾಗಿ ಕಾರವಾರ ತಾಲ್ಲೂಕಿನ ಕಿನ್ನರದಲ್ಲೂ ರಸ್ತೆಗಳು ಹಾಗೂ ಕೆಲವು ಮನೆಗಳ ಆವರಣ ಜಲಾವೃತವಾದವು.

ಮಣ್ಣು, ಕಲ್ಲು ತೆರವಿಗೆ ಸೂಚನೆ:ಮಳೆ ನೀರು ತುಂಬಿದ ಅಮದಳ್ಳಿಗೆ ಶಾಸಕಿ ರೂಪಾಲಿ ನಾಯ್ಕ, ತಹಶೀಲ್ದಾರ್ ಆರ್.ವಿ.ಕಟ್ಟಿ, ಡಿ.ವೈ.ಎಸ್.ಪಿ ಅರವಿಂದ ಕಲಗುಜ್ಜಿ, ಐ.ಆರ್.ಬಿ ಹಾಗೂ ನೌಕಾನೆಲೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನೀರಿನ ಸಹಜ ಹರಿವಿಗೆ ಅಡ್ಡವಾಗಿರುವ ಕಲ್ಲು, ಮಣ್ಣನ್ನು ತೆರವು ಮಾಡುವಂತೆ ಶಾಸಕಿ ಸೂಚನೆ ನೀಡಿದರು.ಅಂತೆಯೇ, ನೌಕಾನೆಲೆಯ ಒಳಭಾಗದಲ್ಲಿರುವ ಪ್ರದೇಶದಲ್ಲಿ ಹಳ್ಳದ ಹೂಳು ತೆಗೆಯುವಂತೆಯೂ ನಿರ್ದೇಶನ ನೀಡಿದರು. ಈ ಸಂಬಂಧ ಸಭೆ ಹಮ್ಮಿಕೊಂಡು ಮುಂದಿನ ಕ್ರಮದ ಬಗ್ಗೆ ಚಿಂತಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT