ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕಳಚೆ ಗ್ರಾಮ ಸ್ಥಳಾಂತರಿಸಲು ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

Last Updated 29 ಜುಲೈ 2021, 13:50 IST
ಅಕ್ಷರ ಗಾತ್ರ

ಕಾರವಾರ: ‘ಭಾರಿ ಭೂ ಕುಸಿತಕ್ಕೆ ಒಳಗಾಗಿರುವ ಯಲ್ಲಾಪುರ ತಾಲ್ಲೂಕಿನ ವಜ್ರಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಚೆ ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸಲಾಗುವುದು. ಇದಕ್ಕೆ ಅಗತ್ಯವಿರುವ 10-15 ಎಕರೆ ಜಮೀನನ್ನು ಗುರುತಿಸಿ ಪ್ರಸ್ತಾವ ಸಲ್ಲಿಸಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ತಾಲ್ಲೂಕುಗಳ ವಿವಿಧೆಡೆ ಮಳೆ ಮತ್ತು ಭೂಕುಸಿತದಿಂದ ಹಾನಿಗೀಡಾದ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಅಂಕೋಲಾದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

‘ಭೂ ಕುಸಿತದಿಂದಾಗಿ ಕಳಚೆಯಲ್ಲಿ ಮುಂದೆ ಜೀವನ ನಡೆಸಲು ಸಾಧ್ಯವಿಲ್ಲ. ಹಾಗಾಗಿ ತಮ್ಮನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರೂ ಮನವಿ ಮಾಡಿದ್ದಾರೆ. ಅಲ್ಲಿ ಪರಿಹಾರ ಕಾಮಗಾರಿಗೆ ಹಣ ನೀಡಿದರೆ ವ್ಯರ್ಥವಾಗಲಿದೆ. ಹಾಗಾಗಿ ಪೂರ್ಣ ಗ್ರಾಮವನ್ನೇ ಸ್ಥಳಾಂತರಿಸಿ’ ಎಂದು ಸೂಚಿಸಿದರು.

ಕಳಚೆಯಲ್ಲಿ 19 ಮಜಿರೆಗಳಿದ್ದು, 283 ಮನೆಗಳಿವೆ. 998 ಜನಸಂಖ್ಯೆಯಿದೆ. ಜುಲೈ 22 ಮತ್ತು 23ರಂದು ಸುರಿದ ವರ್ಷಧಾರೆ, ಭೂ ಕುಸಿತದಿಂದ 15 ಮನೆಗಳು ಸಂಪೂರ್ಣ ಕುಸಿದಿವೆ. ನೂರಾರು ಮನೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿವೆ. ಗುಡ್ಡದ ಎರಡೂ ಬದಿಗಳಲ್ಲಿ ಬಿರುಕು ಬಿಟ್ಟಿದ್ದು, ಮತ್ತೆ ಕುಸಿಯುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT