ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗೆ ಟೋಲ್: ಪ್ರಯಾಣಿಕರಿಗೆ ಹೊರೆ ತಗ್ಗಿಸಿ

ತಾ.ಪಂ. ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕಿ ರೂಪಾಲಿ ನಾಯ್ಕ ತಾಕೀತು
Last Updated 25 ಫೆಬ್ರುವರಿ 2020, 12:32 IST
ಅಕ್ಷರ ಗಾತ್ರ

ಕಾರವಾರ:‘ಬಸ್‌ಗೆಟೋಲ್ ಶುಲ್ಕದ ಹೊರೆಯನ್ನುಪ್ರಯಾಣಿಕರ ಮೇಲೆ ಹೊರಿಸದಿರಲು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಐ.ಆರ್.ಬಿ. ಅಧಿಕಾರಿಗಳ ಜೊತೆ ಸಭೆ ನಡೆಸಿ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಶಾಸಕಿ ರೂಪಾಲಿ ನಾಯ್ಕ ತಾಕೀತು ಮಾಡಿದರು.

ನಗರದಲ್ಲಿ ಮಂಗಳವಾರನಡೆದ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಕೆ.ಡಿ.ಪಿ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಹಟ್ಟಿಕೇರಿ ಟೋಲ್ ಪ್ಲಾಜಾದಿಂದ ಐದು ಕಿಲೋಮೀಟರ್ ಸುತ್ತಮುತ್ತ ಬಸ್‌ನಲ್ಲಿ ಪ್ರಯಾಣಿಸುವವರಿಂದಲೂ ₹ 9 ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿದೆ. ಇದು ಖಂಡಿತಾ ಸರಿಯಲ್ಲ. ಈ ಬಗ್ಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಯ ಗಮನಕ್ಕೆ ತಂದು ಪರಿಹಾರ ರೂಪಿಸಿ’ ಎಂದು ಸೂಚಿಸಿದರು.

ಗೊಟೆಗಾಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿರುವುದಾಗಿ ಶಾಸಕಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.ಈ ಬಗ್ಗೆ ಅಧಿಕಾರಿಗಳು, ಯೋಜನೆಗೆ ಜಮೀನು ಕಳೆದುಕೊಂಡವರು ಪರಿಹಾರ ಸಿಕ್ಕಿಲ್ಲ ಎಂದು ಆಕ್ಷೇಪಿಸಿದ್ದಾರೆ ಎಂದರು. ಇದಕ್ಕೆಪ್ರತಿಕ್ರಿಯಿಸಿದ ರೂಪಾಲಿ, ‘15 ವರ್ಷಗಳ ಹಿಂದೆ ಮಾಡಿರುವ ಕೆಲಸಕ್ಕೆ ಯಾರದ್ದೋ ಪ್ರಚೋದನೆಯಲ್ಲಿ ಅಡ್ಡಿ ಮಾಡುತ್ತಿದ್ದಾರೆ. ಅಡ್ಡಿಯಿರುವ ಬಗ್ಗೆ ಮಾಹಿತಿ ಪಡೆದುಕೊಂಡು ತಿಳಿಸಿ’ ಎಂದು ತಹಶೀಲ್ದಾರ್‌ಗೆ ಸೂಚಿಸಿದರು.

‘ಗೋಯರ್ ಗ್ರಾಮದಲ್ಲಿ ರಸ್ತೆಯ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇಂದಿಗೂ ಜನ 12 ಕಿಲೋಮೀಟರ್ ನಡೆದುಕೊಂಡು ಬರುತ್ತಾರೆ. ರಸ್ತೆಯಂತಹ ಅಗತ್ಯ ಕೆಲಸಗಳಿಗೆ ತೊಂದರೆ ಕೊಡಬೇಡಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲ್ಲೂಕಿನ ಲಾಂಡೆ ಗ್ರಾಮದಲ್ಲಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನುಇನ್ನೂ ವಿತರಿಸಿಲ್ಲ. ಈ ಕೂಡಲೇ ವ್ಯವಸ್ಥೆ ಮಾಡಿ ಎಂದೂ ಸೂಚಿಸಿದರು.

ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ 64 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿವೆ. ಅವುಗಳಿಗೆ ತಿಂಗಳಿಗೆ ₹ 3 ಸಾವಿರದಂತೆ ಬಾಡಿಗೆ ನೀಡಲಾಗುತ್ತಿದೆ. 148 ಸ್ವಂತ ಕಟ್ಟಡಗಳಿವೆ’ ಎಂದು ತಿಳಿಸಿದರು. ಜೀರ್ಣಾವಸ್ಥೆಯಲ್ಲಿರುವ ಸ್ವಂತ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಲು ಶಾಸಕಿ ತಿಳಿಸಿದರು.

ಹಾನಿಯಾಗದಿದ್ದರೂ ಪರಿಹಾರ!: ‘ಹಳಗೆಜೂಗ, ಮಲ್ಲಾಪುರ ಸುತ್ತಮುತ್ತ ಪ್ರವಾಹದಲ್ಲಿ ಹಾನಿಯಾದ ಹಲವು ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಆದರೆ, ತೊಂದರೆಗೆ ಒಳಗಾಗದ ಹಲವರುಪರಿಹಾರ ಪಡೆದಿದ್ದಾರೆ. ಇದಕ್ಕೆ ಕೆಲವು ಗ್ರಾಮ ಲೆಕ್ಕಿಗರೂ ಕೈಜೋಡಿಸಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಶಾಸಕಿ ರೂಪಾಲಿ ನಾಯ್ಕ ತಹಶೀಲ್ದಾರ್‌ಗೆ ಸೂಚಿಸಿದರು.

ವೇದಿಕೆಯಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಮೀಳಾ ನಾಯ್ಕ, ಉಪಾಧ್ಯಕ್ಷ ರವೀಂದ್ರ ಪವಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದಕುಮಾರ ಬಾಲಪ್ಪನವರ ಹಾಗೂ ತಹಶೀಲ್ದಾರ್ ಆರ್.ವಿ.ಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT