ಬುಧವಾರ, ಆಗಸ್ಟ್ 4, 2021
21 °C
ಬೇರೆ ಬೇರೆ ವಿಧದ ವಾಹನಗಳ ಪಾರ್ಕಿಂಗ್‌ಗೆ ಜಾಗ ಗುರುತಿಸಿದ ನಗರಸಭೆ

ನಗರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ನಗರದಲ್ಲಿ ವಾಹನಗಳ ಸಂಚಾರವನ್ನು ಸುಗಮ ಮತ್ತು ವ್ಯವಸ್ಥಿತವಾಗಿಸಲು ನಗರಸಭೆಯು ಯೋಜನೆ ರೂಪಿಸಿದೆ. ಯಾವ ಮಾದರಿಯ ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ರಸ್ತೆಗಳನ್ನು ಗುರುತಿಸಿದೆ.

ಈ ಸಂಬಂಧ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರಸಭೆಯ ಪ್ರಭಾರ ಆಯುಕ್ತೆ ಎಂ.ಪ್ರಿಯಾಂಗಾ, ಸಾಕಷ್ಟು ವಿಶಾಲವಾದ ರಸ್ತೆಗಳಿರುವ ಕಾರವಾರದಲ್ಲಿ ಕೂಡ ಟ್ರಾಫಿಕ್ ಜಾಮ್ ಆಗುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಈ ಬಗ್ಗೆ ಮಾತನಾಡಿದ ಅವರು, ‘ನಗರದ ವಾಹನ ದಟ್ಟಣೆ ಮತ್ತು ರಸ್ತೆಗಳ ವಿಸ್ತೀರ್ಣವನ್ನು ಅಧ್ಯಯನ ಮಾಡಿ ವಾಹನ ನಿಲುಗಡೆಗೆ ಯೋಜನೆ ಸಿದ್ಧಪಡಿಸಲಾಗಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಅಲ್ಲದೇ ಶಿಸ್ತು ಕಾಣಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ಪಿ.ನಾಯ್ಕ ಮಾತನಾಡಿ, ‘ಗಣಪತಿ ದೇವಸ್ಥಾನದಿಂದ ಉಡುಪಿ ಶ್ರೀಕೃಷ್ಣ ವಿಲಾಸ ಹೋಟೆಲ್‌ವರೆಗೆ ಸರಕು ಸಾಗಣೆಯ ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅನುಮತಿಯಿದೆ. ಈ ರಸ್ತೆಯಲ್ಲೇ ಹೆಚ್ಚು ವಾಹನ ದಟ್ಟಣೆ ಇರುವ ಕಾರಣ ಈ ಪದ್ಧತಿಯನ್ನು ಮುಂದುವರಿಸಲಾಗುತ್ತದೆ’ ಎಂದು ಹೇಳಿದರು.

ದ್ವಿಚಕ್ರ ವಾಹನ ದಿನಬಿಟ್ಟು ದಿನ ನಿಲುಗಡೆ:  ಬ್ರಾಹ್ಮಣಗಲ್ಲಿ, ಮಾರುತಿಗಲ್ಲಿ, ಕುಟಿನೊ ರಸ್ತೆ, ರಾಧಾಕೃಷ್ಣ ರಸ್ತೆ (ಬಸ್ ನಿಲ್ದಾಣ ರಸ್ತೆಯಿಂದ ಕೋಡಿಬಾಗ ಮುಖ್ಯರಸ್ತೆಯವರೆಗೆ), ಸವಿತಾ ಹೋಟೆಲ್ ಹಿಂಭಾಗದ ರಸ್ತೆ, ಜನತಾ ಬಝಾರ್‌ನಿಂದ ಕಾರವಾರ– ಕೋಡಿಬಾಗ ರಸ್ತೆಯ ತನಕ.

ವಾಹನ ನಿಲುಗಡೆ ನಿಷೇಧ:  ಕಾರವಾರ– ಇಳಕಲ್ ರಸ್ತೆ (ಸುಭಾಸ ವೃತ್ತದಿಂದ ಜನತಾ ಬಝಾರ್‌ವರೆಗೆ ಹಾಗೂ ಜನತಾ ಬಝಾರ್‌ನಿಂದ ಗ್ರೀನ್‌ಸ್ಟ್ರೀಟ್), ಹೈಚರ್ಚ್ ರಸ್ತೆ (ದೋಭಿಘಾಟ್‌ನಿಂದ ಕಾರವಾರ ಇಳಕಲ್ ರಸ್ತೆ), ಹೂವಿನ ಚೌಕ ರಸ್ತೆ (ಉಪ್ಪಿನ ದೇವಸ್ಥಾನದಿಂದ ಮುರಳೀಧರ ಮಠ ಕ್ರಾಸ್), ಕಮಲಾಕರ ರಸ್ತೆ (ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಿಂದ ಎಂ.ಜಿ.ರಸ್ತೆ), ಸಿವಿಲ್ ನ್ಯಾಯಾಲಯದ ರಸ್ತೆ (ಗ್ರೀನ್‌ಸ್ಟ್ರೀಟ್‌ನಿಂದ ಕಾರವಾರ ಕೋಡಿಬಾಗ ರಸ್ತೆ), ಪಿಕಳೆ ರಸ್ತೆ (ರಾಷ್ಟ್ರೀಯ ಹೆದ್ದಾರಿಯಿಂದ ಎಂ.ಜಿ.ರಸ್ತೆ), ಗ್ರೀನ್‌ಸ್ಟ್ರೀಟ್ (ನಗರ ಪೊಲೀಸ್ ಠಾಣೆಯಿಂದ ಹೊಸ ಮೀನು ಮಾರುಕಟ್ಟೆ). 

ನಗರಸಭೆಯ ಗಾಂಧಿ ಮಾರುಕಟ್ಟೆಯ ಒಳಗಿನ ರಸ್ತೆ ಮತ್ತು ಧೋಬಿಘಾಟ್‌ ರಸ್ತೆಯ ಹೈಚರ್ಚ್‌ನಿಂದ ಕಾರವಾರ ಕೋಡಿಭಾಗ ರಸ್ತೆಯವರೆಗೆ ಮಾತ್ರ ಸರಕು ಸಾಮಗ್ರಿ ತುಂಬಿಸುವುದು ಹಾಗೂ ಇಳಿಸುವುದು ಮಾಡಬಹುದು.

ಇದರ ಸಂಪೂರ್ಣ ಮಾಹಿತಿಯು ನಗರಸಭೆಯ ವೆಬ್‌ಸೈಟ್‌: http://karwarcity.mrc.gov.in/ ಲಭ್ಯವಿದೆ. ನಾಗರಿಕರು ಸಲಹೆ, ಆಕ್ಷೇಪಗಳಿದ್ದರೆ ತಿಳಿಸಬಹುದು ಎಂದು ಆಯುಕ್ತೆ ತಿಳಿಸಿದ್ದಾರೆ.

‘ಫಲಕ ಅಳವಡಿಕೆ’: ‘ನಗರದ ರಸ್ತೆಗಳಲ್ಲಿ ಅಪಘಾತ ಆಗಬಹುದಾದ ಸ್ಥಳಗಳನ್ನು ಗುರುತಿಸಲಾಗಿದ್ದು, ರಸ್ತೆಗಳು ಕೂಡುವ ಜಾಗದಲ್ಲಿ ಹಂಪ್‌ಗಳನ್ನು ಅಳವಡಿಸಲಾಗುತ್ತಿದೆ. ಹಾಳಾಗಿರುವ ಹಳೆಯದನ್ನು ಬದಲಿಸಲಾಗುತ್ತದೆ. ನಗರದಲ್ಲಿ ರಸ್ತೆಗಳ ನಾಮಫಲಕಗಳು, ದಿಕ್ಸೂಚಿ ಫಲಕಗಳನ್ನು ಅಳವಡಿಸಲಾಗುತ್ತದೆ’ ಎಂದು ಎಂ.ಪ್ರಿಯಾಂಗಾ ತಿಳಿಸಿದರು.

––––

ಏಕಕಾಲಕ್ಕೆ ವಾಹನ ನಿಲುಗಡೆ

780

ನಾಲ್ಕು ಚಕ್ರಗಳ ವಾಹನ ನಿಲುಗಡೆ ಸಾಧ್ಯತೆ

2,550

ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು