ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತ್ರು ಸೈನಿಕರ ಜತೆ ಸೆಣೆಸಾಟ: ಯುದ್ಧ ನೆನೆದ ನಿವೃತ್ತ ಸೈನಿಕ ಡಿ.ಬಿ.ವೆಂಕಟಾಪೂರ

Last Updated 25 ಜುಲೈ 2020, 19:30 IST
ಅಕ್ಷರ ಗಾತ್ರ

ಮುಂಡಗೋಡ: 'ಅಸ್ಸಾಂನಲ್ಲಿ ಕೆಲಸ ಮಾಡುತ್ತಿರುವಾಗ, ಕಾರ್ಗಿಲ್ ಪ್ರದೇಶಕ್ಕೆ ನಿಯೋಜನೆಗೊಳ್ಳುವಂತೆ 57ಮೌಂಟೇನ್ ಆರ್‍ಟಿ ಬ್ರಿಗೇಡ್‍ಗೆ ಕರೆ ಬಂತು. ಎಲ್‍ಕೆಜಿಯಲ್ಲಿ ಓದುತ್ತಿದ್ದ ಹಿರಿಯ ಮಗ ಹಾಗೂ ಪತ್ನಿಯನ್ನು ಅದೇ ಊರಿನಲ್ಲಿ ಬಿಟ್ಟು, ಮೀರಟ್‌ನತ್ತ ರೈಲಿನಲ್ಲಿ ಹೊರಟೆವು. ಹಿಮಾಲಯದ ತಪ್ಪಲಿನಲ್ಲಿ ತಿಂಗಳುಗಟ್ಟಲೇ ಯುದ್ಧದಲ್ಲಿ ಪಾಲ್ಗೊಂಡು ವಿಜಯದೊಂದಿಗೆ ಮರಳಿದೆವು..’

1999ರ ಕಾರ್ಗಿಲ್ ಯುದ್ದದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಸೈನಿಕ ಡಿ.ಬಿ.ವೆಂಕಟಾಪೂರ, ಆಗಿನ ಸಂದರ್ಭವನ್ನು ಮೆಲುಕು ಹಾಕಿದರು. ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಮಾಳೆಕೊಪ್ಪ ಗ್ರಾಮದ ಅವರು, 18 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ತಾಲ್ಲೂಕಿನ ಜೋಗೇಶ್ವರ ಹಳ್ಳದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

'ಕಾಶ್ಮೀರ ತಲುಪಿದ ನಂತರ ಅಲ್ಲಿಂದ ಆಯಕಟ್ಟಿನ ಜಾಗಕ್ಕೆ ವಿಮಾನದ ಮೂಲಕ ನಮ್ಮನ್ನು ಕಳುಹಿಸಿ, ನಿಗದಿತ ಸ್ಥಳಕ್ಕೆ ನಿಯೋಜಿಸಲಾಯಿತು. ಮರಾಠಾ ಲೈಟ್ ಇನಫಂಟ್ರಿ ತಂಡದ ಸೈನಿಕರು ಮೊದಲು ಸ್ಥಾನ ಖಚಿತಪಡಿಸಿಕೊಂಡರು. ಎರಡನೆಯವರಾಗಿ ನಮ್ಮ ಬ್ರಿಗೆಡ್‍ನವರು ಜಾಗ ಭದ್ರಪಡಿಸಿಕೊಂಡು ಸಿದ್ಧರಾದೆವು. ಶತ್ರು ಸೈನಿಕರಷ್ಟೆ ಅಲ್ಲದೇ, ಭಯೋತ್ಪಾದಕರೂ ಒಟ್ಟಾಗಿ ಎತ್ತರದ ಪ್ರದೇಶಗಳಲ್ಲಿ ಅಡಗಿ ಕುಳಿತಿದ್ದರು. ಆ ಪರ್ವತಗಳ ತುದಿಯನ್ನು ಮುಟ್ಟಿ, ನಮ್ಮದೇ ಪೋಸ್ಟ್‌ಗಳನ್ನು ವಶಪಡಿಸಿಕೊಳ್ಳುವುದು ಸವಾಲಿನ ಕೆಲಸವಾಗಿತ್ತು' ಎಂದು ಆಗಿನ ಪರಿಸ್ಥಿತಿಯನ್ನು ವಿವರಿಸಿದರು.

'ಶತ್ರುಗಳು ಅಡಗಿ ಕುಳಿತಿರುವ ಪ್ರದೇಶಗಳ ಮಾಹಿತಿಯನ್ನು ಖಚಿತಪಡಿಸುವ ಜವಾಬ್ದಾರಿ ನನಗೆ ನೀಡಿದ್ದರು. ಒಂದು ಕಿ.ಮೀ ವ್ಯಾಪ್ತಿಯಲ್ಲಿ ಎಷ್ಟು ಎತ್ತರದಲ್ಲಿ, ಎಷ್ಟು ಶತ್ರುಗಳು ಅಡಗಿ ಕುಳಿತಿದ್ದಾರೆ, ಅವರ ಹತ್ತಿರ ಇರಬಹುದಾದ ಆಯುಧಗಳ ಬಗ್ಗೆ ಮಾಹಿತಿ ಕಲೆ ಹಾಕಿ ಮೇಲಾಧಿಕಾರಿಗಳಿಗೆ ಒಪ್ಪಿಸುತ್ತಿದ್ದೆ. ನಂತರ ನಮ್ಮ ಸೈನಿಕರಿಂದ ಕಾರ್ಯಾಚರಣೆ ನಡೆಯುತ್ತಿತ್ತು. ಸಂಜೆಯ ವೇಳೆಗೆ ಶತ್ರುಗಳಿಂದ ಸಿಡಿದ ಗುಂಡು ನನ್ನ ಕಿವಿ ಹಾಗೂ ಕಾಲಿಗೆ ತಾಗಿ ಗಾಯಗೊಂಡೆ. ವಾರ ಕಾಲ ವಿಶ್ರಾಂತಿ ಪಡೆದು, ಮತ್ತೆ ಕಾರ್ಯಾಚರಣೆಯ ತಂಡ ಸೇರಿಕೊಂಡೆ' ಎಂದರು.

'ಮರಾಠಾ ಲೈಟ್ ಇನಫಂಟ್ರಿ ತಂಡದ ಕೆಲವು ಸೈನಿಕರು ಕಣ್ಣೆದುರಿಗೆ ಹುತಾತ್ಮರಾದರು. ಸಿಡಿಮದ್ದು, ಫಿರಂಗಿಗಳ ಬಳಕೆ ಹೆಚ್ಚಾಗುತ್ತಿದ್ದಂತೆ ಶತ್ರು ಪಾಳಯದಲ್ಲಿ ಸಾವು–ನೋವಿನ ಸಂಖ್ಯೆ ಹೆಚ್ಚಾಗತೊಡಗಿತು. ಒಂದೊಂದೆ ಪೋಸ್ಟ್‌ಗಳನ್ನು ಭಾರತೀಯ ಸೈನಿಕರು ಮರಳಿ ವಶಕ್ಕೆ ಪಡೆಯುತ್ತ ಮುನ್ನುಗ್ಗುತ್ತಿದ್ದರು' ಎಂದು ನೆನಪಿಸಿಕೊಂಡರು. ಅವರ ಸಂಪರ್ಕ ಸಂಖ್ಯೆ–97416 58123

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT