ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘ ರಜೆಯ ಮೇಲೆ ತೆರಳಿದ ಮುಖ್ಯ ಶಿಕ್ಷಕಿ

Last Updated 26 ಜೂನ್ 2019, 18:15 IST
ಅಕ್ಷರ ಗಾತ್ರ

ಕಾರವಾರ:ತಾಲ್ಲೂಕಿನ ಶಿರವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ವರಲಕ್ಷ್ಮಿ ಮೋದಿ ಬುಧವಾರದಿಂದ ದೀರ್ಘ ರಜೆಯ ಮೇಲೆ ತೆರಳಿದರು. ಅವರ ವಿರುದ್ಧ ಹಲವಾರು ದೂರುಗಳು ಬಂದ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ವಿಚಾರಣೆಗೆಂದು ಶಾಲೆಗೆಭೇಟಿ ನೀಡಿದ್ದರು.

ಪೋಷಕರು ಮತ್ತು ಜನಪ್ರತಿನಿಧಿಗಳ ಮಾತಿಗೆ ವರಲಕ್ಷ್ಮಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಸುಮಾರು ಒಂದು ವರ್ಷದಿಂದ ಪದೇಪದೇ ಆರೋಪ ಕೇಳಿಬರುತ್ತಿತ್ತು. ಶಿಕ್ಷಕರಿಗೆ ನಾಲ್ಕು ತಿಂಗಳಿನಿಂದ ವೇತನವೂ ನೀಡಿಲ್ಲ ಎಂದು ದೂರಲಾಗಿತ್ತು. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸಭೆಗಳಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು. ಶಿಕ್ಷಣ ಇಲಾಖೆಯ ಆಯುಕ್ತರು ತನಿಖೆಗೂ ಆದೇಶಿಸಿದ್ದರು.

ಈ ಸಂಬಂಧ ಅವರ ಜೊತೆ ಸಭೆ ನಡೆಸಲು ಬಿಇಒ ಲತಾ ನಾಯ್ಕ ಬುಧವಾರ ಶಾಲೆಗೆ ಭೇಟಿ ನೀಡಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ್, ತಾಲ್ಲೂಕು ಪಂಚಾಯ್ತಿ ಸದಸ್ಯ ಮಾರುತಿ ನಾಯ್ಕ ಕೂಡ ಹಾಜರಿದ್ದರು.ಆದರೆ, ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವರಲಕ್ಷ್ಮಿ, ದೀರ್ಘ ರಜೆಯ ಮೇಲೆ ತೆರಳಿದರು.

ಈ ನಡುವೆ, ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ವಿನಾಯಕ ನಾಯಕ ಅವರನ್ನು ಹೆಚ್ಚುವರಿ ಎಂದು ಪರಿಗಣಿಸಿ ವರ್ಗಾವಣೆ ಮಾಡಲಾಗಿದೆ. ಹಾಗಾಗಿ ಇಂಗ್ಲಿಷ್ ಬೋಧನೆ ಮಾಡುತ್ತಿರುವ ವಾಸುದೇವ ನಾಯ್ಕ ಅವರೇ ಸಮಾಜ ವಿಜ್ಞಾನವನ್ನೂ ಬೋಧಿಸಬೇಕಿದೆ. ಇದರಿಂದ ಸಮಸ್ಯೆಯಾಗಲಿದೆ ಎಂದು ಪೋಷಕರೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT