ಮಂಗಳವಾರ, ಜುಲೈ 5, 2022
27 °C
ಭೀಮಣ್ಣ ನಾಯ್ಕ ಮಾಹಿತಿ

‘ಸುಪ್ರಿಯಾ ಇಂಟರ್ ನ್ಯಾಶನಲ್ ಹೊಟೆಲ್’ ಲೋಕಾರ್ಪಣೆ 26ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮುಕುಟಪ್ರಾಯವಾಗುವ ರೀತಿಯಲ್ಲಿ, ಸ್ಟಾರ್ ಹೊಟೆಲ್ ಮಾದರಿಯಲ್ಲಿ ರೂಪುಗೊಂಡಿರುವ ‘ಸುಪ್ರಿಯಾ ಇಂಟರ್ ನ್ಯಾಷನಲ್ ಹೊಟೆಲ್’ ಮೇ 26ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಹೊಟೆಲ್ ಮಾಲೀಕ, ಉದ್ಯಮಿ ಭೀಮಣ್ಣ ನಾಯ್ಕ ಹೇಳಿದರು.

ಇಲ್ಲಿನ ಸುಪ್ರಿಯಾ ಹೊಟೆಲ್ ಸಭಾಂಗಣದಲ್ಲಿ‌ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತಮ ದರ್ಜೆಯ ಹೊಟೆಲ್‍ನ್ನು ಶಿರಸಿಯಲ್ಲಿ ನಿರ್ಮಿಸುವ ಹಲವು ವರ್ಷದ ಕನಸು ಈಗ ಕೈಗೂಡಿದೆ. ಹೊಟೆಲ್ ಉದ್ಯಮದ 28 ವರ್ಷದ ಅನುಭವ ಆಧರಿಸಿ, ದೇಶ–ವಿದೇಶಗಳ ಹೊಟೆಲ್‍ಗಳಿಗೆ ಭೇಟಿ ನೀಡಿ ಅಲ್ಲಿನ ಸೌಕರ್ಯಗಳನ್ನು ಪರಾಮರ್ಶಿಸಿ ನಿರ್ಮಿಸಿದ ಹೊಟೆಲ್ ಇದಾಗಿದೆ’ ಎಂದರು.

‘ಅನುಭವಿ ಎಂಜಿನಿಯರ್ ಗಳು, ವಾಸ್ತುಶಿಲ್ಪ ತಂತ್ರಜ್ಞರು ಸೇರಿದಂತೆ ನುರಿತ ಸಿಬ್ಬಂದಿ ವ್ಯವಸ್ಥಿತ ಮಾದರಿಯಲ್ಲಿ ಹೊಟೆಲ್ ನಿರ್ಮಿಸಿದ್ದಾರೆ. 80ಕ್ಕೂ ಹೆಚ್ಚು ನುರಿತ ಸಿಬ್ಬಂದಿಯನ್ನು ಹೊಟೆಲ್ ನಿರ್ವಹಣೆಗೆ ನಿಯೋಜಿಸಲಾಗಿದೆ. ಫೈವ್ ಸ್ಟಾರ್ ಹೊಟೆಲ್‍ಗಳಲ್ಲಿ ಕೆಲಸ ನಿರ್ವಹಿಸಿ ಅನುಭವ ಉಳ್ಳ ವ್ಯವಸ್ಥಾಪಕರು ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ’ ಎಂದರು.

‘95 ಹವಾನಿಯಂತ್ರಿತ, 20 ಹವಾನಿಯಂತ್ರಿತ ರಹಿತ ಕೊಠಡಿಗಳಿವೆ. 4 ಡಾಮೆಟ್ರಿಗಳು, 2 ಹವಾನಿಯಂತ್ರಿತ ಬ್ಯಾಂಕ್ವೆಟ್ ಹಾಲ್‍ಗಳಿವೆ. ಸಸ್ಯಾಹಾರಕ್ಕೆ ಪ್ರತ್ಯೇಕ, ಮಾಂಸಾಹಾರಕ್ಕೆ ಪ್ರತ್ಯೇಕ ರೆಸ್ಟೊರೆಂಟ್ ತೆರೆಯಲಾಗಿದೆ. ಗ್ರಾಹಕರ ಅನುಕೂಲಕ್ಕೆ 50ಕ್ಕೂ ಹೆಚ್ಚು ಪುಸ್ತಕ ಒಳಗೊಂಡಿರುವ ಲೈಬ್ರರಿಯನ್ನೂ ಮೊದಲ ಮಹಡಿಯಲ್ಲಿ ನಿರ್ಮಿಸಲಾಗಿದೆ. ಅದರ ಪಕ್ಕದಲ್ಲೇ ಕಾಫಿ ಶಾಪ್ ಕೂಡ ಇದೆ’ ಎಂದು ವಿವರಿಸಿದರು.

‘ಕೊಠಡಿಗಳಿಗೆ ಗುಣಮಟ್ಟದ ಹ್ಯಾಂಡಲೂಮ್ ಬಳಕೆ ಮಾಡಲಾಗುತ್ತಿದೆ. ಇವುಗಳನ್ನು ಶುಚಿಗೊಳಿಸಲು ಹೈಟೆಕ್ ಲಾಂಡ್ರಿಯೂ ಇದೆ. ಗುಣಮಟ್ಟದ ಫರ್ನೀಚರ್ ಗಳನ್ನು ಬಳಕೆ ಮಾಡಲಾಗಿದೆ. ಪ್ರಾಯೋಗಿಕ ಹಂತದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಿವೆ’ ಎಂದರು.

ಎಸ್.ಕೆ.ಭಾಗವತ್, ರಮೇಶ ದುಬಾಶಿ, ಗಣೇಶ ದಾವಣಗೆರೆ, ರಾಜು ಉಗ್ರಾಣಕರ್, ಪ್ರಸನ್ನ ಶೆಟ್ಟಿ, ಇತರರು ಇದ್ದರು.

ಗಣ್ಯರು ಭಾಗಿ:

ಮೇ 26 ರಂದು ಬೆಳಿಗ್ಗೆ 11.30 ರಿಂದ ಹೊಟೆಲ್ ಲೋಕಾರ್ಪಣೆ ನಡೆಯಲಿದೆ. ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆ ವಹಿಸುವರು. ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಟ ಡಾ.ಶಿವರಾಜಕುಮಾರ್, ಸಚಿವರಾದ ಶಿವರಾಮ ಹೆಬ್ಬಾರ, ಕೋಟ ಶ್ರೀನಿವಾಸ ಪೂಜಾರಿ, ಸುನೀಲ ಕುಮಾರ್, ಪ್ರಮುಖರಾದ ಬಿ.ಕೆ.ಹರಿಪ್ರಸಾದ್, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಸತೀಶ ಜಾರಕಿಹೋಳಿ, ಮಧು ಬಂಗಾರಪ್ಪ ಸೇರಿ ಹಲವರು ಪಾಲ್ಗೊಳ್ಳುವರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಟಾಪರ್ ಆದ ಜಿಲ್ಲೆಯ ಏಳು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು ಎಂದು ಭೀಮಣ್ಣ ನಾಯ್ಕ ತಿಳಿಸಿದರು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.