‘ಮೈತ್ರಿ’ಗೆ ಉತ್ತಮ ಫಲಿತಾಂಶದ ನಿರೀಕ್ಷೆ: ಬಸವರಾಜ ಹೊರಟ್ಟಿ ವಿಶ್ವಾಸ

ಗುರುವಾರ , ಏಪ್ರಿಲ್ 25, 2019
31 °C

‘ಮೈತ್ರಿ’ಗೆ ಉತ್ತಮ ಫಲಿತಾಂಶದ ನಿರೀಕ್ಷೆ: ಬಸವರಾಜ ಹೊರಟ್ಟಿ ವಿಶ್ವಾಸ

Published:
Updated:

ಕಾರವಾರ: ‘ರಾಜ್ಯದಲ್ಲಿ ಏ.18ರಂದು ಮೊದಲ ಹಂತದ ಚುನಾವಣೆಯ ಬಳಿಕ ಕಾಂಗ್ರೆಸ್, ಜೆಡಿಎಸ್ ಮುಖಂಡರು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಾದ್ಯಂತ ಪ್ರಚಾರಕ್ಕೆ ಬರಲಿದ್ದಾರೆ. ಎಲ್ಲರೂ ಒಟ್ಟಾಗಿ ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಆರ್.ವಿ. ದೇಶಪಾಂಡೆ ಹಿರಿಯ ರಾಜಕಾರಣಿಯಿದ್ದು, ಎಲ್ಲರ ಜೊತೆ ಸಂಪರ್ಕದಲ್ಲಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಈಗ ಎಲ್ಲರೂ ಪ್ರಾಮಾಣಿಕವಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 18– 19 ಕ್ಷೇತ್ರಗಳನ್ನು ಗೆದ್ದುಕೊಳ್ಳುವ ಲೆಕ್ಕಾಚಾರವಿದೆ. ಈ ಲೋಕಸಭಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ಮತ್ತು ಆನಂದ ಅಸ್ನೋಟಿಕರ್ ಈವರೆಗೆ ಸಮಾನ ಬೆಂಬಲ ಗಳಿಸುತ್ತಿದ್ದಾರೆ. ಕೊನೆಗೆ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆಯಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜೆಡಿಎಸ್– ಕಾಂಗ್ರೆಸ್‌ ಮೈತ್ರಿಯಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಒಂದೂ ಕ್ಷೇತ್ರವನ್ನು ಗೆಲ್ಲಲು ಸಾಧ್ಯವಿಲ್ಲದಂಥ ವಾತಾವರಣವಿದೆ. ತುಮಕೂರಿನಲ್ಲಿ ಅಸಮಾಧಾನದ ನಡುವೆಯೂ ಮೈತ್ರಿ ಸುಧಾರಣೆಯಾಗಿದೆ. ಹಾವೇರಿ, ಧಾರವಾಡದಲ್ಲೂ ನಮ್ಮ ಅಭ್ಯರ್ಥಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ವಿಜಯಪುರ, ಬಾಗಲಕೋಟೆಯಲ್ಲಿ ಮಹಿಳಾ ಅಭ್ಯರ್ಥಿಗಳಿರುವುದು  ಸಕಾರಾತ್ಮಕ ಪ್ರಭಾವ ಬೀರಿದೆ’ ಎಂದರು. 

‘ಬಿಜೆಪಿಯಲ್ಲಿ ಏಕವ್ಯಕ್ತಿ ಪ್ರದರ್ಶನ’: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷಗಳಲ್ಲಿ ಒಂದೂ ಜನಪರ ಕೆಲಸ ಮಾಡಿಲ್ಲ. ಹಾಗಾಗಿ ಆ ಪಕ್ಷದ ಅಭ್ಯರ್ಥಿಗಳು ಮೋದಿಯನ್ನು ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಬಿಜೆಪಿಯಲ್ಲಿ ಏಕವ್ಯಕ್ತಿ ಪ್ರದರ್ಶನ ನಡೆಯುತ್ತಿದೆ. ಅಡ್ವಾಣಿಯಂಥ ನಾಯಕರನ್ನು ಮೂಲೆಗೆ ತಳ್ಳಿದ್ದೇ ಇದಕ್ಕೆ ಉದಾಹರಣೆ’ ಎಂದು ಟೀಕಿಸಿದರು. 

‘ಈವರೆಗೆ ಮಾಡಿದ ಮತ್ತು ಮುಂದೆ ಮಾಡುವ ಕೆಲಸಗಳು ಪ್ರಚಾರದ ವಿಷಯಗಳಾಗಬೇಕು. ಚಾರಿತ್ರ್ಯಹರಣ, ವೈಯಕ್ತಿಕ ಟೀಕೆಗಳು ಸರಿಯಲ್ಲ. ಅದೇನೇ ಅಪಪ್ರಚಾರ ಮಾಡಿದರೂ ಶೇ 85ರಷ್ಟು ಮತದಾರರು ಯಾರಿಗೆ ಮತ ನೀಡಬೇಕು ಎಂದು ಮೊದಲೇ ನಿರ್ಧರಿಸಿರುತ್ತಾರೆ. ನಮ್ಮ ಪ್ರಯತ್ನವೇನಿದ್ದರೂ ಉಳಿದ ಶೇ 15 ಮತಗಳಿಗಾಗಿ ಮಾತ್ರ’ ಎಂದರು.

‘ದಾಳಿ ಸ್ಯಾಂಪಲ್ ಇದ್ದಂತೆ’: ‘ಜಿಲ್ಲೆಯ ಬಿಜೆಪಿ ಮುಖಂಡರ ಮನೆಗಳ ಮೇಲೆ ನಡೆದ ಆದಾಯ ತೆರಿಗೆ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳ ದಾಳಿ ಮೆಡಿಕಲ್ ಶಾಪ್‌ಗಳಲ್ಲಿ ಸ್ಯಾಂಪಲ್ ನೀಡಿದಂತೆ. ಬಿಜೆಪಿಯವರು ಎಲ್ಲ ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಮನೆಗಳ ಮೇಲೆ ನಡೆದ ದಾಳಿಯನ್ನು ಟೀಕಿಸುತ್ತಿದ್ದರು. ಇದರಿಂದ ತಪ್ಪು ಸಂದೇಶ ಹೋಗಬಾರದು ಎಂದು ದಾಳಿ ಮಾಡಿದ್ದಾರೆ. ಯಾರೇ ಆಗಿರಲಿ, ಚುನಾವಣೆ ಸಂದರ್ಭದಲ್ಲಿ ಈ ರೀತಿ ದಾಳಿ ಮಾಡುವುದು ಸರಿಯಲ್ಲ’ ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.

ಮುಖಂಡರಾದ ಪ್ರಕಾಶ್ ನಾಯ್ಕ, ಸಿ.ಆರ್.ಸಿದ್ದರಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !