ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಹಡಗಿನಿಂದ 19 ಮಂದಿ ರಕ್ಷಣೆ

ನವ ಮಂಗಳೂರು ಬಂದರಿಗೆ ಡಾಂಬರು ತರುತ್ತಿತ್ತು
Last Updated 16 ಸೆಪ್ಟೆಂಬರ್ 2022, 16:33 IST
ಅಕ್ಷರ ಗಾತ್ರ

ಕಾರವಾರ: ಮಹಾರಾಷ್ಟ್ರದ ರತ್ನಗಿರಿ ಕಡಲತೀರದಿಂದ 41 ಮೈಲು ದೂರದಲ್ಲಿ ಮುಳುಗುವ ಹಂತಕ್ಕೆ ತಲುಪಿದ್ದ ಹಡಗಿನಿಂದ, 19 ಮಂದಿ ಸಿಬ್ಬಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ.

ಹಡಗು, ಸಂಯುಕ್ತ ಅರಬ್ ರಾಷ್ಟ್ರದ ಖೋರ್ ಫಕ್ಕಾನ್ ಬಂದರಿನಿಂದ ನವ ಮಂಗಳೂರು ಬಂದರಿಗೆ ಡಾಂಬರು ತರುತ್ತಿತ್ತು. ಅದರಲ್ಲಿ 18 ಮಂದಿ ಭಾರತೀಯ ಸಿಬ್ಬಂದಿ ಹಾಗೂ ಒಬ್ಬರು ಇಥಿಯೋಪಿಯಾ ದೇಶದ ಮಾಸ್ಟರ್ ಇದ್ದರು. ಹಡಗಿನ ತಳಭಾಗದಲ್ಲಿರುವ ಟ್ಯಾಂಕ್‌ನ ಒಳಗೆ (ಬಾಲಸ್ಟ್ ಟ್ಯಾಂಕ್) ನೀರು ಸೇರಿಕೊಂಡು ಅಪಾಯಕ್ಕೀಡಾಗಿತ್ತು. ತಮ್ಮ ರಕ್ಷಣೆಗೆ ಧಾವಿಸುವಂತೆ ಅದರ ಸಿಬ್ಬಂದಿ ಮೊರೆಯಿಟ್ಟಿದ್ದರು.

ತಕ್ಷಣ ಕಾರ್ಯಾಚರಣೆ ಆರಂಭಿಸಿದ ಕೋಸ್ಟ್ ಗಾರ್ಡ್, ಸಮೀಪದಲ್ಲಿ ಗಸ್ತಿನಲ್ಲಿದ್ದ ‘ಸುಜೀತ್’ ಮತ್ತು ‘ಅಪೂರ್ವಾ’ ಹಡಗುಗಳನ್ನು ಆ ಜಾಗಕ್ಕೆ ಕಳುಹಿಸಿತು. ಅದೇ ಸಮಯಕ್ಕೆ ಅಲ್ಲಿಗೆ ಸರಕು ಸಾಗಣೆಯ ಹಡಗು ‘ಎಂ.ವಿ.ವಾಡಿ ಬನಿ ಖಾಲಿದ್’ ಕೂಡ ತಲುಪಿತು. ಜೊತೆಗೇ ಕೋಸ್ಟ್‌ಗಾರ್ಡ್ ಹೆಲಿಕಾಪ್ಟರ್ ಕೂಡ ಕಳುಹಿಸಿ, ಹಡಗಿನಲ್ಲಿದ್ದವರನ್ನು ಸುರಕ್ಷಿತವಾಗಿ ಮೇಲೆತ್ತಲಾಯಿತು. ಈ ನಡುವೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುರಕ್ಷತಾ ಸಂದೇಶಗಳನ್ನೂ ರವಾನಿಸಿ, ಆ ಮಾರ್ಗದಲ್ಲಿ ಇತರ ವಾಣಿಜ್ಯ ಹಡಗುಗಳು ಬಾರದಂತೆ ನೋಡಿಕೊಳ್ಳಲಾಯಿತು.

ಡಾಂಬರು ತುಂಬಿರುವ ಹಡಗನ್ನು ಸದ್ಯಕ್ಕೆ ಸಮುದ್ರದಲ್ಲೇ ಬಿಡಲಾಗಿದ್ದು, ಅದು ಮುಳುಗುವ ಸಾಧ್ಯತೆಯಿದೆ ಎಂದು ಅದರ ಸಿಬ್ಬಂದಿ ಹೇಳಿದ್ದಾರೆ. ಸಮುದ್ರದಲ್ಲಿ ಸಂಭಾವ್ಯ ಮಾಲಿನ್ಯ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅದರ ಮಾಲೀಕರಿಗೆ ಸೂಚಿಸಲಾಗಿದೆ. ಡಿ.ಜಿ ಶಿಪ್ಪಿಂಗ್ ಕಚೇರಿಯು ಅದನ್ನು ದಡಕ್ಕೆ ಎಳೆದು ತರಲು ಹಡಗೊಂದನ್ನು ಕಳುಹಿಸಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT